ಈ ಜೀವಜಲ ಬತ್ತಿ ಹೋದರೆ ಗತಿಯೇನು?

Update: 2019-06-30 18:31 GMT

ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುವ ಮಹಾರಾಷ್ಟ್ರದ ಮುಂಬೈ, ಪುಣೆಯಂಥ ನಗರಗಳಲ್ಲಿ ಬಡವರು ಲೀಟರ್ ನೀರಿಗೆ 1 ರೂಪಾಯಿ ನೀಡುತ್ತಾರೆ. ಅದಕ್ಕಾಗಿ ಕೊಡ ಹೊತ್ತುಕೊಂಡು ನಾಲ್ಕಾರು ತಾಸು ಪಾಳಿಯಲ್ಲಿ ನಿಲ್ಲುತ್ತಾರೆ. ಆದರೆ ಮಹಾರಾಷ್ಟ್ರದ 24 ಬೀಯರ್ ಮತ್ತು ಅಲ್ಕೊಹಾಲ್ ಕಾರ್ಖಾನೆಗಳು 1 ಲೀಟರ್‌ಗೆ 4 ಪೈಸೆಯಂತೆ ದಿನನಿತ್ಯವೂ 500 ಲೀಟರ್ ನೀರನ್ನು ಖರೀದಿಸುತ್ತವೆ. ಮುಂಬೈ, ಪುಣೆಯ ಭಾರೀ ಸಿರಿವಂತರ ಬಹುಮಹಡಿ ಕಟ್ಟಡಗಳಲ್ಲಿ ಪ್ರತಿ ಅಂತಸ್ತಿನಲ್ಲಿ ಈಜುಕೊಳಗಳಿವೆ. ಅಲ್ಲಿ ಧಾರಾಳವಾಗಿ ನೀರು ಬಳಕೆಯಾಗಿ ಗಟಾರದ ಪಾಲಾಗುತ್ತದೆ. ಹೀಗೆ ಎಲ್ಲರೂ ಸಮಾನವಾಗಿ ಹಂಚಿಕೊಂಡು ಕುಡಿಯಬೇಕಾದ ನೀರು ಹಣ ಇದ್ದವರ ಪಾಲಾಗುತ್ತಿದೆ.


ಕರ್ನಾಟಕ ಮಾತ್ರವಲ್ಲ, ಇಡೀ ಭಾರತವೇ ಪ್ರಕೃತಿ ವಿಕೋಪ ಮತ್ತು ಮನುಷ್ಯ ನಿರ್ಮಿತ ಪ್ರಕೋಪಗಳಿಂದ ತತ್ತರಿಸಿ ಹೋಗಿದೆ. ಮನುಷ್ಯ ಮೃಗವಾಗಿ ಸಹಜೀವಿಯನ್ನು ಹೊಡೆದು ಕೊಲ್ಲುತ್ತಿರುವ ಈ ದಿನಗಳಲ್ಲಿ ನಿಸರ್ಗವೂ ಮುನಿಸಿಕೊಂಡಿದೆ. ಇಡೀ ದೇಶ ಭೀಕರ ಬರಗಾಲದ ದವಡೆಗೆ ಸಿಲುಕಿದೆ. ಜೂನ್ ತಿಂಗಳು ಮುಗಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೆರೆ, ಕಟ್ಟೆ, ಬಾವಿ ಮತ್ತು ಜಲಾಶಯಗಳು ಬರಿದಾಗಿವೆ. ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಹೋಮ ,ಯಾಗ, ಅರ್ಚನೆ ಹಾಗೂ ಕಪ್ಪೆಗಳ ಮದುವೆ ಮಾಡಿಸಿದರೂ ಮಳೆ ಕೈ ಕೊಟ್ಟಿದೆ. ಚೆನ್ನೈನಂತಹ ನಗರದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಚೆನ್ನೈನಲ್ಲಿ ನೀರಿನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಅಂದರೆ ಹನಿ ನೀರಿಗಾಗಿ ಜನ ಬಾಯಿ ಬಿಡುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿನ ಬೆಲೆ 5 ರಿಂದ 6 ಸಾವಿರ ರೂಪಾಯಿವರೆಗೆ ಹೋಗಿದೆ. ಹೀಗಾಗಿ ಅಲ್ಲಿನ ಜನ ಸಂಬಂಧಿಕರ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಚೆನ್ನೈ ಮಾತ್ರವಲ್ಲ ದೇಶದ ಮಹಾನಗರಗಳ ದಾರುಣ ಕತೆ . ಇನ್ನೊಂದು ತಿಂಗಳಲ್ಲಿ ಮಳೆಯಾಗದಿದ್ದರೆ, ಕೋಲ್ಕತಾ, ದಿಲ್ಲಿ, ಬೆಂಗಳೂರು, ಚೆನ್ನೈಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿ ಹಾಹಾಕಾರವಾದರೆ ಅಚ್ಚರಿ ಪಡಬೇಕಾಗಿಲ್ಲ.

ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಬೆಳೆದು, ಬೆಳೆದು ಈಗ ಜನಸಂಖ್ಯೆ ಒಂದೂವರೆ ಕೋಟಿ ಸಮೀಪಿಸುತ್ತಿದೆ. ಇಲ್ಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕೆಂಪೇಗೌಡರ ಕಾಲದಲ್ಲಿ ಊರ ತುಂಬಾ ಇದ್ದ ನೂರಾರು ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ನಿರ್ಮಿಸಿರುವ ಫುಲ್ ಟೈಮ್ ರಿಯಲ್ ಎಸ್ಟೇಟ್, ಪಾರ್ಟ್ ಟೈಮ್ ರಾಜಕೀಯ ಮಾಡುವ ನಮ್ಮ ಜನಪ್ರತಿನಿಧಿಗಳು (ಎಲ್ಲರೂ ಅಲ್ಲ) ನೆಗಡಿಯಾದಾಗ ಮೂಗು ಕುಯ್ಯುವಂತೆ ಸಮಸ್ಯೆ ಉಲ್ಬಣಗೊಂಡಾಗ ಮಲೆನಾಡಿನಿಂದ ಶರಾವತಿ ನೀರನ್ನು ರಾಜಧಾನಿಗೆ ತರಲು ಓಡಾಡುತ್ತಿದ್ದಾರೆ. ಇದರ ವಿರುದ್ಧ ಶಿವಮೊಗ್ಗ, ಚಿಕ್ಕಮಗಳೂರಿನ ಜನ ಸಿಡಿದೆದ್ದಿದ್ದಾರೆ. ಇದು ಸಾಲದೆಂಬಂತೆ ಇನ್ನು ಕೆಲ ರಾಜಕಾರಣಿಗಳು ಅಘನಾಶಿನಿ ಮೇಲೂ ಕಣ್ಣು ಹಾಕಿದ್ದಾರೆ.

