‘ವಿವೇಕ’ ತಡೆಯುವ ಅವಿವೇಕ ಪಟವರ್ಧನ್

Update: 2019-06-29 18:28 GMT

ಹೇಳಿರುವಂತೆ ದೇಶದಲ್ಲಿರುವ ಪರಿಸ್ಥಿತಿ ಮತ್ತು ಜನರ ನೋವಿನ ದನಿಗಳು ‘ವಿವೇಕ್’ನಲ್ಲಿ ಸಹಜವಾಗಿ ಹೊರಜಗತ್ತಿಗೆ ತೆರೆದುಕೊಂಡಿವೆ. ಕೇರಳ ಚಿತ್ರೋತ್ಸವದಲ್ಲಿ ಇದರ ಪ್ರದರ್ಶನವನ್ನು ನಿಷೇಧಿಸುವ ಸರಕಾರದ ನಿರ್ಧಾರ ಅವಿವೇಕತನದ್ದು. ಚಿತ್ರದ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುವುದರಿಂದ ತನ್ನ ಮಾನ ಮುಚ್ಚಿಕೊಳ್ಳುತ್ತೇನೆ ಎಂದು ಸರಕಾರ ಭಾವಿಸಿದ್ದರೆ ಅದು ತಪ್ಪು.


ಜ್ಞಾನ-ವಿವೇಕಗಳಿಂದ ಇಂಬುಗೊಂಡು ಬೆಳೆದುಬಂದಿರುವ ವೈಜ್ಞಾನಿಕ ಮನೋಭಾವದ ಈ ಯುಗದಲ್ಲೂ ನಂಬಿಕೆಗಳದೇ ಮೇಲುಗೈ. ಅಭಿವೃದ್ಧಿಶೀಲ ರಾಷ್ಟ್ರಗಳಂತೂ ಅಂಧನಂಬಿಕೆ ಮತ್ತು ಧರ್ಮ ಯುದ್ಧಗಳಿಗೆ ಬಲಿಪಶುಗಳಾಗುತ್ತಿರುವುದು ಪ್ರಸಕ್ತ ವಿಶ್ವದ ಮುಖ್ಯವಾದ ವಿಷಾದನೀಯ ವಿದ್ಯಮಾನಗಳ ಲ್ಲೊಂದು. ಸಮಾನತಾ ತತ್ವ-ಮೌಲ್ಯಗಳ ಪತನದ ನಂತರ ಪ್ರಜಾಪ್ರಭುತ್ವವೇ ಇವುಗಳ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿರುವ, ನಲುಗುತ್ತಿರುವ ಸಂದರ್ಭವಿದು. ನಮ್ಮ ದೇಶದಲ್ಲೂ ವೈಜ್ಞಾನಿಕ ಚಂತನೆ, ವಿವೇಕಗಳು ಹಿಂದೆ ಸರಿದು ಮೂಢನಂಬಿಕೆ ಮತ್ತು ಅಂಧಾಭಿಮಾನಗಳು ಅವುಗಳ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ, ಆಳುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ‘ವಿವೇಕ್’ ಎಂಬ ಆನಂದ ಪಟವರ್ಧನ್ ಅವರ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿರುವುದು. ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿ, ತಿರುವನಂತಪುರದಲ್ಲಿ ಕೇರಳ ಚಲನಚಿತ್ರ ಅಕಾಡಮಿ ಏರ್ಪಡಿಸಿರುವ ಸಾಕ್ಷ್ಯ ಚಿತ್ರಗಳು ಮತ್ತು ಕಿರು ಚಿತ್ರಗಳ ಅಂತರ್‌ರಾಷ್ಟ್ರೀಯ ಉತ್ಸವದಲ್ಲಿ ‘ವಿವೇಕ್’ ಪ್ರದರ್ಶನಕ್ಕೆ ಅವಕಾಶಮಾಡಿಕೊಟ್ಟಿರುವುದು ಸಮಾಧಾನದ ಸಂಗತಿ.

