ಸೇತುವೆಯಲ್ಲಿ ಮಾಯವಾಗುತ್ತಿರುವ ವಾಹನಗಳು!: ಹಲವರ ತಲೆಗೆ ಹುಳಬಿಟ್ಟ ವಿಡಿಯೋದ ರಹಸ್ಯ ಇಲ್ಲಿದೆ…

Update: 2019-07-02 12:05 GMT

ಹೊಸದಿಲ್ಲಿ, ಜು.2: ‘ಆಪ್ಟಿಕಲ್ ಇಲ್ಯೂಶನ್’ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುವುದು ಮಾತ್ರವಲ್ಲ ನೆಟ್ಟಿಗರ ತಲೆಯನ್ನೂ ಕೆಡಿಸುತ್ತವೆ. ಇಂತಹುದೇ ಒಂದು ‘ಆಪ್ಟಿಕಲ್ ಇಲ್ಯೂಶನ್’ ಇದೀಗ ವೈರಲ್ ಆಗಿದೆ.

ಈ ವೈರಲ್ ವೀಡಿಯೋದಲ್ಲಿ ಸೇತುವೆಯೊಂದರಲ್ಲಿ ಸಾಗುತ್ತಿರುವಂತೆ ಕಾಣುವ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ಒಂದೆಡೆ ತಿರುಗುತ್ತಿದ್ದಂತೆಯೇ ಮಾಯವಾಗುತ್ತದೆ. ಅವುಗಳು ನದಿಯತ್ತ ತಿರುಗುತ್ತಿವೆಯೋ ಎಂಬ ಭ್ರಮೆಯನ್ನೂ ಈ ವೀಡಿಯೋ ಸೃಷ್ಟಿಸುತ್ತದೆ. ಡೇನಿಯಲ್ ಎಂಬ ಟ್ವಿಟ್ಟರಿಗ ಈ ವೀಡಿಯೋವನ್ನು ಮೊದಲು ಪೋಸ್ಟ್ ಮಾಡಿದ್ದು ಅಲ್ಲಿ ಕಾಣಿಸುವ ವಾಹನಗಳು ಎಲ್ಲಿ ಮರೆಯಾಗುತ್ತವೆ ಎಂಬುದೇ ತಿಳಿಯುವುದಿಲ್ಲ.

“ಹೌದು ವಾಹನಗಳು ಹಾಗೆಯೇ ಕಾಣೆಯಾಗುತ್ತವೆ'' ಎಂದು ವೀಡಿಯೋ ಶೇರ್ ಮಾಡಿದ ಡೇನಿಯಲ್ ದೃಢ ಪಡಿಸುತ್ತಾರೆ. ಈ ವೀಡಿಯೋವನ್ನು ಇಲ್ಲಿಯ ತನಕ 63,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಅಂತೂ ಇಂತೂ ಈ ವೀಡಿಯೋ ನೋಡಿ ತಲೆಕೆರೆದುಕೊಳ್ಳುವಂತಾಗಿದೆ. ಕೆಲವರಂತೂ ಈ ವೀಡಿಯೋದಲ್ಲಿ ಕಾಣಿಸುವ ಸೇತುವೆ ನಿಗೂಢ ಬರ್ಮುಡಾ ಟ್ರಯಾಂಗಲ್ ನಂತೆ ಎಂದೂ ಹೇಳಿ ಬಿಟ್ಟರು. ಈ ರೀತಿಯಾಗಿ ಹಲವರು ಹಲವು ರೀತಿಯ ವಿವರಣೆ ನೀಡಿದ್ದು ಕೊನೆಗೆ ಕೆಲವರು ಈ ವೀಡಿಯೋದ ಅಸಲಿಯತ್ತನ್ನು ಬಯಲುಗೊಳಿಸುವಲ್ಲಿ ಸಫಲರಾಗಿದ್ದಾರೆ.

ವಾಸ್ತವವೇನು..?

ಈ ಚಿತ್ರದಲ್ಲಿ ಕಾಣಿಸುವ ಸೇತುವೆ ವಾಸ್ತವವಾಗಿ ಸೇತುವೆಯಲ್ಲ, ಅದು ರಸ್ತೆಯ ಮುಂಭಾಗದಲ್ಲಿರುವ ಕಟ್ಟಡದ ಮೇಲ್ಭಾಗ. ಅದರ ರಚನೆಯು ಅದು ಸೇತುವೆ ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುತ್ತದೆ. ಚಿತ್ರದಲ್ಲಿ ನದಿಯಂತೆ ಕಾಣುತ್ತಿರುವುದು ನಿಜವಾಗಿಯೂ ನದಿಯಲ್ಲ, ಕಟ್ಟಡದ ಟೆರೇಸ್ ಆಗಿದೆ. ಟೆರೇಸಿನಲ್ಲಿರುವ ಕೆಸರು ನೀರಿನಿಂದಾಗಿ ಅದು ನದಿಯಂತೆ ಕಾಣುತ್ತಿದೆ. ವಾಸ್ತವವಾಗಿ ವಾಹನಗಳೆಲ್ಲವೂ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಸಾಗುತ್ತದೆ. ಹೀಗೆ ಕಟ್ಟಡದ ಮುಂಭಾಗದಿಂದ ವಾಹನಗಳು ಹಾದುಹೋಗುವಾಗ ