17 ಇತರ ಹಿಂದುಳಿದ ಜಾತಿ ಪರಿಶಿಷ್ಟ ಜಾತಿ ಪಟ್ಟಿಗೆ: ಮಾಯಾವತಿ ತರಾಟೆ

Update: 2019-07-01 18:27 GMT

ಲಕ್ನೋ, ಜು. 1: 17 ಇತರ ಹಿಂದುಳಿದ ಜಾತಿ (ಒಬಿಸಿ)ಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿರುವ ಉತ್ತರಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ಈ ನಡೆ ‘ಅತಿ ದೊಡ್ಡ ದ್ರೋಹ’. ಇದನ್ನು ಕೂಡಲೇ ಹಿಂದೆ ಪಡೆಯಬೇಕು ಎಂದಿದ್ದಾರೆ.

 ಈ ಜಾತಿಗಳನ್ನು ವಂಚಿಸಲು ಈ ಹಿಂದಿನ ಸಮಾಜವಾದಿ ಪಕ್ಷದ ಸರಕಾರ ಕೂಡ ಇದೇ ರೀತಿಯ ‘ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ’ ಕ್ರಮಗಳನ್ನು ಕೈಗೊಂಡಿತ್ತು. ಆಗ ಕೂಡ ತನ್ನ ಪಕ್ಷ ವಿರೋಧ ವ್ಯಕ್ತಪಡಿಸಿತ್ತು ಎಂದು ಮಾಯಾವತಿ ಹೇಳಿದ್ದಾರೆ. ‘‘ಇದು 17 ಜಾತಿಗಳಿಗೆ ಮಾಡುವ ಅತಿ ದೊಡ್ಡ ದ್ರೋಹ. ಅವರು ಇತರ ಹಿಂದುಳಿದ ಜಾತಿಯ ಶೇ. 27 ಮೀಸಲಾತಿ ಸೌಲಭ್ಯವನ್ನಾಗಲಿ, ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನಾಗಲಿ ಪಡೆಯಲು ಸಾಧ್ಯವಾಗಲಾರದು. ಯಾಕೆಂದರೆ ರಾಜ್ಯ ಸರಕಾರ ತನ್ನ ಆದೇಶದ ಮೂಲಕ ಯಾವುದೇ ಜಾತಿಯನ್ನು ಪಟ್ಟಿಯಲ್ಲಿ ಸೇರಿಸುವುದಾಗಲಿ, ಕೈಬಿಡುವುದಾಗಲಿ ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.

 ‘‘ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಿಸುವಂತೆ ನಾವು ಆಗ್ರಹಿಸಿದ್ದೆವು. ಇದರಿಂದ 17 ಜಾತಿಗಳನ್ನು ಈ ಪಟ್ಟಿಗೆ ಸೇರಿಸಿದರೂ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಪಡೆಯುವ ಯಾವುದೇ ಜಾತಿಗಳಿಗೆ ತೊಂದರೆ ಉಂಟಾಗುವುದಿಲ್ಲ. ಈ ಬಗ್ಗೆ ಕಾಂಗ್ರೆಸ್ ಆಗಲಿ, ಕೇಂದ್ರದಲ್ಲಿರುವ ಬಿಜೆಪಿ ಸರಕಾರವಾಗಲಿ ಏನೊಂದನ್ನೂ ಮಾಡದೇ ಇರುವುದು ದುರಾದೃಷ್ಟಕರ’’ ಎಂದು ಅವರು ಹೇಳಿದರು.

 ಈ ‘ಅಸಾಂವಿಧಾನಿಕ ಆದೇಶ’ವನ್ನು ಕೂಡಲೇ ಹಿಂಪಡೆಯುವಂತೆ ಹಾಗೂ ಪರಿಶಿಷ್ಟ ಜಾತಿಗೆ ಯಾವುದೇ ತೊಂದರೆ ಉಂಟಾಗದಂತೆ ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಿಸುವಂತೆ ಮಾಯಾವತಿ ಆಗ್ರಹಿಸಿದ್ದಾರೆ. ಕಳೆದ ವಾರ ಉತ್ತರಪ್ರದೇಶ ಸರಕಾರ 17 ಇತರ ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News