ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಆರು ತಿಂಗಳು ವಿಸ್ತರಣೆ: ಅಮಿತ್ ಶಾ

Update: 2019-06-28 14:32 GMT

ಹೊಸದಿಲ್ಲಿ, ಜೂ.28: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಆರು ತಿಂಗಳ ಕಾಲ ವಿಸ್ತರಿಸುವಂತೆ ಗೃಹ ಸಚಿವ ಅಮಿತ್ ಶಾ ಮಂಡಿಸಿದ ಶಾಸನಬದ್ಧ ನಿರ್ಣಯಕ್ಕೆ ಶುಕ್ರವಾರ ಲೋಕಸಭೆಯಲ್ಲಿ ಅಂಗೀಕಾರ ದೊರಕಿದೆ. ಆ ಪ್ರಕಾರ, ಜುಲೈ 3ರಿಂದ ಮುಂದಿನ ಆರು ತಿಂಗಳ ಕಾಲ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಲಿದೆ.

ರಾಜ್ಯದಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿದ ದಿನಾಂಕಗಳಂದು ಪ್ರಜಾಸತಾತ್ಮಕ, ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆಗಳು ನಡೆಯಲಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಸಂವಿಧಾನದ 370ನೇ ವಿಧಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ತಾತ್ಕಾಲಿಕ ಸ್ವಭಾವದ್ದಾಗಿದೆ ಮತ್ತು ಶಾಶ್ವತವಲ್ಲ ಎಂದು ಇದೇ ವೇಳೆ ಶಾ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಕಾಯ್ದೆ, 2019ಕ್ಕೆ ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಅಂಗೀಕಾರ ದೊರೆಯುವ ಮೂಲಕ ಹಿಂದಿನ ಸರಕಾರದ ಸುಗ್ರೀವಾಜ್ಞೆಯನ್ನು ಹಿಂಪಡೆಯಲಾಯಿತು.

ಈ ಕಾಯ್ದೆಯ ಮೂಲಕ, ಜಮ್ಮು ಮತ್ತು ಕಾಶ್ಮೀರದ ಅಂತರ್‌ರಾಷ್ಟ್ರೀಯ ಗಡಿಯ ಬಳಿ ನೆಲೆಸಿರುವ ಜನರಿಗೆ ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪ ಜೀವಿಸುವ ಜನರಂತೆಯೇ ವೃತ್ತಿಪರ ಕೋರ್ಸ್‌ಗಳಿಗೆ ನೇರ ನೇಮಕಾತಿ, ಭಡ್ತಿ ಮತ್ತು ಪ್ರವೇಶಗಳಲ್ಲಿ ಮೀಸಲಾತಿಯ ಲಾಭ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News