ರಫೇಲ್ ಡೇಟಾ ಕಳವು ಪ್ರಕರಣದ ತನಿಖೆ ಪ್ರಗತಿಯಲ್ಲಿ : ಫ್ರಾನ್ಸ್ ರಾಯಭಾರಿ

Update: 2019-06-30 18:44 GMT

ಹೊಸದಿಲ್ಲಿ, ಜೂ.30: ಪ್ಯಾರಿಸ್‌ನಲ್ಲಿರುವ ರಫೇಲ್ ಯೋಜನೆಯ ನಿರ್ವಹಣಾ ತಂಡದ ಕಚೇರಿಯಿಂದ ಸಂಭವನೀಯ ಅಂಕಿ ಅಂಶ ಕಳ್ಳತನದ ಕುರಿತ ತನಿಖೆ ಮುಂದುವರಿದಿದೆ ಎಂದು ಭಾರತಕ್ಕೆ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ ಝೆಗ್ಲರ್ ಹೇಳಿದ್ದಾರೆ.

ಈ ಬಗ್ಗೆ ತನಿಖೆ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ನೀಡುವಂತಿಲ್ಲ. ಆದರೆ ಖಂಡಿತವಾಗಿಯೂ ಅಂಕಿ ಅಂಶ ಕಳವಾಗಿಲ್ಲ ಎಂದವರು ಮಾಧ್ಯಮದವರಿಗೆ ತಿಳಿಸಿದ್ದಾರೆ. ನೋಯ್ಡಾದಲ್ಲಿ ಎಲ್’ಒಪೆರಾ ಫ್ರೆಂಚ್ ಬೇಕರಿಯನ್ನು ಉದ್ಘಾಟಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಳೆದ ತಿಂಗಳು ಗುರುತಿಸಲಾಗದ ವ್ಯಕ್ತಿಗಳು ರಫೇಲ್ ಯೋಜನೆಯ ನಿರ್ವಹಣಾ ತಂಡದ ಕಚೇರಿಯ ಬೀಗ ಮುರಿದು ಒಳಗೆ ನುಗ್ಗಿದ್ದರು. ಆದರೆ ಭಾರತದ ಜೊತೆಗಿನ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಕಳವಾಗಿಲ್ಲ ಎಂದು ಸೈಬರ್ ವಿಧಿವಿಜ್ಞಾನ ತಂಡ ತಿಳಿಸಿತ್ತು.

ಕಚೇರಿಗೆ ಕೆಲವು ವ್ಯಕ್ತಿಗಳು ನುಗ್ಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತದ ವಾಯುಪಡೆ ಮೂವರು ಸದಸ್ಯರ ಸೈಬರ್ ವಿಧಿವಿಜ್ಞಾನ ತಂಡವನ್ನು ರಚಿಸಿ ಪ್ಯಾರಿಸ್‌ಗೆ ಕಳುಹಿಸಿತ್ತು. ಪ್ಯಾರಿಸ್‌ನಲ್ಲಿ ರಫೇಲ್ ಕಚೇರಿಯಲ್ಲಿ ತನಿಖೆ ನಡೆಸಿದ ತಂಡವು , ಯಾವುದೇ ಅಂಕಿ ಅಂಶ ಕಳವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಈ ಕಚೇರಿಯಲ್ಲಿ ಹಣ ಇಡುವುದಿಲ್ಲ ಎಂದು ತಿಳಿದಿದ್ದ ವ್ಯಕ್ತಿಗಳು ಅಂಕಿ ಅಂಶ ಕದಿಯಲೆಂದೇ ಒಳನುಗ್ಗಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News