ನಕ್ಸಲರ ಜೊತೆ ಗುಂಡಿನ ಚಕಮಕಿ: ಸಿಆರ್‌ಪಿಎಫ್‌ನ ಇಬ್ಬರು ಯೋಧರು ಹುತಾತ್ಮ

Update: 2019-06-28 16:14 GMT

ಬಿಜಾಪುರ, ಜೂ. 28: ಚತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ನಕ್ಸಲೀಯರ ವಿರುದ್ಧದ ಎನ್‌ಕೌಂಟರ್ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಆರ್‌ಪಿಎಫ್‌ನ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್ ಯೋಧರು ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯ ನಡುವೆ ಸಿಲುಕಿಕೊಂಡು ಇಬ್ಬರು ಬಾಲಕಿಯರಲ್ಲಿ ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ಇನ್ನೋರ್ವಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಆರ್‌ಪಿಎಫ್‌ನ 199ನೇ ಬೆಟಾಲಿಯನ್ ತಂಡ ಮೋಟಾರ್ ಸೈಕಲ್‌ಗಳ ಮೇಲೆ ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆ ನಡೆಸುತ್ತಿದ್ದಾಗ ಕೇಶ್ಕುತುಲ್ ಗ್ರಾಮದ ಸಮೀಪ ಬೆಳಗ್ಗೆ 11 ಗಂಟೆಗೆ ಗುಂಡಿನ ಚಕಮಕಿ ನಡೆದಿದೆ ಎಂದು ಬಿಜಾಪುರ ಪೊಲೀಸ್ ಅಧೀಕ್ಷಕ ದಿವ್ಯಾಂಗ್ ಪಟೇಲ್ ಹೇಳಿದ್ದಾರೆ. ಮೋಟಾರ್ ಸೈಕಲ್ ಗಸ್ತು ತಂಡ ಭೈರಮಾರ್ಗ್ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೇಶ್ಕುತುಲ್ ಶಿಬಿರದಿಂದ ಭೈರಮಾರ್ಗ್ ಕಡೆ ಸಂಚರಿಸುತ್ತಿತ್ತು. ಗಸ್ತು ತಂಡ ಕೇಶ್ಕುತುಲ್ ಮೂಲಕ ಹಾದು ಹೋಗುತ್ತಿದ್ದಾಗ ಸಶಸ್ತ್ರಧಾರಿ ಬಂಡುಕೋರರ ಗುಂಪೊಂದು ಹೊಂಚು ದಾಳಿ ನಡೆಸಿತು. ಇದರಿಂದ ಗುಂಡಿನ ಚಕಮಕಿ ನಡೆಯಿತು ಎಂದು ಪಟೇಲ್ ತಿಳಿಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಮಧು ಪಾಟೀಲ್ ಹಾಗೂ ಹೆಡ್ ಕಾನ್ಸ್‌ಟೆಬಲ್ ತಾಜು ಒಟಿ ಹುತಾತ್ಮರಾಗಿದ್ದಾರೆ. ಇನ್ನೋರ್ವ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಮದನ್ ಪಾಲ್ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇಬ್ಬರು ಬಾಲಕಿಯರು ಪ್ರಯಾಣಿಸುತ್ತಿದ್ದ ಸರಕು ಸಾಗಾಟ ವಾಹನ ಗುಂಡಿನ ಚಕಮಕಿ ನಡೆಯುತ್ತಿದ್ದ ಪ್ರದೇಶದ ಮೂಲಕ ಹಾದು ಹೋಗುವ ಸಂದರ್ಭ ಸಿಲುಕಿಕೊಂಡಿತು. ಇದರಿಂದ ಓರ್ವ ಬಾಲಕಿ ಮೃತಪಟ್ಟು, ಇನ್ನೋರ್ವ ಬಾಲಕಿ ಗಾಯಗೊಂಡಳು ಎಂದು ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News