×
Ad

ನಿರುದ್ಯೋಗದ ಪ್ರಮಾಣ ಕ್ರಿಶ್ಚಿಯನ್ ಪುರುಷರಲ್ಲಿ ಅಧಿಕ: ಸರಕಾರ

Update: 2019-06-28 20:07 IST

ಹೊಸದಿಲ್ಲಿ, ಜೂ.28: ಇತರ ಧರ್ಮಗಳಿಗೆ ಹೋಲಿಸಿದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಕ್ರಿಶ್ಚಿಯನ್ ಪುರುಷರಲ್ಲಿ ನಿರುದ್ಯೋಗ ಪ್ರಮಾಣವು ಹೆಚ್ಚಾಗಿದೆ ಎಂದು ಕೇಂದ್ರ ಸರಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಮಹಿಳೆಯರಲ್ಲಿ , ನಗರ ಪ್ರದೇಶದಲ್ಲಿ ಸಿಖ್ ಮಹಿಳೆಯರಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಟಿಎಂಸಿ ಸಂಸದ ಪ್ರಸೂನ್ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಗೆ ಉತ್ತರವಾಗಿ ಅಲ್ಪಸಂಖ್ಯಾತ ವ್ಯವಹಾರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಂಕಿಅಂಶ ಸಹಿತ ಉತ್ತರ ನೀಡಿದರು.

ಅಲ್ಪಸಂಖ್ಯಾತ ಸಮುದಾಯದಲ್ಲಿರುವ ನಿರುದ್ಯೋಗ ಪ್ರಮಾಣದ ಕುರಿತು ಸಾಚಾರ್ ಸಮಿತಿ ವರದಿಯ ನಂತರದ ಪರಿಷ್ಕೃತ ಅಂಕಿ ಅಂಶ ಸರಕಾರದ ಬಳಿಯಿದೆಯೇ ಎಂದು ಬ್ಯಾನರ್ಜಿ ಪ್ರಶ್ನಿಸಿದ್ದರು. 2017-18ರ ಪೀರಿಯಾಡಿಕ್ ಲೇಬರ್‌ಫೋರ್ಸ್ ಸರ್ವೆ(ಪಿಎಲ್‌ಎಫ್‌ಎಸ್)ಯ ಅಂಕಿಅಂಶದ ಬಗ್ಗೆ ಸಚಿವ ನಖ್ವಿ ಲೋಕಸಭೆಗೆ ತಿಳಿಸಿದರು. ದೇಶದಾದ್ಯಂತ ಕಾರ್ಮಿಕರ ಕುರಿತು ಸಮೀಕ್ಷೆ ನಡೆಸುವ ಉದ್ದೇಶದಿಂದ 2017ರಲ್ಲಿ ಪಿಎಲ್‌ಎಫ್‌ಎಸ್ ಅನ್ನು ಆರಂಭಿಸಲಾಗಿದೆ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮತ್ತು ಸಿಖ್- ಈ ಪ್ರಮುಖ ಧರ್ಮಗಳ ಜನತೆಯ ಪ್ರಧಾನ ಸ್ಥಾನಮಾನ ಹಾಗೂ ಪೂರಕ ಸ್ಥಾನಮಾನವನ್ನು ಪರಿಗಣಿಸಿ ನಿರುದ್ಯೋಗ ಪ್ರಮಾಣದ ಸಮೀಕ್ಷೆ ನಡೆಸಲಾಗಿದೆ.

ಈ ವರದಿಯಂತೆ ಗ್ರಾಮೀಣ ಪ್ರದೇಶದಲ್ಲಿರುವ 6.9% ಕ್ರಿಶ್ಚಿಯನ್ ಪುರುಷರು ಹಾಗೂ ನಗರ ಪ್ರದೇಶದಲ್ಲಿರುವ 8.8% ಕ್ರಿಶ್ಚಿಯನ್ ಪುರುಷರು ನಿರುದ್ಯೋಗಿಗಳಾಗಿದ್ದು, ಇತರ ಧರ್ಮದ ಪುರುಷರಿಗಿಂತ ಇದು ಅಧಿಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ 5.7% ಹಿಂದೂ ಪುರುಷರು, 6.7% ಮುಸ್ಲಿಂ ಪುರುಷರು, 6.4% ಸಿಖ್ ಪುರುಷರು ನಿರುದ್ಯೋಗಿಗಳಾಗಿದ್ದಾರೆ. ನಗರ ಪ್ರದೇಶದಲ್ಲಿ ಶೇ.6.9ರಷ್ಟು ಹಿಂದು ಪುರುಷರು, ಶೇ.7.5ರಷ್ಟು ಮುಸ್ಲಿಂ ಪುರುಷರು, ಶೇ.7.2ರಷ್ಟು ಸಿಖ್ ಪುರುಷರು ನಿರುದ್ಯೋಗಿಗಳಾಗಿದ್ದಾರೆ. ಮಹಿಳೆಯರಲ್ಲಿ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಶೇ.16.9 ಸಿಖ್ ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಶೇ.8.8 ಸಿಖ್ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ.

ಇದೇ ರೀತಿ, ನಗರ ಪ್ರದೇಶದಲ್ಲಿ ವಾಸಿಸುವ ಶೇ.10 ಹಿಂದೂ ಮಹಿಳೆಯರು, ಶೇ.14.5 ಮುಸ್ಲಿಂ ಮಹಿಳೆಯರು, ಶೇ.15.6 ಕ್ರಿಶ್ಚಿಯನ್ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ.3.5 ಹಿಂದೂ ಮಹಿಳೆಯರು, ಶೇ.5.7 ಮುಸ್ಲಿಂ ಮಹಿಳೆಯರು, ಶೇ.5.7 ಸಿಖ್ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News