‘ವಿವೇಕ್’ ಸಾಕ್ಷ್ಯ ಚಿತ್ರವನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲು ಅನುಮತಿ ನಿರಾಕರಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಜ್ಞೆಯನ್ನು ಪ್ರಶ್ನಿಸಿ ಕೇರಳ ಚಲಚಿತ್ರ ಅಕಾಡಮಿ ಸಲ್ಲಿಸಿದ ಅರ್ಜಿಯನ್ನು ಮಾನ್ಯಮಾಡಿರುವ ಹೈಕೋರ್ಟ್ ಚಿತ್ರೋತ್ಸವದಲ್ಲಿ ಮಾತ್ರ ಈ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಸಿನಿಮಾಟೊಗ್ರಾಫ್ ಶಾಸನದ 9ನೆ ವಿಧಿಯನ್ವಯ ಈ ಚಿತ್ರಕ್ಕೆ ಸೆನ್ಸಾರ್ ಅನುಮತಿಯಿಂದ ವಿನಾಯಿತಿ ನೀಡಬೇಕೆಂಬ ಮನವಿಯನ್ನು ಸರಕಾರ ತಿರಸ್ಕರಿಸಿರುವುದಕ್ಕೆ ಕಾರಣಗಳೇನೆಂಬುದು ತಿಳಿದು ಬಂದಿಲ್ಲ. ಏನಿದು ಈ ‘ವಿವೇಕ್’ ಚಿತ್ರ?
ಅದು ಏನನ್ನು ಬಿಂಬಿಸುತ್ತಿದೆ?
ಈ ಸಾಕ್ಷ್ಯಚಿತ್ರದ ನಿರ್ದೇಶಕರು ಆನಂದ ಪಟವರ್ಧನ್.
ಯಾರು ಈ ಆನಂದ ಪಟವರ್ಧನ್?
 ಗಾಂಧೀ ಪ್ರಣೀತ ಜೀವನ ಮೌಲ್ಯಗಳಲ್ಲಿ, ವಿಶೇಷವಾಗಿ ಅಹಿಂಸೆ ಮತ್ತು ಜಾತ್ಯತೀತತೆಗಳಲ್ಲಿ ಅಚಲ ಶ್ರದ್ಧೆಯುಳ್ಳ ವಿಚಾರವಾದಿ ಚಿಂತಕ ಆನಂದ ಪಟವರ್ಧನ್ ಸೃಜನಶೀಲ ಕಲಾವಿದರು. ಚಲಚ್ಚಿತ್ರ ಅವರ ಅಭಿವ್ಯಕ್ತಿ ಮಾಧ್ಯಮ. ರಾಜಕಾರಣ ಮತ್ತು ಮಾನವ ಹಕ್ಕುಗಳನ್ನು ಪ್ರಧಾನ ವಸ್ತುವಾಗುಳ್ಳ ಚಿತ್ರಗಳ ನಿರ್ದೇಶಕರಾಗಿ ಅಂತರ್‌ರಾಷ್ಟ್ರೀಯ ಖ್ಯಾತಿಗೆ ಪಾತ್ರರಾಗಿರುವ ಆನಂದ ಪಟವರ್ಧನ್ ಅವರ ಪ್ರಮುಖ ಚಿತ್ರಗಳು: ‘ಬಾಂಬೆ-ಅವರ್ ಸಿಟಿ-ಹಮಾರ ಶಹರ್’(1985), ‘ಇನ್ ಮೆಮೊರಿ ಆಫ್ ಫ್ರೆಂಡ್ಸ್’(1990), ‘ಇನ್ ದಿ ನೇಮ್ ಆಫ್ ಗಾಡ್-ರಾಮ್ ಕೆ ನಾಮ್’(1992), ‘ಫಾದರ್ ಸನ್ ಹೋಲಿ ವಾರ್’(1995), ‘ನರ್ಮದಾ ಡೈರಿ’(1995), ‘ವಾರ್ ಆ್ಯಂಡ್ ಪೀಸ್’(2002), ‘ಜೈ ಭೀಮ್ ಕಾಮ್ರೇಡ್’(2011). ಜಾತ್ಯತೀತ ಮನೋವೃತ್ತಿಯ ಆನಂದ ಪಟವರ್ಧನ್ ಹಿಂದುತ್ವ ಸಿದ್ಧ್ದಾಂತದ ಕಟುಟೀಕಾಚಾರ್ಯರೂ ಹೌದು. ಅವರ ಇನ್ನೊಂದು ಮಹತ್ವದ ಸಾಕ್ಷ್ಯ ಚಿತ್ರ ತುರ್ತು ಪರಿಸ್ಥಿತಿ ವಿರುದ್ಧ ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್ ಸಂಘಟಿಸಿದ ಜನಾಂದೋಲನವನ್ನು ಕುರಿತದ್ದು

