ವಿರಾಟ್ ಪಡೆಗೆ ಇಂದು ಬಾಂಗ್ಲಾದೇಶ ಎದುರಾಳಿ

Update: 2019-07-02 03:21 GMT

ಬರ್ಮಿಂಗ್‌ಹ್ಯಾಮ್, ಜು.1: ಈ ವರ್ಷದ ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೋಲಿನ ಕಹಿ ಉಂಡಿರುವ ಭಾರತ ಮಂಗಳವಾರ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಕೂಟದ 40ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾವನ್ನು ಮಣಿಸುವುದರೊಂದಿಗೆ ಸೆಮಿ ಫೈನಲ್‌ತಲುಪಲು ಎದುರು ನೋಡುತ್ತಿದೆ.

ವಿಶ್ವಕಪ್‌ನಲ್ಲಿ ತನ್ನ ಸಾಮರ್ಥ್ಯಕ್ಕಿಂತ ಉತ್ತಮ ಪ್ರದರ್ಶನ ನೀಡುವ ಮೂಲಕ ಬಾಂಗ್ಲಾದೇಶ ಎಲ್ಲರ ಗಮನ ಸೆಳೆಯುತ್ತಿದೆ. ಬಾಂಗ್ಲಾ ತಂಡ ಮೊತ್ತ ಮೊದಲ ಬಾರಿ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ತಲುಪಬೇಕಾದರೆ ಭಾರತ ಹಾಗೂ ಪಾಕ್ ವಿರುದ್ಧ ಉಳಿದೆರಡು ಪಂದ್ಯಗಳನ್ನು ಜಯಿಸಬೇಕಾದ ಕಠಿಣ ಸವಾಲು ಎದುರಿಸುತ್ತಿದೆ.

ಬಾಂಗ್ಲಾದೇಶ 7 ಪಂದ್ಯಗಳಲ್ಲಿ ಏಳು ಅಂಕವನ್ನು ಗಳಿಸಿ ವಿಶ್ವಕಪ್ ಅಂಕಪಟ್ಟಿಯಲ್ಲಿ ಪ್ರಸ್ತುತ 6ನೇ ಸ್ಥಾನದಲ್ಲಿದೆ. ಭಾರತ ಒಟ್ಟು 11 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ.

ಭಾರತ ಸೆಮಿ ಫೈನಲ್‌ಗೆ ತೇರ್ಗಡೆಯಾಗ ಬೇಕಾದರೆ ಉಳಿದ ಎರಡು ಲೀಗ್ ಪಂದ್ಯಗಳ ಪೈಕಿ ಒಂದನ್ನು ಜಯಿಸಬೇಕು. ಭಾರತ ಜು.6 ರಂದು ಶ್ರೀಲಂಕಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.

ಬಾಂಗ್ಲಾದೇಶದ ಪರ ಶಾಕಿಬ್ ಅಲ್ ಹಸನ್ ಬ್ಯಾಟ್ ಹಾಗೂ ಬಾಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ತನ್ನ ಆಲ್‌ರೌಂಡ್ ಪ್ರದರ್ಶನ(476 ರನ್, 10 ವಿಕೆಟ್‌ಗಳು)ದಿಂದ ಗಮನ ಸೆಳೆಯುತ್ತಿದ್ದು,ಬಾಂಗ್ಲಾ ಇವರನ್ನೇ ಹೆಚ್ಚು ನೆಚ್ಚಿಕೊಂಡಿದೆ.

ಮತ್ತೊಂದೆಡೆ, ಭಾರತ ಪಾಳಯದಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಕೇವಲ 6 ಇನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ. ಉಭಯ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ತಮ್ಮ ಸ್ಟಾರ್ ಆಟಗಾರರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿವೆ.

ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕಿಂತ ಮೊದಲು ತೀವ್ರ ಹಿನ್ನಡೆ ಕಂಡಿದೆ. ತಮಿಳುನಾಡಿನ ಆಲ್‌ರೌಂಡರ್ ವಿಜಯ ಶಂಕರ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆಗೈದಿದ್ದ ಮಾಯಾಂಕ್ ಅಗರ್ವಾಲ್, ಶಂಕರ್ ಬದಲಿಗೆ ತಂಡವನ್ನು ಸೇರುವ ಸಾಧ್ಯತೆಯಿದೆ.

