ಎನ್‌ಆರ್‌ಸಿ ಜನಗಣತಿಯ ಕಾಲಾವಧಿ ಜುಲೈ 31ರವರೆಗೆ ವಿಸ್ತರಣೆ
ಹೊಸದಿಲ್ಲಿ,ಜು.1: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ನವೀಕರಿಸುವುದಕ್ಕಾಗಿ ಅಸ್ಸಾಂನಲ್ಲಿ ಜನಗಣತಿ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಲು ಇರುವ ಕಾಲಾವಕಾಶವನ್ನು ಕೇಂದ್ರ ಸರಕಾರವು ಒಂದು ತಿಂಗಳಿಗೆ ವಿಸ್ತರಿಸಿದೆ.
ಅಸ್ಸಾಂನ ನಿವಾಸಿಗಳ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯನ್ನು ನವೀಕರಣಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜೂನ್ 30ನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿತ್ತು. ಆದರೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಗೆ ಸಂಬಂಧಿಸಿದ ಜನಗಣತಿ ಪ್ರಕ್ರಿಯೆಯನ್ನು 2019ರ ಜುಲೈ 31ರೊಳಗೆ ವಿಸ್ತರಿಸಿರುವುದಾಗಿ ಪೌರತ್ವ ನೋಂದಣಿಯ ರಿಜಿಸ್ಟ್ರಾರ್ ಜನರಲ್ ವಿವೇಕ್ ಜೋಶಿ ಸೋಮವಾರ ಬಿಡುಗಡೆಗೊಳಿಸಿದ ಅಧಿ ಸೂಚನೆಯಲ್ಲಿ ತಿಳಿಸಿದ್ದಾರೆ.
2013ರ ಡಿಸೆಂಬರ್ 6ರಂದು ಇಡೀ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಮೂರು ವರ್ಷಗಳೊಳಗೆ ಪೂರ್ಣಗೊಳಿಸಬೇಕೆಂದು ಕೇಂದ್ರ ಸರಕಾರ ಮೊದಲ ಅಧಿಸೂಚನೆಯನ್ನು ಹೊರಡಿಸಿತ್ತು. ಆದಾಗ್ಯೂ, ಆನಂತರ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಳಿಸುವ ಕಾಲಾವಧಿಯನ್ನು ಅದು ಆರು ಬಾರಿ ವಿಸ್ತರಿಸಿತ್ತು.