ನೀರಿನ ಮಹತ್ವದ ಬಗ್ಗೆ ಹೋರಾಟ ನಡೆಸಿರುವ ಆಧುನಿಕ ಭಗೀರಥ ಎಂದೇ ಕರೆಯಲ್ಪಡುವ ರಾಜಸ್ಥಾನದ ರಾಜೇಂದ್ರ ಸಿಂಗ್ ಹೇಳುವ ಮಾತು ಕೇಳಿದರೆ ಇನ್ನಷ್ಟು ಆತಂಕ ಉಂಟಾಗುತ್ತದೆ. ದೇಶದ 21 ಮಹಾನಗರಗಳು ಬರಲಿರುವ ದಿನಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸಲಿವೆ ಎಂದು ಅವರು ಹೇಳುತ್ತಾರೆ. ನಮ್ಮ ಕುಡಿಯುವ ನೀರಿನ ಮೇಲೆ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಹಿಡಿತ ಸಾಧಿಸಿವೆ. ನಾಗಪುರ ಸೇರಿದಂತೆ ಕೆಲ ನಗರಗಳ ಕುಡಿಯುವ ನೀರಿನ ಪೂರೈಕೆಯನ್ನು ಈ ವಿದೇಶಿ ಕಂಪೆನಿಗಳು ನಿಯಂತ್ರಿಸುತ್ತಿವೆ. ಭಾರತ ಮಾತಾಕಿ ಜೈ ಎಂದು ಬಡ ಮುಸ್ಲಿಂ ಹುಡುಗರ ಮೇಲೆ ಹಲ್ಲೆ ಮಾಡಿ ಕೊಲ್ಲುವ ‘ರಾಷ್ಟ್ರಭಕ್ತ’ರಿಗೆ ಇದು ಕಣ್ಣಿಗೆ ಕಾಣುವುದಿಲ್ಲ. ಕಾಣದಂತೆ ಮತಾಂಧತೆ ಕಪ್ಪು ಬಟ್ಟೆಯನ್ನು ಕಣ್ಣಿಗೆ ಕಟ್ಟಲಾಗಿದೆ. ಇದು ದೇಶದ ಇಂದಿನ ಸ್ಥಿತಿ.
 ಬೆಟ್ಟ ಗುಡ್ಡಗಳನ್ನು ಕಡಿದು ಕಾಡುಗಳನ್ನು ನಾಶ ಮಾಡಿದ ಪರಿಣಾಮ ಮಳೆಯ ಅಭಾವ ಉಂಟಾಗಿದೆ. ಜನಸಂಖ್ಯೆ ಹೆಚ್ಚಾಗಿದೆ. ನೀರಿನ ಬಳಕೆ ಮಿತಿ ಮೀರಿದೆ. 2030ರ ವೇಳೆಗೆ ಈ ಪರಿಸ್ಥಿತಿ ಇನ್ನೂ ವಿಪರೀತಕ್ಕೆ ಹೋಗಲಿದೆ. ಭಾರತದ ಹಳ್ಳಿಗಳು ಖಾಲಿಯಾಗುತ್ತಿವೆ. ಉದ್ಯೋಗವಿಲ್ಲದ ಜನ ನಗರಗಳಿಗೆ ಗುಳೆ ಹೊರಟಿದ್ದಾರೆ. ಇನ್ನೊಂದೆಡೆ ಈಶಾನ್ಯ ರಾಜ್ಯಗಳ ಹುಡುಗರೂ ಅಲ್ಲಿ ಕೆಲಸವಿಲ್ಲದೆ, ಬೆಂಗಳೂರಿನಂಥ ನಗರಗಳಿಗೆ ಬಂದು ತುಂಬಿಕೊಂಡಿದ್ದಾರೆ. ಹೀಗಾಗಿ ಮಹಾನಗರಗಳು ಈ ಜನಸಂಖ್ಯಾ ಭಾರದಿಂದ ತತ್ತರಿಸಿ ಹೋಗಿವೆ.

ದೇಶದಲ್ಲಿ 60 ಕೋಟಿ ಜನರು ಭೀಕರ ಬರಗಾಲ ಎದುರಿಸುತ್ತಿದ್ದಾರೆ. ಪಿ.ಸಾಯಿನಾಥ್ ಅವರ ಪ್ರಕಾರ, ದಿನಕ್ಕೆ 2500 ಮಂದಿ ಕುಡಿಯುವ ನೀರಿಲ್ಲದೆ ಸಾಯುತ್ತಿದ್ದಾರೆ. ಇದಕ್ಕೆ ಯಾರು ಕಾರಣ ಬರೀ ಬರಗಾಲವೊಂದೇ ಕಾರಣವಲ್ಲ. ನೀರಿನ ಹಂಚಿಕೆಯಲ್ಲಿನ ಅಸಮಾನತೆಯೂ ಇದಕ್ಕೆ ಕಾರಣ ಎಂದು ಸಾಯಿನಾಥ್ ಅಭಿಪ್ರಾಯಪಡುತ್ತಾರೆ.

