ದುಷ್ಕರ್ಮಿಗಳ ಗುಂಪು ಥಳಿತಗಳಿಗೆ ಬಲಿಯಾಗುತ್ತಿರುವ ಶ್ರೀರಾಮ

Update: 2019-06-28 05:12 GMT

ಹೆಚ್ಚುತ್ತಿರುವ ಗುಂಪು ಥಳಿತದ ಕುರಿತಂತೆ ನರೇಂದ್ರ ಮೋದಿಯವರು ಕೊನೆಗೂ ತಮ್ಮ ನೋವನ್ನು ದೇಶದ ಮುಂದೆ ತೋಡಿಕೊಂಡಿದ್ದಾರೆ. ಆದರೆ ಅವರೊಳಗಿನ ನೋವಿಗೆ ‘ಗುಂಪು ಥಳಿತ’ಮಾತ್ರ ಕಾರಣವಲ್ಲ. ಜಾರ್ಖಂಡನ್ನು ಗುಂಪು ಥಳಿತದ ತಾಣ ಎಂದು ಬಿಂಬಿಸುವುದನ್ನೂ ಅವರು ಜೊತೆಗೇ ಖಂಡಿಸಿದ್ದಾರೆ. ‘ಒಂದು ರಾಜ್ಯವನ್ನು ಅವಮಾನಿಸುವ ಅಧಿಕಾರ ನಮಗಾರಿಗೂ ಇಲ್ಲ’ ಎಂದು ಅವರು ಹೇಳಿದ್ದಾರೆ. ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಸಮನಾಗಿ ನೋಡಬೇಕು ಎನ್ನುವ ಹೆಚ್ಚುವರಿ ಸಲಹೆಯನ್ನೂ ನೀಡಿದ್ದಾರೆ. ಈ ಮೂಲಕ ಅವರು ಗುಂಪು ಥಳಿತ ಹಿಂಸಾಚಾರಗಳ ಕುರಿತ ಚರ್ಚೆಯ ಹಾದಿ ತಪ್ಪಿಸಿದ್ದಾರೆ. ಪ್ರಧಾನಿಯವರು ಪ್ರತಿಕ್ರಿಯಿಸಬೇಕಾದುದು ‘ಗುಂಪಿನಿಂದ ನಡೆಯುವ ಥಳಿತ ಮತ್ತು ಹತ್ಯೆ’ಗಳ ಕುರಿತಂತೆ. ಈ ಬಗ್ಗೆ ವಿಷಾದಿಸುವ ಮೂಲಕ ಪ್ರಧಾನಿಯ ಹೊಣೆಗಾರಿಕೆ ಮುಗಿಯುವುದಿಲ್ಲ. ದೇಶದ ಬೀದಿ ಬೀದಿಗಳಲ್ಲಿ ರೌಡಿಗಳು, ಗೂಂಡಾಗಳಿಂದ ನಡೆಯುತ್ತಿರುವ ಈ ಗುಂಪು ಹತ್ಯೆಗಳು ಈ ದೇಶದ ಕಾನೂನು ವ್ಯವಸ್ಥೆಯನ್ನು ನಗೆಪಾಟಲಿಗೀಡು ಮಾಡಿದೆ. ಮುಖ್ಯವಾಗಿ ಈ ದುಷ್ಕರ್ಮಿಗಳು ತಮ್ಮ ನೀಚ ಕೆಲಸಗಳಿಗೆ ನಿರ್ದಿಷ್ಟ ದೇವರ ಹೆಸರನ್ನು ಬಳಸುತ್ತಿದ್ದಾರೆ. ಇದನ್ನು ತಡೆದು, ಕಾನೂನು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಬೇಕಾದ ಪ್ರಧಾನಮಂತ್ರಿ ಜಾರ್ಖಂಡ್ ರಾಜ್ಯದ ವಕೀಲರಾಗಿ ಮಾತನಾಡಿರುವುದು, ಪ್ರಕರಣವನ್ನು ಅವರೆಷ್ಟು ಹಗುರವಾಗಿ ಸ್ವೀಕರಿಸಿದ್ದಾರೆ ಎನ್ನುವುದನ್ನು ಹೇಳುತ್ತದೆ.

