×
Ad

ಥಾಣೆ: ಬುಲೆಟ್ ಟ್ರೈನ್ ನಿಲ್ದಾಣದ ಮರುವಿನ್ಯಾಸಕ್ಕೆ ನಿರ್ಧಾರ

Update: 2019-06-29 20:02 IST

 ಮುಂಬೈ, ಜೂ.29: ಮಹಾರಾಷ್ಟ್ರದ ಥಾಣೆಯಲ್ಲಿರುವ ಬುಲೆಟ್ ರೈಲು ನಿಲ್ದಾಣದ ವಿನ್ಯಾಸವನ್ನು ಮರು ರೂಪಿಸುವುದಾಗಿ ಬುಲೆಟ್ ಟ್ರೈನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಏಜೆನ್ಸಿಯಾಗಿರುವ ಎನ್‌ಎಚ್‌ಸಿಆರ್‌ಸಿಎಲ್ ತಿಳಿಸಿದೆ.

  ಬುಲೆಟ್ ರೈಲು ನಿಲ್ದಾಣ ನಿರ್ಮಾಣದಿಂದ ಸುಮಾರು 53000 ಕಾಂಡ್ಲಾ ಜಾತಿಯ (ಮ್ಯಾನ್‌ಗ್ರೋವ್) ಮರಗಳು ನಾಶವಾಗಲಿವೆ ಎಂದು ಅಂದಾಜಿಸಲಾಗಿದ್ದು ಈ ಪ್ರಮಾಣವನ್ನು 32,044ಕ್ಕೆ ಇಳಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್(ಎನ್‌ಎಚ್‌ಆರ್‌ಎಸ್‌ಸಿಎಲ್)ನ ಆಡಳಿತ ನಿರ್ದೇಶಕ ಅಚಲ್ ಖರೆ ಹೇಳಿದ್ದಾರೆ.

   ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ವನ್ಯಜೀವಿ, ಅರಣ್ಯ ಹಾಗೂ ಸಿಆರ್‌ಝೆಡ್ ಕ್ಲಿಯರೆನ್ಸ್ ಪಡೆಯಲಾಗಿದೆ. ಅರಣ್ಯ ಇಲಾಖೆ ಕೆಲವು ಷರತ್ತು ವಿಧಿಸಿ ಕ್ಲಿಯರೆನ್ಸ್ ನೀಡಿದೆ. ಪರಿಸರ ಸಚಿವಾಲಯವು ಮ್ಯಾನ್‌ಗ್ರೋವ್ ಮರಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗದಂತೆ ಯೋಜನೆ ರೂಪಿಸಲು ಸಲಹೆ ನೀಡಿದೆ ಎಂದು ಅಚಲ್ ಖರೆ ಹೇಳಿದ್ದಾರೆ.

  ಥಾಣೆ ನಿಲ್ದಾಣದ ಸ್ಥಳವನ್ನು ಬದಲಿಸದೆ, ಮ್ಯಾನ್‌ಗ್ರೋವ್ ಮರಗಳ ಮೇಲೆ ಹೆಚ್ಚಿನ ಪರಿಣಾಮ ಬೀರದ ರೀತಿಯಲ್ಲಿ ಬುಲೆಟ್ ರೈಲು ನಿಲ್ದಾಣ ನಿರ್ಮಿಸುವ ಕುರಿತು ಜಪಾನ್‌ನ ಇಂಜಿನಿಯರ್‌ಗಳೊಡನೆ ಚರ್ಚಿಸಲಾಗಿದ್ದು ಅದರ ಪ್ರಕಾರ ಮಾರ್ಪಡಿಸಲಾಗಿದೆ . ವಾಹನ ಪಾರ್ಕಿಂಗ್ ಪ್ರದೇಶವನ್ನು ಸ್ಥಳಾಂತರಿಸಲಾಗಿದೆ. ಈ ಹಿಂದೆ 12 ಹೆಕ್ಟೇರ್ ಮ್ಯಾಂಗ್ರೋವ್ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದ್ದರೆ ಈಗ ಕೇವಲ 3 ಹೆಕ್ಟೇರ್ ಪ್ರದೇಶದ ಮೇಲೆ ಪರಿಣಾಮ ಬೀರಲಿದೆ ಎಂದು ಖರೆ ಹೇಳಿದ್ದಾರೆ.

 ಬುಲೆಟ್ ಟ್ರೈನ್ ಯೋಜನೆಗಾಗಿ ಕಡಿಯಲ್ಪಡುವ ಮ್ಯಾಂಗ್ರೋವ್ ಮರಗಳಿಗೆ 1:5 ರ ಪ್ರಮಾಣದಲ್ಲಿ ಪರಿಹಾರ ರೂಪಿಸಲು (ಒಂದು ಮರ ಕಡಿದರೆ ಐದು ಸಸಿ ನೆಡುವುದು) ನಿರ್ಧರಿಸಲಾಗಿದೆ. ಇದರಂತೆ 32,044 ಮ್ಯಾಂಗ್ರೋವ್ ಮರಗಳನ್ನು ಕಡಿದರೆ 1,60,000 ಹೊಸ ಸಸಿಗಳನ್ನು ನೆಡಲಾಗುವುದು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಎನ್‌ಎಚ್‌ಆರ್‌ಎಸ್‌ಸಿಎಲ್ ಭರಿಸುತ್ತದೆ ಎಂದವರು ಹೇಳಿದ್ದಾರೆ.

ಸೋಮವಾರ ಈ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಸಾರಿಗೆ ಸಚಿವ ದಿವಾಕರ್ ರಾವೊಟೆ, ಮುಂಬೈ-ಅಹ್ಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ನಿಂದಾಗಿ ಸುಮಾರು 13.36 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಸುಮಾರು 54,000 ಮ್ಯಾಂಗ್ರೋವ್ ಮರಗಳಿಗೆ ಹಾನಿಯಾಗಲಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News