ಜನರ ಬಾಯಾರಿಕೆ ಇಂಗಿಸಬೇಕಾದ ನೀರು ಅತ್ಯಂತ ಅಗ್ಗದ ಬೆಲೆಗೆ ಕೈಗಾರಿಕೆಗಳ ಪಾಲಾಗುತ್ತಿದೆ. ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಪೆರಲೈಟ್ ಉದ್ದಿಮೆ ಒಂದು ಸಾವಿರ ಲೀಟರ್ ನೀರನ್ನು ಕೇವಲ 10 ರೂಪಾಯಿಗೆ ಕೊಂಡುಕೊಳ್ಳುತ್ತಿದೆ. ಅದೇ ಪ್ರದೇಶದ ಸುತ್ತಲಿನ ಹಳ್ಳಿಗಳ ಮಹಿಳೆಯರು 25 ಲೀಟರ್ ಕ್ಯಾನ್ ನೀರಿಗೆ 10 ರೂಪಾಯಿ ನೀಡಿ ಖರೀದಿಸುತ್ತಾರೆ. ನಮ್ಮ ಕರ್ನಾಟಕದಲ್ಲಿ ಆಲಮಟ್ಟಿ ಜಲಾಶಯದ ನೀರು ಬಳ್ಳಾರಿ ಸಮೀಪದ ಜಿಂದಾಲ್ ಕಂಪೆನಿಗೆ ಅತ್ಯಂತ ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ.

ಆಹಾರದಲ್ಲಿ ಭಾರತ ಸ್ವಾವಲಂಬಿಯಾಗಬೇಕೆಂದು ನೆಹರೂ ಪ್ರಧಾನಿಯಾಗಿದ್ದಾಗ ದೇಶದ ನದಿಗಳಿಗೆ ಅಣೆಕಟ್ಟು ನಿರ್ಮಿಸುವ ಕಾರ್ಯಕ್ಕೆ ಕೈ ಹಾಕಲಾಯಿತು. ಅಣೆಕಟ್ಟುಗಳನ್ನು ಭಾರತದ ಆಧುನಿಕ ದೇವಾಲಯಗಳೆಂದು ನೆಹರೂ ಕರೆದರು. ಆದರೆ ಈಗ ಏನಾಗಿದೆ? ಜಲಾಶಯಗಳ ನೀರು ವಾಣಿಜ್ಯ ಬೆಳೆ ಬೆಳೆಯಲು ಬಳಕೆಯಾಗುತ್ತಿದೆ. ವಾಣಿಜ್ಯ ಬೆಳೆಗಳನ್ನು ಬೆಳೆಯಲು ಹೆಚ್ಚು ನೀರು ಬೇಕು.ಒಂದು ಎಕರೆ ಕಬ್ಬು ಬೆಳೆಯಲು 2 ಕೋಟಿ ಲೀಟರ್ ನೀರು ಬೇಕು. ಇದರ ಬದಲಾಗಿ ಜೋಳ ವನ್ನು ಬೆಳೆದರೆ ಇಷ್ಟು ನೀರಿನ ಅಗತ್ಯವಿಲ್ಲ. ನೀರು ಕಡಿಮೆ ಇರುವ ಪ್ರದೇಶದಲ್ಲಿ ಕಾಫಿ, ಕಾಳುಮೆಣಸು ಬೆಳೆಯಬಹುದು. ಮಹಾರಾಷ್ಟ್ರದ ಶೇ. 68ರಷ್ಟು ನೀರಾವರಿ ಯೋಜನೆಯ ನೀರನ್ನು ಕೇವಲ ಶೇ. 4ರಷ್ಟು ರೈತರು ಮಾತ್ರ ಬಳಸಿಕೊಳ್ಳುತ್ತಾರೆ. ಇದು ತಪ್ಪಬೇಕಾದರೆ ವಾಣಿಜ್ಯ ಬೆಳೆ ಬದಲಾಗಿ ಕಡಿಮೆ ನೀರು ಮಾತ್ರ ಸಾಕಾಗುವ ಬೆಳೆಯನ್ನು ಮಾತ್ರ ಬೆಳೆಯುವಂತೆ ರೈತರ ಮನವೊಲಿಸಲು ಸರಕಾರ ಮುಂದಾಗಬೇಕು.

