ಮೋದಿ ಕೇದರನಾಥ ಗುಹೆವಾಸದ ನಂತರ ಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ: ಅಧಿಕಾರಿಗಳು

Update: 2019-06-29 15:24 GMT

ಡೆಹ್ರಾಡೂನ್, ಜೂ.29: ಪ್ರಧಾನಿ ನರೇಂದ್ರ ಮೋದಿಯವರು ಕೇದರನಾಥದ ಗುಹೆಯಲ್ಲಿ ಧ್ಯಾನ ಮಾಡಿದ ನಂತರ ಆ ಸ್ಥಳದ ಜನಪ್ರಿಯತೆ ಹೆಚ್ಚಾಗಿದ್ದು, ಅನೇಕ ಭಕ್ತರು ಜಿಎಂವಿಎನ್ ಜಾಲತಾಣಕ್ಕೆ ಭೇಟಿ ನೀಡಿ ಈ ಸೌಲಭ್ಯವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಧ್ಯಾನದ ಗುಹೆಯ ಜುಲೈಯಲ್ಲಿ ಸಂಪೂರ್ಣವಾಗಿ ಬುಕ್ ಮಾಡಲಾಗಿದ್ದು ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲೂ ವಿವಿಧ ದಿನಾಂಕಗಳಂದು ನಿಗದಿಪಡಿಸಲ್ಪಟ್ಟಿವೆ ಎಂದು ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಲಿ. (ಜಿಎಂವಿಎನ್)ನ ಪ್ರಧಾನ ಪ್ರಬಂಧಕ ಬಿ.ಎಲ್ ರಾಣಾ ತಿಳಿಸಿದ್ದಾರೆ. ಪ್ರಧಾನಿಯವರು ಇಲ್ಲಿಗೆ ಬಂದು ಧ್ಯಾನ ಮಾಡಿ ಹೋದಂದಿನಿಂದ ಒಂದು ದಿನವೂ ಈ ಗುಹೆ ಖಾಲಿ ಉಳಿದಿಲ್ಲ. ಯಾರಾದರೂ ಅದರಲ್ಲಿ ತಂಗಿರುತ್ತಾರೆ. ಸದ್ಯ ದೇಶದ ವಿವಿಧ ಭಾಗಗಳಿಂದ ಜನರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಈ ಸೌಲಭ್ಯವನ್ನು ನಿಗದಿಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಡ್ವಾಲ್ ಹಿಮಾಲಯದ 12,500 ಅಡಿ ಎತ್ತರದಲ್ಲಿ ಶಾಂತ ಪರಿಸರದಲ್ಲಿರುವ ಈ ಗುಹೆಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡ ಜಿಲ್ಲಾಡಳಿತ ಇನ್ನೂ ಮೂರು ಧ್ಯಾನ ಗುಹೆಗಳನ್ನು ನಿರ್ಮಿಸಲು ಯೋಚಿಸುತ್ತಿದೆ ಎಂದು ರುದ್ರಪ್ರಯಾಗ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗೇಶ್ ಗಿಲ್ಡಿಯಲ್ ತಿಳಿಸಿದ್ದಾರೆ.

 ಪ್ರಧಾನಿ ಮೋದಿ ಪದೇಪದೆ ಕೇದರನಾಥಕ್ಕೆ ಬೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಉತ್ತಮಗೊಳಿಸಲಾಗಿತ್ತು ಮತ್ತು ಅದರೊಂದಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಲು ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಈ ವರ್ಷ ಮೇ 9ರಂದು ಕೇದರನಾಥಕ್ಕೆ ಭಕ್ತರಿಗೆ ಪ್ರವೇಶ ಆರಂಭಿಸಲಾಗಿತ್ತು. ದೇವಾಲಯವನ್ನು ಭಕ್ತರಿಗೆ ತೆರೆದ 50 ದಿನಗಳಲ್ಲೇ 7,62,000 ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News