ರಾಜೀವ್ ಸಕ್ಸೇನಾಗೆ ಸಂಬಂಧಿಸಿದ ವಿವಿಧ ಸ್ಥಳಗಳಿಗೆ ಐಟಿ ಇಲಾಖೆ ದಾಳಿ

Update: 2019-07-01 18:28 GMT

ಹೊಸದಿಲ್ಲಿ, ಜು. 1: ತೆರಿಗೆ ವಂಚನೆ ತನಿಖೆಯ ಒಂದು ಭಾಗವಾಗಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ಆರೋಪಿಯಾಗಿರುವ ರಾಜೀವ್ ಸಕ್ಸೇನಾಗೆ ಸಂಬಂಧಿಸಿದ ಹಲವು ಸ್ಥಳಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ವಿದೇಶದಲ್ಲಿ ಸಕ್ಸೇನಾಗೆ ನಂಟು ಹೊಂದಿರುವ ಅಘೋಷಿತ ಆಸ್ತಿ ಹಾಗೂ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಸುಳಿವು ದೊರೆತ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ರವಿವಾರ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಸಕ್ಸೇನಾರನ್ನು ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಕೂಡ ಇದೆ.

ರಕ್ತದ ಕ್ಯಾನ್ಸರ್ ಹಾಗೂ ಇತರ ಅನಾರೋಗ್ಯಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆದುಕೊಳ್ಳಲು ವಿದೇಶಕ್ಕೆ ತೆರಳಲು ಸಕ್ಸೇನಾರಿಗೆ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಸುಪ್ರೀಂ ಕೋರ್ಟ್ ಕಳೆದ ವಾರ ರದ್ದುಪಡಿಸಿತ್ತು. 3,600 ಕೋಟಿ ರೂಪಾಯಿ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದದ ಪ್ರಕರಣದಲ್ಲಿ ಸಕ್ಸೇನರನ್ನು ಜಾರಿ ನಿರ್ದೇಶನಾಲಯ ಮಾಫಿ ಸಾಕ್ಷಿದಾರ ಎಂದು ಪರಿಗಣಿಸಿತ್ತು. ಜೂನ್ 25ರಿಂದ ಜುಲೈ 24ರ ವರೆಗೆ ಯುಎಇ, ಇಂಗ್ಲೆಂಡ್, ಯುರೋಪ್‌ಗೆ ಭೇಟಿಗೆ ಅನುಮತಿ ನೀಡಿ ಜೂನ್ 10ರಂದು ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ರಜಾಕಾಲದ ನ್ಯಾಯಪೀಠ ಸಕ್ಸೇನಾ ಅವರಿಗೆ ನೋಟಿಸು ಜಾರಿ ಮಾಡಿತ್ತು.

ದುಬೈ ಮೂಲದ ಕಂಪೆನಿ ಯುಎಚ್‌ವೈ ಸಕ್ಸೇನಾ ಹಾಗೂ ಮ್ಯಾಟ್ರಿಕ್ಸ್ ಹೋಲ್ಟಿಂಗ್ಸ್ ನಿರ್ದೇಶಕನಾಗಿರುವ ಸಕ್ಸೇನಾ ಹೆಸರು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪ ಪಟ್ಟಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News