 ಭಾರತದಲ್ಲಿ ನೀರು 90ರ ದಶಕಕ್ಕಿಂತ ಮುಂಚೆ ಕೊಳ್ಳುವ, ಖರೀದಿಸುವ, ಲಾಭ ತರುವ ವಸ್ತುವಾಗಿರಲಿಲ್ಲ. ಮನೆಗೆ ಬಂದವರಿಗೆ ಮೊದಲು ನೀರು ಕೊಡುವ ಸಂಸ್ಕೃತಿ ನಮ್ಮದು. ನಾನೇ ನನ್ನ 40ರ ವಯಸ್ಸಿನವರೆಗೆ ನೀರನ್ನು ಎಂದು ಕೊಂಡು ಕುಡಿದಿಲ್ಲ. ದೇಶದಲ್ಲಿ ಜಾಗತೀಕರಣ ಹಾಗೂ ಉದಾರವಾದಿ ಆರ್ಥಿಕ ನೀತಿ ವಕ್ಕರಿಸಿದ ನಂತರ ನೀರು ಮಾರಾಟದ ವಸ್ತುವಾಯಿತು. ಈಗಂತೂ ವಾಟರ್ ಮಾಫಿಯಾ ಹುಟ್ಟಿಕೊಂಡಿದೆ. ಕಂಡ ಕಂಡಲ್ಲಿ ಕೊಳವೆಬಾವಿ ಕೊರೆದು ಭೂಮಿಯ ತಳದಲ್ಲಿನ ನೀರು ಎತ್ತಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಅಂತರ್ಜಲ ಮಟ್ಟ ಕುಸಿದು ಪಾತಾಳಕ್ಕೆ ಹೋಗಿದೆ.

 ಕುಡಿಯುವ ನೀರಿನ ಹಂಚಿಕೆಯಲ್ಲಿ ಬಡವರಿಗೊಂದು ನೀತಿ, ಸಾಹುಕಾರರಿಗೊಂದು ಮಾನದಂಡವನ್ನು ಸರಕಾರ ಅನುಸರಿಸುತ್ತಿದೆ. ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುವ ಮಹಾರಾಷ್ಟ್ರದ ಮುಂಬೈ, ಪುಣೆಯಂಥ ನಗರಗಳಲ್ಲಿ ಬಡವರು ಲೀಟರ್ ನೀರಿಗೆ 1 ರೂಪಾಯಿ ನೀಡುತ್ತಾರೆ. ಅದಕ್ಕಾಗಿ ಕೊಡ ಹೊತ್ತುಕೊಂಡು ನಾಲ್ಕಾರು ತಾಸು ಪಾಳಿಯಲ್ಲಿ ನಿಲ್ಲುತ್ತಾರೆ. ಆದರೆ ಮಹಾರಾಷ್ಟ್ರದ 24 ಬೀಯರ್ ಮತ್ತು ಅಲ್ಕೊಹಾಲ್ ಕಾರ್ಖಾನೆಗಳು 1 ಲೀಟರ್‌ಗೆ 4 ಪೈಸೆಯಂತೆ ದಿನನಿತ್ಯವೂ 500 ಲೀಟರ್ ನೀರನ್ನು ಖರೀದಿಸುತ್ತವೆ. ಮುಂಬೈ, ಪುಣೆಯ ಭಾರೀ ಸಿರಿವಂತರ ಬಹುಮಹಡಿ ಕಟ್ಟಡಗಳಲ್ಲಿ ಪ್ರತಿ ಅಂತಸ್ತಿನಲ್ಲಿ ಈಜುಕೊಳಗಳಿವೆ. ಅಲ್ಲಿ ಧಾರಾಳವಾಗಿ ನೀರು ಬಳಕೆಯಾಗಿ ಗಟಾರದ ಪಾಲಾಗುತ್ತದೆ. ಹೀಗೆ ಎಲ್ಲರೂ ಸಮಾನವಾಗಿ ಹಂಚಿಕೊಂಡು ಕುಡಿಯಬೇಕಾದ ನೀರು ಹಣ ಇದ್ದವರ ಪಾಲಾಗುತ್ತಿದೆ.

