ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ: ಆನಂದ್‌ ಸಿಂಗ್

Update: 2019-07-01 12:42 GMT

ಬೆಂಗಳೂರು, ಜು.1: ಬಳ್ಳಾರಿ ಜಿಲ್ಲೆಯ ವಿಜಯನಗರ(ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್‌ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಮೈತ್ರಿ ಸರಕಾರಕ್ಕೆ ಆಘಾತವನ್ನುಂಟು ಮಾಡಿದ್ದಾರೆ.

ಸೋಮವಾರ ಬೆಳಗ್ಗೆ ಇಂದಿರಾನಗರದ ಸಮೀಪದ ದೊಮ್ಮಲೂರಿನಲ್ಲಿರುವ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಆನಂದ್‌ಸಿಂಗ್, ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಬಳಿಕ ಅಲ್ಲಿಂದ ರಾಜಭವನಕ್ಕೆ ತೆರಳಿದ ಆನಂದ್ ಸಿಂಗ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮಾಹಿತಿಯನ್ನು ಒಳಗೊಂಡ ಪತ್ರವನ್ನು ರಾಜ್ಯಪಾಲ ವಜುಭಾಯಿ ವಾಲಾಗೆ ಸಲ್ಲಿಸಿ, ತನ್ನ ರಾಜೀನಾಮೆಗೆ ಸಂಬಂಧಿಸಿದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

ರಾಜಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್‌ಸಿಂಗ್, ಅಧಿಕಾರ ಶಾಶ್ವತವಲ್ಲ. ರಾಜ್ಯ ಮತ್ತು ಜಿಲ್ಲೆಯ ಜನ ನನಗೆ ಮುಖ್ಯ. ನನ್ನ ಜಿಲ್ಲೆಗೆ ಅನ್ಯಾಯವಾದಾಗ ಹೇಗೆ ತಾನೇ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವೆಂದು ಪ್ರಶ್ನಿಸಿದರು.

ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ತಾಂತ್ರಿಕ ಸಮಸ್ಯೆಯಿಂದಾಗಿ ನನ್ನ ರಾಜೀನಾಮೆ ಪತ್ರ ಸ್ಪೀಕರ್‌ಗೆ ತಲುಪದೇ ಇರಬಹುದು. ಅಗತ್ಯವಿದ್ದಲ್ಲಿ, ನಾನು ಮತ್ತೊಮ್ಮೆ ಸ್ಪೀಕರ್‌ರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಆನಂದ್ ಸಿಂಗ್ ಹೇಳಿದರು.

ರಾಜ್ಯ ಸರಕಾರವು ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುತ್ತಿರುವುದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ ಆನಂದ್‌ಸಿಂಗ್, ನನ್ನ ಜಿಲ್ಲೆಯ ಭೂಮಿ, ನನ್ನ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗಬೇಕು. ಆದರೆ, ನನ್ನ ಜಿಲ್ಲೆಗೆ ಅನ್ಯಾಯವಾಗುತ್ತಿರುವಾಗ ನಾನು ಧ್ವನಿ ಎತ್ತದಿದ್ದರೆ, ಒಬ್ಬ ಜನಪ್ರತಿನಿಧಿಯಾಗಿರಲು ಹೇಗೆ ಸಾಧ್ಯ ಎಂದರು.

ನನ್ನ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ. ಸರಕಾರದ ಮುಂದೆ ನನ್ನ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇನೆ. ನಾನು ಜಿಂದಾಲ್ ವಿರೋಧಿ ಅಲ್ಲ. ಅತ್ಯಲ್ಪ ಮೊತ್ತಕ್ಕೆ ಸಾವಿರಾರು ಎಕರೆ ಭೂಮಿಯನ್ನು ಜಿಂದಾಲ್‌ಗೆ ಪರಭಾರೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇದರಿಂದ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆನಂದ್‌ ಸಿಂಗ್ ಹೇಳಿದರು.

ಈಗಿರುವ ಪರಿಸ್ಥಿತಿಯಲ್ಲಿ ಒಂದು ಲಕ್ಷ ರೂ.ಗಳಿಗೆ ಒಂದು ನಿವೇಶನ ಖರೀದಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಲಕ್ಷ ರೂ.ಗಳಿಗೆ ಒಂದು ಎಕರೆಯಂತೆ ಸಾವಿರಾರು ಎಕರೆ ಭೂಮಿಯನ್ನು ಕೊಡುವುದು ನ್ಯಾಯ ಸಮ್ಮತವೇ? ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಯಾರೇ ಆಗಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ನನ್ನ ರಾಜೀನಾಮೆ ಪತ್ರದ ಪ್ರತಿಯನ್ನು ರಾಜ್ಯಪಾಲರಿಗೂ ಸಲ್ಲಿಸಿದ್ದೇನೆ. ವಿಜಯನಗರ ಜಿಲ್ಲೆಯಾಗಬೇಕು ಎಂಬುದು ನನ್ನ ಬೇಡಿಕೆ. ರಾಜೀನಾಮೆಯ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಆನಂದ್‌ಸಿಂಗ್ ಸ್ಪಷ್ಟನೆ ನೀಡಿದರು.

'ರಾಜೀನಾಮೆ ನೀಡುತ್ತಿಲ್ಲ'

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ. ರಾಜೀನಾಮೆ ನೀಡುತ್ತೇನೆ ಅನ್ನೋದು ಸುಳ್ಳು. ನಾನು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡವರು. ಈ ರೀತಿಯ ನಿರಾಧಾರ ಸುದ್ದಿ ಯಾರೂ ನಂಬಬೇಡಿ. ಸುದ್ದಿ ಪ್ರಕಟಿಸುವ ಮುನ್ನ ಮಾಧ್ಯಮದವರು ಧೃಢಪಡಿಸಿಕೊಳ್ಳಿ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News