ಚಂದ್ರಬಾಬು ನಾಯ್ಡು ಭದ್ರತೆ ಹಿಂತೆಗೆದ ಜಗನ್ ಸರಕಾರ

Update: 2019-06-29 15:52 GMT

ಹೈದರಾಬಾದ್, ಜೂ. 29: ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸರಕಾರ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಶುಕ್ರವಾರ ಮತ್ತಷ್ಟು ಕಡಿಮೆ ಮಾಡಿದೆ.

ನಾಯ್ಡು ಅವರಿಗೆ ನೀಡಲಾಗಿದ್ದ ಇಬ್ಬರು ಶಸಸ್ತ್ರ ಮೀಸಲು ಇನ್ಸ್‌ಪೆಕ್ಟರ್ ನೇತೃತ್ವದ 15 ಸದಸ್ಯರು ಇರುವ ವಿಶೇಷ ಪೊಲೀಸ್ ತಂಡದ ಹಾಗೂ ಇನ್ನಿಬ್ಬರು ಮುಖ್ಯ ಭದ್ರತಾ ಅಧಿಕಾರಿಗಳ ಭದ್ರತೆಯನ್ನು ರಾಜ್ಯ ಸರಕಾರ ಹಿಂದೆ ತೆಗೆದಿದೆ ಎಂದು ಟಿಡಿಪಿಯ ನಿಕಟವರ್ತಿ ಮೂಲಗಳು ತಿಳಿಸಿವೆ.

ಚಂದ್ರಬಾಬು ನಾಯ್ಡು ಅವರಿಗೆ ಈಗ ನಾಲ್ವರು ಕಾನ್‌ಸ್ಟೆಬಲ್‌ಗಳ ಭದ್ರತೆಯನ್ನು ಮಾತ್ರ ಒದಗಿಸಲಾಗಿದೆ. ಹಗಲು ಇಬ್ಬರು ಕಾನ್‌ಸ್ಟೆಬಲ್‌ಗಳು ರಕ್ಷಣೆ ನೀಡಿದರೆ, ರಾತ್ರಿ ಇನ್ನಿಬ್ಬರು ರಕ್ಷಣೆ ನೀಡುತ್ತಾರೆ. ಆದರೆ, 2003 ಅಕ್ಟೋಬರ್‌ಲ್ಲಿ ತಿರುಮಲ ತಪ್ಪಲಿನ ಅಲಿಪಿರಿಯಲ್ಲಿ ಮಾವೋಗಳು ದಾಳಿ ಮಾಡಿದ ಬಳಿಕ ಕೇಂದ್ರ ಸರಕಾರ ನೀಡಿದ ಎನ್‌ಎಸ್‌ಜಿ ಕಮಾಂಡೊಗಳನ್ನು ಒಳಗೊಂಡ ಝಡ್ ಫ್ಲಸ್ ಸೆಕ್ಯುರಿಟಿ ಮುಂದುವರಿಯಲಿದೆ.

ಇದೇ ರೀತಿ ನಾಯ್ಡು ಅವರ ಅಮರಾವತಿಯಲ್ಲಿ ಹಾಗೂ ಹುಟ್ಟೂರಾದ ಚಿತ್ತೂರ್ ಜಿಲ್ಲೆಯ ನರವರಿಪಲ್ಲೆಯಲ್ಲಿರುವ ನಿವಾಸಕ್ಕೆ ಒದಗಿಸಲಾದ ಭದ್ರತೆಯನ್ನು ಕೂಡ ಹಿಂದೆ ತೆಗೆಯಲಾಗಿದೆ. ಅವರ ಕುಟುಂಬಕ್ಕೆ ನೀಡಿದ್ದ ಭದ್ರತೆಯನ್ನು ಇತ್ತೀಚೆಗೆ ಹಿಂದೆ ತೆಗೆಯಲಾಗಿತ್ತು. ಅವರ ಪುತ್ರ ನಾರಾ ಲೋಕೇಶ್ ಅವರಿಗೆ ಕೇವಲ ಇಬ್ಬರು ಕಾನ್‌ಸ್ಟೆಬಲ್‌ಗಳ ಭದ್ರತೆಯನ್ನು ಮಾತ್ರ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News