ಇಂದು ದೇಶ ಜಾರ್ಖಂಡ್ ರಾಜ್ಯವನ್ನು ಟೀಕಿಸುತ್ತಿಲ್ಲ. ಅಲ್ಲಿರುವ ಸರಕಾರ ಮತ್ತು ಕಾನೂನು ವ್ಯವಸ್ಥೆಯನ್ನಷ್ಟೇ ಟೀಕಿಸುತ್ತಿದೆ. ಅಲ್ಲಿನ ಸ್ಥಿತಿಗೆ ಆ ರಾಜ್ಯದ ಒಟ್ಟಾರೆ ಜನರನ್ನು ಯಾರೂ ಹೊಣೆ ಮಾಡುತ್ತಿಲ್ಲ. ಬದಲಿಗೆ, ಅಲ್ಲಿನ ಕಾನೂನು ವ್ಯವಸ್ಥೆಯು ನಿರ್ದಿಷ್ಟ ಸಂಘಟನೆಗಳ ದುಷ್ಕರ್ಮಿಗಳೊಂದಿಗೆ ಪರೋಕ್ಷವಾಗಿ ಕೈ ಜೋಡಿಸಿರುವುದರ ಕುರಿತಂತೆ ದೇಶ ಆತಂಕ ವ್ಯಕ್ತಪಡಿಸುತ್ತಿದೆ. ಮೋದಿಯವರು ಜಾರ್ಖಂಡ್ ಸರಕಾರಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಬೇಕಾದ ಸಮಯ ಇದು. ಆದರೆ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು, ಒಟ್ಟಾರೆ ಜಾರ್ಖಂಡ್ ರಾಜ್ಯದ ಜನರನ್ನೇ ಗುರಾಣಿಯಾಗಿ ಬಳಸಿಕೊಳ್ಳಲು ಹೊರಟ ಮೋದಿ ಪರೋಕ್ಷವಾಗಿ ಗುಂಪು ಹಲ್ಲೆ, ಥಳಿತಗಳಿಗೆ ಕುಮ್ಮಕ್ಕು ನೀಡಿದ್ದಾರೆ. ಜಾರ್ಖಂಡ್ ಗುಂಪು ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಅವರು ಪಶ್ಚಿಮಬಂಗಾಳ ಮತ್ತು ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಕಡೆಗೆ ಕೈ ತೋರಿಸಿದ್ದಾರೆ. ಕೇರಳದಲ್ಲಿ ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಸಾರ್ವಜನಿಕರಿಂದ ಗುಂಪು ಥಳಿತಗಳೋ ಅಥವಾ ನಕಲಿ ಗೋರಕ್ಷಕರಿಂದ ಅಮಾಯಕರ ಮೇಲೆ ದಾಳಿಗಳೋ ನಡೆದ ಉದಾಹರಣೆಗಳಿಲ್ಲ. ಅಲ್ಲಿ ನಡೆಯುತ್ತಿರುವುದು ರಾಜಕೀಯ ಹಿಂಸಾಚಾರ. ಬಿಜೆಪಿ-ಸಿಪಿಎಂ ಕಾರ್ಯಕರ್ತರ ನಡುವೆ ನಡೆಯುತ್ತಿರುವ ಗ್ಯಾಂಗ್‌ವಾರ್‌ಗಳು ಅವು.