ಇದು ದೇಶದ ಇಂದಿನ ನೀರಿನ ಪರಿಸ್ಥಿತಿ. ಇಂಥ ಹಗಲು ದರೋಡೆ ವಿರುದ್ಧ ಹೋರಾಡಬೇಕಾದ ಯುವಕರು ಮತಾಂಧತೆಯ ಮತ್ತೇರಿಸಿಕೊಂಡು ಹಾದಿ, ಬೀದಿಯಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡಿ ಕೊಂದು ಹಾಕುತ್ತಿದ್ದಾರೆ. ಇದನ್ನು ನೋಡಿ ಕೊಳ್ಳೆ ಹೊಡೆಯುವವರು ಖುಷಿಯಿಂದ ಕೇಕೇ ಹಾಕಿ ನಗುತ್ತಾ ಕೋಮುವಾದಿ ಸಂಘಟನೆಗಳಿಗೆ ಗುರುದಕ್ಷಣೆ ನೀಡುತ್ತಾ ಜನರು ನಮ್ಮ ತಂಟೆಗೆ ಬರದಂತೆ ಇನ್ನಷ್ಟು ಹೊಡೆಯಿರಿ ಎಂದು ಹುರಿದುಂಬಿಸುತ್ತಿದ್ದಾರೆ. ನಮ್ಮ ಕಣ್ಣೆದುರೆ ದೇಶ ನಾಶವಾಗಿ ಹೋಗುತ್ತಿದೆ. ದೇಶದ 130 ಕೋಟಿ ಜನರಿಗೆ ಸೇರಬೇಕಾದ ಸಂಪತ್ತು, ಸಂಪನ್ಮೂಲಗಳು ಕೆಲವೇ ಉಳ್ಳವರ ಪಾಲಾಗುತ್ತಿವೆ. ಈ ಉಳ್ಳವರೇ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಜನ ಸಾಮಾನ್ಯರು, ಮಧ್ಯಮ ವರ್ಗಿಗಳು ಮತಾಂಧತೆಯ ಅನಸ್ತೇಸಿಯಾ ಆವರಿಸಿಕೊಂಡು ಪ್ರಜ್ಞಾ ಹೀನರಾಗಿದ್ದಾರೆ. ಎಲ್ಲದಕ್ಕೂ ಕೊನೆಯಿರುವಂತೆ ಈ ಕೆಟ್ಟ ಕಾಲಕ್ಕೂ ಕೊನೆಯಿದೆ. ಅಲ್ಲಿಯವರೆಗೆ ಕಾಯೋಣ. ಸುಮ್ಮನೆ ಕಾಯುವುದಲ್ಲ. ಅನ್ಯಾಯದ ವಿರುದ್ದ ಸೆಣಸುತ್ತಲೇ ಮನುಷ್ಯರು, ಮನುಷ್ಯನರನ್ನು ಪ್ರೀತಿಸುವ ಮತ್ತು ಎಲ್ಲವನ್ನೂ ಎಲ್ಲರೂ ಹಂಚಿಕೊಂಡು ತಿನ್ನುವ ಹೊಸ ಭಾರತಕ್ಕಾಗಿ ಕಾಯೋಣ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News