‘ವಿವೇಕ್’(ರೀಸನ್) ಇನ್ನೂರ ಅರವತ್ತು ನಿಮಿಷಗಳ ಒಂದು ಸುದೀರ್ಘ ಸಾಕ್ಷ್ಯ ಚಿತ್ರ. ಎಂಟು ಅಧ್ಯಾಯಗಳಲ್ಲಿರುವ ‘ವಿವೇಕ್’ ಪ್ರಪಂಚದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯ ಭಾರತದ ಬ್ರಹ್ಮಂಡದೊಳಗಣ ಒಂದು ಪಯಣ ಎನ್ನುತ್ತಾರೆ ಅಂತರ್‌ರಾಷ್ಟ್ರೀಯ ಚಿತ್ರ ವಿಮರ್ಶಕರು. ಒಂದು ಕಾಲದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿದ್ದ, ಯುದ್ಧೋತ್ತರ ವಿಶ್ವಕ್ಕೆ ಅಹಿಂಸಾ ತತ್ವದಲ್ಲಿ ಮಾರ್ಗದರ್ಶಿಯಾಗಿದ್ದ ಭಾರತದಲ್ಲಿ ಇಂದು ಅಮಾನುಷ ಕೊಲೆ, ಹಿಂಸಾಚಾರಗಳಿಂದ ಹಾಗೂ ಅಮಾಯಕ ಮನಸ್ಸುಗಳ ಬುದ್ಧಿಭಾವಗಳನ್ನು ನಿಯಂತ್ರಿಸುವ ಮೂಲಕ ಹೇಗೆ ಜಾತ್ಯತೀತತೆಯನ್ನು ಹಾಗೂ ಪ್ರಜಾಪ್ರಭುತ್ವವನ್ನು ವ್ಯವಸ್ಥಿತವಾಗಿ ನಾಶಗೊಳಿಸಲಾಗುತ್ತಿದೆ ಎಂಬುದನ್ನು ಬಿಂಬಿಸಿರುವ ‘ವಿವೇಕ್’ ನ ದೃಶ್ಯ ನಿರೂಪಣೆ ಭಯ-ಭೀತಿ-ವಿಷಾದಗಳನ್ನು ಉಕ್ಕಿಸುವ ಪರಿಯಲ್ಲಿದೆ. ಆದರೆ ಇಲ್ಲಿ ಹತಾಶೆಗೆ ಆಸ್ಪದವಿಲ್ಲ. ರಾಷ್ಟ್ರೀಯತೆಯ ಮಾರುವೇಷ ತೊಟ್ಟ ಬ್ರಾಹ್ಮಣತ್ವ ತನ್ನ ದಾಳಿಕೋರ ಪಡೆಗಳನ್ನು ‘ಛೂ’ ಬಿಡುತ್ತದಾದರೂ ಪ್ರತಿಭಟನೆಯ ದನಿ ಇನ್ನೂ ಭಾರತದಲ್ಲಿ ಕುಗ್ಗಿಲ್ಲ. ಅಂಜದ-ಅಳುಕದ ಧೀರ ವಿಚಾರವಾದಿಯೊಬ್ಬನ ಕೊಲೆಯಾದಲ್ಲಿ ಅಥವಾ ಒಬ್ಬ ವಿಚಾರವಾದಿಯನ್ನು ಆತ್ಮಹತ್ಯೆಗೆ ದೂಡಿದಲ್ಲಿ ಅವರ ಜಾಗದಲ್ಲಿ ಹೆಚ್ಚು ಮಂದಿ ವಿಚಾರವಾದಿಗಳು ಹುಟ್ಟಿಕೊಂಡು ಮೂಢನಂಬಿಕೆ-ಅವೈಜ್ಞಾನಿಕತೆಗಳ ವಿರುದ್ಧ ಹೋರಾಟ ಮುಂದುವರಿಸಿರುವ ಇತ್ಯಾತ್ಮಕ ಬೆಳವಣಿಗೆಯನ್ನೂ ಚಿತ್ರ ಬಿಂಬಿಸುತ್ತದೆ. ಆದ್ದರಿಂದ ‘ವಿವೇಕ್’(ರೀಸನ್) ಎಚ್ಚರಿಕೆ ನೀಡುವ ಚಿತ್ರವೂ ಹೌದು ಭರವಸೆಯ ಬೆಳಕೂ ಹೌದು ಎನ್ನುತ್ತಾರೆ ವಿಮರ್ಶಕರು. 2013ರ ಆಗಸ್ಟ್ 20ರಂದು ಹಿಂದೂ ಮೂಲಭೂತವಾದಿ ಗಳೆಂದು ಹೇಳಲಾದವರ ಗುಂಡಿನ ದಾಳಿಯಿಂದ ಹತರಾದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರಿಂದ ‘ವಿವೇಕ್’ ಚಿತ್ರದ ಮೊದಲ ಅಧ್ಯಾಯ ಶುರುವಾಗುತ್ತದೆ.