ರಾಜಕೀಯ ಕಾರ್ಯಕರ್ತರೇ ಪರಸ್ಪರರ ಮೇಲೆ ಎರಗುತ್ತಿದ್ದಾರೆ ಮತ್ತು ಸೇಡು ಪ್ರತಿಸೇಡುಗಳಿಗೆ ಬಲಿಯಾಗುತ್ತಿದ್ದಾರೆ. ಆದರೆ ಜಾರ್ಖಂಡ್ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಗುಂಪು ಥಳಿತ ಭಿನ್ನವಾದುದು. ಇಲ್ಲಿ ದಾಳಿಗೊಳಗಾಗುತ್ತಿರುವ ಜನರು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರಿದವರಲ್ಲ. ಅಮಾಯಕರು. ಅದಕ್ಕಿಂತಲೂ ಮುಖ್ಯವಾಗಿ ಅವರು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು. ಹಾಗೆಯೇ ದಾಳಿ ನಡೆಸುತ್ತಿರುವವರು ಮಹಾ ಧಾರ್ಮಿಕರೂ ಅಲ್ಲ. ಅವರಿಗೆ ಇಲ್ಲಿ ಶ್ರೀರಾಮನ ಹೆಸರಾಗಲಿ, ಗೋವಿನ ಮೇಲೆ ಪ್ರೀತಿಯಾಗಲಿ ನೆಪಮಾತ್ರ. ಕೋಮುದ್ವೇಷವಷ್ಟೇ ಈ ಹಿಂಸಾಚಾರಕ್ಕೆ ಮುಖ್ಯ ಕಾರಣ. ಯಾವುದೋ ಪ್ರಯಾಣಿಕನನ್ನು ತಡೆದು ‘ಜೈ ಶ್ರೀರಾಮ್’ ಎಂದು ಹೇಳಿ ಒಂದು ಗುಂಪು ಥಳಿಸಿ ಹತ್ಯೆ ಮಾಡುವುದಕ್ಕೂ, ರಾಜಕೀಯ ಕಾರ್ಯಕರ್ತರು ತಮ್ಮ ತಮ್ಮ ರಾಜಕೀಯ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಸೇಡು-ಪ್ರತಿ ಸೇಡುಗಳನ್ನು ತೀರಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಇಷ್ಟಕ್ಕೂ ಗುಂಪು ಥಳಿತದಲ್ಲಿ ಭಾಗಿಯಾಗಿರುವ ಗುಂಪುಗಳು ನಿರ್ದಿಷ್ಟ ರಾಜಕೀಯ ಪಕ್ಷದ ಜೊತೆಗೆ ಪರೋಕ್ಷ ಸಂಬಂಧವನ್ನೂ ಹೊಂದಿವೆ. ಶ್ರೀರಾಮ, ಗೋವಿನ ಹೆಸರಲ್ಲಿ ಸಮಾಜವನ್ನು ವಿಭಜಿಸಿ, ಈ ರಾಜಕೀಯ ಪಕ್ಷಕ್ಕೆ ಪೂರಕವಾತಾವರಣವನ್ನು ನಿರ್ಮಾಣ ಮಾಡಿಕೊಡುವುದು, ಜೊತೆಗೆ ಅಲ್ಪಸಂಖ್ಯಾತರಲ್ಲಿ ಭಯಭೀತಿಗಳನ್ನು ನಿರ್ಮಿಸುವುದು ಅವರ ಮುಖ್ಯ ಉದ್ದೇಶ. ಇವರೊಂದಿಗೆ ಪೊಲೀಸ್ ಇಲಾಖೆಗಳು ಕೈ ಜೋಡಿಸಿರುವುದು ಇನ್ನೊಂದು ಆತಂಕಕಾರಿ ಅಂಶವಾಗಿದೆ. ಆದುದರಿಂದಲೇ ಈ ಕೃತ್ಯಕ್ಕೆ ಸಂಬಂಧಿಸಿ ಒಂದು ರಾಜ್ಯವನ್ನಲ್ಲ ಆ ರಾಜ್ಯವನ್ನಾಳುವ ಸರಕಾರವನ್ನು ನಾವು ಹೊಣೆ ಮಾಡಲೇ ಬೇಕಾಗಿದೆ.

ಜಾರ್ಖಂಡ್ ರಾಜ್ಯವನ್ನು ಗುಂಪು ಥಳಿತದ ತಾಣವೆಂದು ಕರೆಯುವುದರ ಬಗ್ಗೆ ನೋವು ವ್ಯಕ್ತಪಡಿಸಿರುವ ಪ್ರಧಾನಿಯವರು, ಈ ಗುಂಪುಥಳಿತದಿಂದ ಶ್ರೀರಾಮನಿಗಾಗುತ್ತಿರುವ ಕಳಂಕದ ಬಗ್ಗೆ ವೌನವಾಗಿದ್ದಾರೆ. ಸಂಘಪರಿವಾರದ ವೇಷದಲ್ಲಿರುವ ಬೀದಿ ರೌಡಿಗಳು, ಗೂಂಡಾಗಳು ಅಮಾಯಕರನ್ನು ತಡೆದು ನಿಲ್ಲಿಸಿ ‘ ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲು ಒತ್ತಾಯಿಸುವ ಮೂಲಕ ಅವರು ಶ್ರೀರಾಮನನ್ನೇ ಅವಮಾನಿಸುತ್ತಿದ್ದಾರೆ. ರಾಮನ ಹೆಸರನ್ನು ಉಚ್ಚರಿಸುವುದಕ್ಕೇ ಅರ್ಹರಲ್ಲದ ದುಷ್ಕರ್ಮಿಗಳು ರಾಮನ ಹೆಸರಿನ ಜೊತೆಗೆ ಕತ್ತಿ ದೊಣ್ಣೆ ಹಿಡಿದು ಓಡಾಡುತ್ತಿರುವುದು ರಾಮನಿಗೆ ಎಸಗುವ ಅಪಚಾರವಾಗಿದೆ. ಈ ದೇಶದಲ್ಲಿ ರಾಮನಾಮವನ್ನು ಹರಡಿರುವುದು ಯಾವುದೇ ಸಂಘಪರಿವಾರದ ಗೂಂಡಾಗಳಲ್ಲ. ಹಲವು ಸಂತರು, ಸನ್ಯಾಸಿಗಳು ತಮ್ಮ ಹಾಡುಗಳ ಮೂಲಕ, ಭಜನೆಗಳ ಮೂಲಕ ರಾಮನ ಆದರ್ಶಗಳನ್ನು ಜನಮನದಲ್ಲಿ ಹರಡಿದರು. ರಾಮ ಕತೆಗಳು ದೇಶಾದ್ಯಂತ ಹರಡಲು ಇಂತಹ ವಿರಾಗಿಗಳೇ ಮುಖ್ಯ ಕಾರಣರು. ಮಹಾತ್ಮಾಗಾಂಧೀಜಿಯೂ ರಾಮನ ಪರಮ ಭಕ್ತ.

