ಪ್ರವಾಸೋದ್ಯಮ ಉತ್ತೇಜನಕ್ಕೆ ಗೋ ಸರ್ಕ್ಯೂಟ್ !

Update: 2019-07-01 03:54 GMT

ಅಹ್ಮದಾಬಾದ್: ಕೇಂದ್ರ ಸರ್ಕಾರ ಹೊಸ ಪ್ರವಾಸೋದ್ಯಮ ಅವಕಾಶವನ್ನು ಕಂಡುಕೊಂಡಿದ್ದು, ಗೋ ಆಧರಿತ ಪ್ರವಾಸೋದ್ಯಮ ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ, ಹೊಸದಾಗಿ ರಚನೆಯಾಗಿರುವ ರಾಷ್ಟ್ರೀಯ ಕಾಮಧೇನು ಆಯೋಗ ದೇಸಿ ಹಸುಗಳ ಪಾಲನಾ ಸ್ಥಳಗಳನ್ನು ಒಳಗೊಂಡ ಗೋ ಸರ್ಕ್ಯೂಟ್ ರೂಪಿಸಲು ಮುಂದಾಗಿದೆ.

ಹರ್ಯಾಣ, ಉತ್ತರ ಪಪ್ರದೆಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳನ್ನು ಈ ಸರ್ಕ್ಯೂಟ್‌ಗಾಗಿ ಆಯೋಗ ಗುರುತಿಸಿದೆ.

ಪ್ರವಾಸಿಗಳಿಗೆ ಅದರಲ್ಲೂ ಮುಖ್ಯವಾಗಿ ವಿದೇಶಿ ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಭಾರತೀಯ ಗೋ ತಳಿಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಾಗುತ್ತದೆ. ಇದು ಸಂಶೋಧನೆಗೆ ಕೂಡಾ ನೆರವಾಗಲಿದೆ ಎಂದು ಕಾಮಧೇನು ಮಂಡಳಿ ಅಧ್ಯಕ್ಷ ವಲ್ಲಭ್ ಕಠಾರಿಯಾ ಹೇಳಿದ್ದಾರೆ.

"ನಾವು ಇದುವರೆಗೆ ಧಾರ್ಮಿಕ, ಮನೋರಂಜನಾತ್ಮಕ ಹಾಗೂ ಸಾಹಸ ಪ್ರವಾಸೋದ್ಯಮಕ್ಕೆ ಗಮನ ಹರಿಸಿದ್ದೇವೆ. ಆದರೆ ನಮ್ಮ ಪ್ರವಾಸಿ ತಾಣಗಳಿಗೆ ಗೋ ಪ್ರವಾಸೋದ್ಯಮವನ್ನು ಸಂಪರ್ಕಿಸಿದರೆ, ಗುಜರಾತ್‌ನ ಗೀರ್, ಉತ್ತರ ಪ್ರದೇಶದ ಗಂಗಾತೀರಿ ಅಥವಾ ಆಂಧ್ರ ಪ್ರದೇಶದ ಓಂಗೋಲ್‌ನಂಥ ದೇಸಿ ತಳಿಗಳನ್ನು ಬೆಳೆಸಲು ಅನುಕೂಲವಾಗಲಿದೆ" ಎಂದು ಕಠಾರಿಯಾ ಅಭಿಪ್ರಾಯಪಟ್ಟಿದ್ದಾರೆ.

ಇಂಥ ಪ್ರವಾಸಿ ಕೇಂದ್ರಗಳಲ್ಲಿ ತುಪ್ಪ, ಗೋಮೂತ್ರ ಹಾಗೂ ಸೆಗಣಿಯಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಇದು ಗೋ ಆಧರಿತ ಆರ್ಥಿಕತೆ ಅಭಿವೃದ್ಧಿಗೂ ಕಾರಣವಾಗಲಿದೆ. "ಸೋಮನಾಥ ದೇಗುಲ, ಸಾಬರಮತಿ ಆಶ್ರಮ, ಸಾಬರಮತಿ ಕೇಂದ್ರೀಯ ಕಾರಾಗೃಹ, ಯರವಾಡ ಜೈಲು, ತಿಹಾರ್ ಜೈಲಿನಲ್ಲಿ ಇಂಥ ಕೇಂದ್ರಗಳನ್ನು ತೆರೆಯಬಹುದು. ಇದರ ಜತೆಗೆ ಕೇರಳ ಹಾಗೂ ಗೋವಾದ ಸ್ಪಾ ಹಾಗೂ ಆಯುರ್ವೇದ ಕೇಂದ್ರಗಳಲ್ಲೂ ಇಂಥ ಕೇಂದ್ರಗಳನ್ನು ಆರಂಭಿಸಬಹುದಾಗಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News