ಶುರುವಿಗೇ ಚಿತ್ರವು,- ‘‘ಎಲ್ಲದರ ಹಿಂದೆಯೂ ಒಂದು ಕಾರಣವಿರುತ್ತದೆ, ಒಂದು ವಿವೇಕವಿರುತ್ತದೆ. ಧರ್ಮದಂತೆ ವಿಜ್ಞಾನವು ಅಂತಿಮ ಸತ್ಯದೊಂದಿಗೆ ವಿರಮಿಸುವುದಿಲ್ಲ. ವಿಜ್ಞಾನ ಕೊನೆಯಿಲ್ಲದ, ಅಂತಿಮವಲ್ಲದ ಸತ್ಯ ಮತ್ತು ಕಾರಣಗಳ ಅನ್ವೇಷಣೆಯಲ್ಲಿ ಸದಾ ನಿರತವಾಗಿರುತ್ತದೆ’’ ಎನ್ನುವ ದಾಭೋಲ್ಕರ್ ವಿಚಾರಗಳನ್ನು ಧ್ವನಿಸುವ ಚಿತ್ರಿಕೆಯನ್ನು ಪ್ರಸ್ತುತ ಪಡಿಸುತ್ತದೆ. ‘ವಿವೇಕ್’ನ ಎರಡನೆಯ ಅಧ್ಯಾಯವನ್ನು ಕಮ್ಯುನಿಸ್ಟ್ ಪಕ್ಷದ ನಾಯಕ ಗೋವಿಂದ ಪನ್ಸಾರೆಯವರಿಗೆ ಅರ್ಪಿಸಲಾಗಿದೆ. 2015ರ ಫೆಬ್ರವರಿ 16ರಂದು ಕೋಲ್ಕತಾದಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಪನ್ಸಾರೆಯವರು ದಾಳಿಕೋರರ ಗುಂಡಿಗೆ ಬಲಿಯಾದರು.

 ಆನಂದ ಪಟವರ್ಧನ್ ಅವರು ‘ವಿವೇಕ್’ ಚಿತ್ರದಲ್ಲಿ ಹಿಂಸಾಚಾರದ ಹಿಂದಿರುವ ಮನಸ್ಸುಗಳನ್ನು, ಪ್ರವೃತ್ತಿಗಳನ್ನು, ಸಂಘಟನೆಗಳನ್ನು ಶೋಧಿಸಿ ನೋಡುವ ಪ್ರಯತ್ನವನ್ನೂ ಮಾಡಿದ್ದಾರೆ. ‘ಸನಾತನ ಸಂಸ್ಥಾ’, ‘ಅಭಿನವ ಭಾರತ’ದಂಥ ಕೇಸರಿ ತೀವ್ರಗಾಮಿ ಸಂಸ್ಥೆಗಳನ್ನು ತಮ್ಮ ಕ್ಯಾಮರಾದ ಶೋಧನಾತ್ಮಕ ದೃಷ್ಟಿಯ ಕಣ್ಣುಗಳಿಂದ ಪರೀಕ್ಷಿಸಿ ಅವುಗಳ ಒಳನೋಟಗಳನ್ನು ಸೆರೆಹಿಡಿದಿದ್ದಾರೆ. ಅತಿರೇಕದ ರಾಷ್ಟ್ರೀಯತೆಯ ಉಗಮ, ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ನಡೆದಿರುವ ಮಾರಕ ಹಲ್ಲೆಗಳು, ಗುಂಪು ಹಿಂಸಾಚಾರಗಳು, ಗುಂಪು ಥಳಿತ ಹತ್ಯೆಗಳು, ವಿಶ್ವವಿದ್ಯಾನಿಲಯಗಳ ಮೇಲೆ ನಡೆದಿರುವ ಆಕ್ರಮಣಗಳು, ಜಾತಿ ಆಧಾರಿತ ಭೇದಭಾವಗಳು, ರೋಹಿತ ವೆಮುಲಾ ಆತ್ಮಹತ್ಯಾ ಪ್ರಕರಣ ಇತ್ಯಾದಿಯಾಗಿ ಮೋದಿ ಸರಕಾರ ಬಂದನಂತರದ ಎಲ್ಲ ಅಮಾನವೀಯ ವಿದ್ಯಮಾನಗಳನ್ನೂ ಪಟವರ್ಧನ್ ವಸ್ತುನಿಷ್ಠವಾಗಿ ಈ ಚಿತ್ರದಲ್ಲಿ ಬಿಂಬಿಸಿದ್ದಾರೆ. ಇದು ಮೋದಿಯವರ ಸರಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ‘ವಿವೇಕ್’ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಶಾಖೆಗೆ ಇನ್ನೇನು ಕಾರಣ ಬೇಕು?
ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ. ಅವರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ನಡೆದಿವೆ, ಗುಂಪು ಥಳಿತದಿಂದ ಅಲ್ಪಸಂಖ್ಯಾತರ ಹತ್ಯೆಗಳು ನಡೆದಿವೆ ಎನ್ನುವ ಅಮೆರಿಕ ಮೊದಲಾದ ವಿದೇಶಿ ಸರಕಾರಗಳ ಅಂಬೋಣವನ್ನು ಮೋದಿಯವರ ಸರಕಾರ ಅಲ್ಲಗಳೆಯಬಹುದು. ಆದರೆ ದೇಶದ ಆತ್ಮಸಾಕ್ಷಿಯಂತಿರುವ ಸಾಹಿತಿ ಕಲಾವಿದರುಗಳ ಈ ಸಾಕ್ಷ್ಯ ದಾಖಲೀಕರಣವನ್ನು ಅಲ್ಲಗಳೆಯಲಾದೀತೆ? ಕಲಾವಿದನಾದವನು ತನ್ನಸುತ್ತಲ ಆಗುಹೋಗುಗಳಿಗೆ ಸಂದಿಸದೇ ಇರಲಾರ. ಆನಂದ ಪಟವರ್ಧನ್ ಹೇಳಿರುವಂತೆ-

‘‘ಗಾಂಧಿಯವರನ್ನು ಕೊಂದ ಸಿದ್ಧಾಂತವೇ ದಾಭೋಲ್ಕರ್ ಮತ್ತಿತರರ ಹತ್ಯೆಗೈದಿದೆ. ನಮ್ಮ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು, ದುರಾಚಾರ-ದೌರ್ಜನ್ಯಗಳನ್ನು, ಹಿಂಸಾಚಾರ ಗಳನ್ನು ನೋಡಿಕೊಂಡು ಸುಮ್ಮನೆ ಕುಳಿತಿಕೊಳ್ಳಲಾಗದು. ಇಂಥ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಯಾವತ್ತೋ ಒಂದು ದಿನ; ಕಾಲಮಾನದ ಯಾವುದೋ ಒಂದು ಘಟ್ಟದಲ್ಲಿ ನೀವು ಹೇಳುತ್ತೀರಿ, ನಾನು ಚಿತ್ರೀಕರಿಸಿರುವುದು ಸತ್ಯವೆಂದು....