ಭಾರತದ ಅವಳಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲರಾಗಿದ್ದರು. ಭಾರತ ಇಬ್ಬರು ಸ್ಪಿನ್ನರ್‌ಗಳ ಪೈಕಿ ಒಬ್ಬರನ್ನು ಕೈಬಿಟ್ಟು ವೇಗದ ಬೌಲರ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಭಾರತ 2007ರ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು.

ಅಂತಿಮ 11ರ ಬಳಗದಲ್ಲಿ ಬದಲಾವಣೆ

ಇಂಗ್ಲೆಂಡ್ ವಿರುದ್ಧ ಸೋಲಿನ ಕಹಿ ಉಂಡಿರುವ ಭಾರತ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕೇದಾರ್ ಜಾಧವ್ ಹಾಗೂ ಯಜುವೇಂದ್ರ ಚಹಾಲ್ ಬದಲಿಗೆ ಭುವನೇಶ್ವರ ಕುಮಾರ್ ಹಾಗೂ ರವೀಂದ್ರ ಜಡೇಜ ಅಂತಿಮ-11ರ ಬಳಗದಲ್ಲಿ ಸ್ಥಾನ ಗಿಟ್ಟಿಸುವ ಸ್ಪರ್ಧೆಯಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ 31 ರನ್ ಸೋಲಿನಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಹೆಚ್ಚು ಸಮಯಾವಕಾಶವಿಲ್ಲವಾಗಿದೆ. ಫಿನಿಶರ್ ಪಾತ್ರವನ್ನು ನಿಭಾಯಿಸಲು ಎಂಎಸ್ ಧೋನಿ ವೈಫಲ್ಯ ಸೇರಿದಂತೆ ಮಧ್ಯಮ ಕ್ರಮಾಂಕದ ಆಟಗಾರರ ಕಳಪೆ ಪ್ರದರ್ಶನ ತಂಡಕ್ಕೆ ಚಿಂತೆಯಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಕೊನೆಯ 5 ಓವರ್‌ಗಳಲ್ಲಿ ಭಾರತ ಕೇವಲ 39 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಧೋನಿ ಹಾಗೂ ಜಾಧವ್ ದೊಡ್ಡ ಹೊಡೆತಕ್ಕೆ ಕೈಹಾಕಲು ಹಿಂದೇಟು ಹಾಕಿದ್ದರು.

ಧೋನಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದು, ಜಾಧವ್ ಅವರು ಜಡೇಜಗೆ ಜಾಗ ಖಾಲಿ ಮಾಡಬೇಕಾಗಿದೆ. ಜಾಧವ್‌ಗೆ ಹೋಲಿಸಿದರೆ ಜಡೇಜ 6-7ನೇ ಕ್ರಮಾಂಕದಲ್ಲಿ ಬಿಗ್ ಹಿಟ್ಟರ್ ಆಗಿದ್ದು, ಎಡಗೈ ಸ್ಪಿನ್ ಬೌಲಿಂಗ್ ಮೂಲಕ ವಿಕೆಟ್‌ನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಬರ್ಮಿಂಗ್‌ಹ್ಯಾಮ್ ಮೈದಾನದ ಒಂದು ಬದಿಯ ಬೌಂಡರಿ ಲೈನ್ 60 ಮೀಟರ್‌ಗಿಂತ ಕಡಿಮೆ ಯಿದ್ದು, ಇಂಗ್ಲೆಂಡ್‌ನ ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ ಚಿಕ್ಕ ಬೌಂಡರಿ ಲಾಭ ಪಡೆದು ಭಾರತದ ಸ್ಪಿನ್ನರ್‌ಗಳಾದ ಚಹಾಲ್ ಹಾಗೂ ಕುಲದೀಪ್ ಯಾದವ್‌ರ ಬೆಂಡೆತ್ತಿದ್ದರು.

ಭುವಿ ಫಿಟ್: ಇದೇ ವೇಳೆ ವೇಗದ ಬೌಲರ್ ಭುವನೇಶ್ವರ ಕುಮಾರ್ ಸಂಪೂರ್ಣ ಫಿಟ್ ಆಗಿದ್ದು, ನಾಳೆಯ ಪಂದ್ಯದ ಆಯ್ಕೆಗೆ ಲಭ್ಯರಿದ್ದಾರೆ. ಭಾರತ ಟೂರ್ನಿಯಲ್ಲಿ ಮೊದಲ ಬಾರಿ ಮೂವರು ವೇಗಿಗಳನ್ನು ಆಡಿಸಿದರೆ, ಚಹಾಲ್‌ಅಂತಿಮ-11ರ ಬಳಗ ದಿಂದ ಹೊರಗುಳಿಯ ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News