ಭಾರತ ವಿಶ್ವದ ಅತ್ಯಂತ ಜಾತ್ಯಾತೀತ ರಾಷ್ಟ್ರ: ವೆಂಕಯ್ಯ ನಾಯ್ಡು

Update: 2019-06-29 18:29 GMT

ಹೈದರಾಬಾದ್, ಜೂ.29: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಸಂವಿಧಾನವು ಖಾತರಿಪಡಿಸಿರುವ ಮೂಲಭೂತ ಹಕ್ಕಾಗಿದ್ದು, ವಿಶ್ವದಲ್ಲೇ ಅತ್ಯಂತ ಜಾತ್ಯಾತೀತ ರಾಷ್ಟ್ರವಾಗಿದೆ. ಈ ವಿಷಯದಲ್ಲಿ ಭಾರತಕ್ಕೆ ಇತರ ದೇಶಗಳು ಪಾಠ ಹೇಳುವ ಅಗತ್ಯವಿಲ್ಲ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಸಂಸ್ಕೃತಿಯು ಜೀವನದ ಕ್ರಮವಾಗಿದೆ ಮತ್ತು ಧರ್ಮವು ಪ್ರಾರ್ಥನೆಯ ಕ್ರಮ ಎಂಬುದನ್ನು ನೆನಪಿಸಿಕೊಳ್ಳಿ. ಅದರಂತೆ, ಭಾರತವು ಮೂಲಭೂತವಾಗಿ ಸಹಿಷ್ಣುಗಳಾದ ನಾಗರಿಕತೆಯ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿರುವ ರಾಷ್ಟ್ರವಾಗಿದೆ ಎಂದವರು ಹೇಳಿದರು. ಹೈದರಾಬಾದ್‌ನ ‘ಮುಫಾಖಮ್ ಜಾ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ’ಯ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಸಂವಿಧಾನದ 25ರಿಂದ 28ನೇ ಪರಿಚ್ಛೇದದಡಿ ಧಾರ್ಮಿಕ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದೆ. ಆದ್ದರಿಂದ ನಮಗೆ ಇತರ ದೇಶಗಳು ಪಾಠ ಹೇಳುವ ಅಗತ್ಯವಿಲ್ಲ. ಕೆಲವು ದೇಶಗಳು ತಮ್ಮಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮರೆತು ನಮಗೆ ಪ್ರವಚನ ಹೇಳಲು ಮುಂದಾಗಿವೆ. ವಿಶ್ವದಲ್ಲಿ ಅತ್ಯಂತ ಜಾತ್ಯಾತೀತ ರಾಷ್ಟ್ರ ಯಾವುದು ಎಂದು ವರ್ಗೀಕರಿಸಿದರೆ ನಮ್ಮ ದೇಶ ಪ್ರಥಮ ಸ್ಥಾನದಲ್ಲಿರುತ್ತದೆ ಎಂದವರು ಹೇಳಿದರು.

‘ಭಾರತದಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಹತ್ಯೆ ಮಾಡಿದ್ದಾರೆ ಎಂಬ ವದಂತಿಯ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ತೀವ್ರವಾದಿ ಹಿಂದೂ ಗುಂಪುಗಳ ಆಕ್ರಮಣ ಮತ್ತು ಹಿಂಸಾಚಾರ 2018ರಲ್ಲೂ ಮುಂದುವರಿದಿದೆ ’ ಎಂದು ಕಳೆದ ವಾರ ಅಮೆರಿಕದ ವಿದೇಶಾಂಗ ಇಲಾಖೆಯ 2018ರ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ವರದಿಯಲ್ಲಿ ತಿಳಿಸಲಾಗಿತ್ತು.

ಇದನ್ನು ಪ್ರಸ್ತಾಪಿಸಿದ ವೆಂಕಯ್ಯ ನಾಯ್ಡು, ಭಾರತವು ‘ಸರ್ವ ಧರ್ಮ ಸಮ ಭಾವನೆ’ಯಲ್ಲಿ ವಿಶ್ವಾಸವಿರಿಸಿದೆ. ಭಾರತದಲ್ಲಿ ಹಿಂದೂಗಳ ಪ್ರಾಬಲ್ಯವಿದ್ದರೂ,ನಮ್ಮ  ಸಂವಿಧಾನವು ದೇಶವನ್ನು ಜಾತ್ಯಾತೀತ ಎಂದು ಘೋಷಿಸಿದ್ದು ಯಾವುದೇ ವ್ಯಕ್ತಿಯ ವಿರುದ್ಧ ಧರ್ಮ ಆಧಾರಿತ ತಾರತಮ್ಯಕ್ಕೆ ಅವಕಾಶವಿಲ್ಲ ಎಂದರು. ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮದ ಹುಟ್ಟೂರು ಭಾರತವಾಗಿದೆ. ಅಲ್ಲದೆ ವಿಶ್ವದ ಇತರ ಮೂರು ಪ್ರಮುಖ ಧರ್ಮಗಳಾದ- ಇಸ್ಲಾಂ, ಕ್ರಿಶ್ಚಿಯನ್ ಹಾಗೂ ರೊರೊಸ್ಟ್ರಿಯನ್ ಧರ್ಮಗಳ ಗಮನಾರ್ಹ ಜನಸಂಖ್ಯೆ ಭಾರತದಲ್ಲಿದೆ . ವಾಸ್ತವವಾಗಿ, ವಿಶ್ವದಲ್ಲಿ ಅತೀ ಹೆಚ್ಚು ಮುಸ್ಲಿಮ್ ಜನರಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದರು.

ಗುಂಪು ಥಳಿತ, ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಅವರು, 135 ಕೋಟಿ ಜನರಿರುವ ದೇಶದಲ್ಲಿ ಇಲ್ಲೊಂದು, ಅಲ್ಲೊಂದು ಘಟನೆಗಳು ನಡೆಯಬಹುದು. ಆದರೆ ಅಂತಹ ಘಟನೆ ನಡೆದಾಗ ಇಡೀ ದೇಶಕ್ಕೆ ಹಣೆಪಟ್ಟಿ ಕಟ್ಟುವ ಬದಲು, ಅವನ್ನು ಸ್ಥಳೀಯವೆಂದು ಪರಿಗಣಿಸಿ ಅಲ್ಲೇ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News