ನನ್ನ ಚಿತ್ರೀಕರಣ ಏನಾಗಲಿದೆ ಎಂಬ ಪೂರ್ವಕಲ್ಪಿತ ಸ್ಪಷ್ಟ ಗ್ರಹಿಕೆಗಳಿಂದ ಶುರುವಾಗುವುದಿಲ್ಲ. ಜನರ ಮುಂದೆ ನನ್ನ ಕ್ಯಾಮರಾ ಮತ್ತು ಮೈಕ್ ಹಿಡಿಯುತ್ತೇನೆ. ಜನ ಮಾತನಾಡಲಾರಂಭಿಸುತ್ತಾರೆ.ಅವರ ಅಂತರಂಗ ತೆರೆದುಕೊಳ್ಳುತ್ತದೆ. ವಿದ್ಯಮಾನಗಳು, ಘಟನೆಗಳು ಬಹಿರಂಗಗೊಳ್ಳುತ್ತವೆ. ಸಂಕಲನ ಹಂತದಲ್ಲಿ ಇವೆಲ್ಲದರ ಹಿಂದಿನ ಒಂದು ಸಂಚು, ಒಂದು ಪಿತೂರಿ ಇರುವುದರ ವಿನ್ಯಾಸ ನನಗೆ ಗೋಚರಿಸುತ್ತಾ ಹೋಗುತ್ತದೆ. ಕೊಂಡಿಗಳು ಬೆಸೆದುಕೊಳ್ಳುವುದನ್ನು ನೀವು ಕಾಣುವಿರಿ’’

   ಪರಿಸ್ಥಿತಿ ಹೀಗಿರುವಾಗ ಸಂವೇದನಾಶೀಲನಾದ ಕಲಾವಿದ ಇದಕ್ಕೆ ಕಣ್ಣುಮುಚ್ಚಿಕೊಂಡು ಕುಳಿತಿರಲಾದೀತೆ? ಪಟವರ್ಧನ್ ಹೇಳಿರುವಂತೆ ದೇಶದಲ್ಲಿರುವ ಪರಿಸ್ಥಿತಿ ಮತ್ತು ಜನರ ನೋವಿನ ದನಿಗಳು ‘ವಿವೇಕ್’ನಲ್ಲಿ ಸಹಜವಾಗಿ ಹೊರಜಗತ್ತಿಗೆ ತೆರೆದುಕೊಂಡಿವೆ. ಕೇರಳ ಚಿತ್ರೋತ್ಸವದಲ್ಲಿ ಇದರ ಪ್ರದರ್ಶನವನ್ನು ನಿಷೇಧಿಸುವ ಸರಕಾರದ ನಿರ್ಧಾರ ಅವಿವೇಕತನದ್ದು. ಚಿತ್ರದ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುವುದರಿಂದ ತನ್ನ ಮಾನ ಮುಚ್ಚಿಕೊಳ್ಳುತ್ತೇನೆ ಎಂದು ಸರಕಾರ ಭಾವಿಸಿದ್ದರೆ ಅದು ತಪ್ಪು. ‘ವಿವೇಕ್’ ಈಗಾಗಲೇ ದೇಶವಿದೇಶಗಳಲ್ಲಿ ಪ್ರದರ್ಶನಗೊಂಡು ಇಂದಿನ ಭಾರತದ ವಾಸ್ತವ ಸ್ಥಿತಿ ಜಗತ್ತಿನ ಕಣ್ಣೆದುರು ಬಟಾಬಯಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಟೊರೆಂಟೋ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವಿವೇಕ್’ನ ಪ್ರಥಮ ಪ್ರದರ್ಶನ ನಡೆಯಿತು. 2018ರಲ್ಲಿ ಆಮ್‌ಸ್ಟರ್‌ಡಮ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಸಾಕ್ಷ್ಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪೂರ್ಣಾವಧಿ ಸಾಕ್ಷ್ಯ ಚಿತ್ರಕ್ಕೆ ನೀಡಲಾಗುವ ಪ್ರಶಸ್ತಿ ಪಡೆಯಿತು. ಅದೇ ವರ್ಷ ಲಾಸ್‌ಏಂಜಲ್ಸ್‌ನಲ್ಲಿ ನಡೆದ ಭಾರತೀಯ ಚಲಚ್ಚಿತ್ರೋತ್ಸವದಲ್ಲಿ ಮತ್ತೊಂದು ಪ್ರಶಸ್ತಿಗೆ ಪಾತ್ರವಾಯಿತು.

   ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಭಿನ್ನ ದನಿಗಳನ್ನು ಹತ್ತಿಕ್ಕುವ ಮೂಲಕ, ಬುದ್ಧಿಜೀವಿಗಳನ್ನು, ಕಲಾವಿದರನ್ನು ಆಲಕ್ಷಿಸುವುದರಿಂದ, ಅವರ ಕೃತಿಗಳನ್ನು ನಿಷೇಧಿಸುವುದರಿಂದ, ಬಹಿಷ್ಕರಿಸುವುದರಿಂದ ತನ್ನ ತಪ್ಪುಗಳನ್ನು, ತನ್ನ ಚೇಲರ ಪುಂಡಾಟಿಕೆಗಳನ್ನು ಮುಚ್ಚಿಡಬಹುದು ಎಂದು ಸರಕಾರ ಭಾವಿಸಿದ್ದರೆ ಅದು ಶುದ್ಧ ಅವಿವೇಕ. ಈ ಹಿಂದಿನ ಸರಕಾರಗಳಿಂದಲೂ ಕೃತಿಗಳ ನಿಷೇಧ, ಸೆನ್ಸಾರ್ ಅರ್ಹತಾ ಪತ್ರ ನಿರಾಕರಣೆಯಂತಹ ಅವಿವೇಕಗಳು ನಡೆದಿವೆ. ಆದರೆ ಅಂಥ ಕ್ರಮಗಳಿಂದ ಸತ್ಯವನ್ನು ಬಚ್ಚಿಡಲಾಗಲಿಲ್ಲ. ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ದೌರ್ಜನ್ಯಗಳನ್ನು ಬಿಂಬಿಸುವ ಚಿತ್ರಗಳೂ ಬಂದವು. ಅವುಗಳ ಪ್ರದರ್ಶನವನ್ನು ತಡೆಯುವ ಕ್ರಮಗಳೂ ಜರುಗಿದವು. ತುರ್ತುಪರಿಸ್ಥಿತಿ ಇಂದಿರಾಗಾಂಧಿಯವರ ರಾಜಕೀಯ ಚಾರಿತ್ರ್ಯಕ್ಕೆ ಅಂಟಿದ ಕಳಂಕ.ಅದನ್ನು ತೊಡೆದುಹಾಕುವುದು ಇಂಥ ಯಾವ ಕ್ರಮಗಳಿಂದಲೂ ಸಾಧ್ಯವಾಗಲಿಲ್ಲ. ಅದು ಚರಿತ್ರೆಯಲ್ಲಿ ಖಾಯಮ್ಮಾಗಿ ಉಳಿಯಿತು. ನರೇಂದ್ರ ಮೋದಿಯವರ ಸರಕಾರವು ಇದನ್ನು ಮನಗಾಣಬೇಕು. ದೇಶದಲ್ಲಿ ಕೆಲವು ಸಂಘಟನೆಗಳು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಗೋರಕ್ಷಣೆ ನೆಪದಲ್ಲಿ ಅಲ್ಪಸಂಖ್ಯಾತರ ಮೇಲೆ, ದಲಿತರ ಮೇಲೆ ನಡೆಸಿರುವ ಗುಂಪು ಥಳಿತ, ಹಲ್ಲೆ ಹಿಂಸಾಚಾರಗಳ ತಡೆಗಟ್ಟಲು ಸುಪ್ರೀಂ ಕೋರ್ಟ್ ನಿರ್ದೇಶಿಸಿರುವಂತೆ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು. ಈ ದೌರ್ಜನ್ಯವನ್ನು ನಿಲ್ಲಿಸ ಬೇಕು. ಅದು ಬಿಟ್ಟು ದೇಶದ ವಾಸ್ತವ ಸ್ಥಿತಿಗತಿಯನ್ನು ಬಿಂಬಿಸುವ ಕಲಾವಿದರನ್ನು ನಿಯಂತ್ರಿಸುವುದರಿಂದ, ಕಲಾಕೃತಿಗಳ ಪ್ರದರ್ಶನ ನಿಷೇಧಿಸುವದರಿಂದ ಸತ್ಯವನ್ನು ಮರೆಮಾಚಲಾಗದು. ಸರಕಾರ ಕಳಂಕ ಮುಕ್ತವಾಗದು. ಬಿಜೆಪಿ ಸರಕಾರಕ್ಕೆ ಅಂಟಿರುವ ಈ ಕಳಂಕ ಚರಿತ್ರೆಯಲ್ಲಿ ಬಿಜೆಪಿಯ ಕರಾಳ ಮುಖವಾಗಿ ಉಳಿಯುತ್ತದೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News