ಅವರೆಂದೂ ಶ್ರೀರಾಮನಿಗಾಗಿ ದೇವಸ್ಥಾನವನ್ನು ಕಟ್ಟಲು ಬಯಸಿದವರಲ್ಲ. ಅವರ ಪಾಲಿಗೆ ರಾಮನೆಂದರೆ ಗುಡಿಯೊಳಗಿರುವ ವಿಗ್ರಹವಾಗಿರಲಿಲ್ಲ. ಸತ್ಯಕ್ಕಾಗಿ, ಕೊಟ್ಟ ವಚನಕ್ಕಾಗಿ ತ್ಯಾಗಗಳನ್ನು ಮಾಡಿದ ರಾಮನ ಆದರ್ಶಗಳನ್ನು ಅವರು ಬದುಕಿನಲ್ಲಿ ಅನುಷ್ಠಾನಕ್ಕೆ ತಂದವರು. ಪ್ರತಿ ದಿನವೂ ರಾಮನನ್ನು ಭಜಿಸುತ್ತಿದ್ದ ಅವರ ಅಕ್ಕಪಕ್ಕದಲ್ಲಿ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫ್ಫಾರ್ ಖಾನ್‌ರಂತಹ ವಿದ್ವಾಂಸರು ಜೊತೆಗಿರುತ್ತಿದ್ದರು. ಹಿಂದುತ್ವ ಭಯೋತ್ಪಾದಕ ನಾಥೂರಾಂ ಗೋಡ್ಸೆಯ ಗುಂಡಿಗೆ ಸಿಕ್ಕಿ ಸಾಯುವ ಸಂದರ್ಭದಲ್ಲೂ ಅವರು ‘ಹೇ ರಾಮ್’ ಎಂದು ಉದ್ಗರಿಸಿಯೇ ಕಣ್ಮುಚಿದರು. ಆದರೆ ದುರದೃಷ್ಟಕ್ಕೆ, ಬೀದಿಯಲ್ಲಿ ಗುಂಪು ಗೂಡಿ ‘ಜೈ ಶ್ರೀರಾಮ್’ ಘೋಷಣೆ ಕೂಗುವ ಬಹುತೇಕ ದುಷ್ಕರ್ಮಿಗಳಿಗೆ ರಾಮಾಯಣದ ಆದರ್ಶ ಕತೆಯೇ ತಿಳಿದಿಲ್ಲ.

ರಾಮಾಯಣದ ಕುರಿತಂತೆ ಪ್ರಾಥಮಿಕ ಮಾಹಿತಿಯೂ ಅವರ ಬಳಿಯಿಲ್ಲ. ಅವರಿಗೆ ಕೊಲ್ಲುವುದಕ್ಕೆ, ಲೂಟಿ ಮಾಡುವುದಕ್ಕೆ, ಗಲಭೆ ಎಬ್ಬಿಸುವುದಕ್ಕಷ್ಟೇ ರಾಮನ ಹೆಸರು ಬೇಕಾಗಿದೆ. ರಾಮನ ಹೆಸರಲ್ಲಿ ಗಲಭೆಯೆಬ್ಬಿಸುವ ಈ ದುಷ್ಕರ್ಮಿಗಳು ರಾತ್ರಿಯಾದಂತೆಯೇ ಪಾನಮತ್ತರಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಮೋದಿ ಈ ಕಾರಣಕ್ಕಾಗಿ ನೊಂದು ಕೊಳ್ಳಬೇಕಾಗಿದೆ. ಗುಂಪು ಥಳಿತಗಳಿಗೆ ಬಲಿಯಾಗುತ್ತಿರುವವರು ಅಮಾಯಕರಷ್ಟೇ ಅಲ್ಲ, ಸ್ವತಃ ಶ್ರೀರಾಮನನ್ನೇ ದುಷ್ಕರ್ಮಿಗಳು ಮರಕ್ಕೆ ಕಟ್ಟಿ ಥಳಿಸುತ್ತಿದ್ದಾರೆ.ಈ ಅಪಚಾರವನ್ನು ತಡೆಯುವ ಕಾರಣಕ್ಕಾಗಿಯಾದರೂ ಪ್ರಧಾನಿ ಮೋದಿ ಗುಂಪು ಹತ್ಯೆಯನ್ನು ತಡೆಯಲು ಮಧ್ಯ ಪ್ರವೇಶಿಸಬೇಕು. ಇದರ ವಿರುದ್ಧ ಸ್ಪಷ್ಟ ಕಾನೂನನ್ನು ರೂಪಿಸಲು ಆ ರಾಜ್ಯಗಳಿಗೆ ಸೂಚನೆ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News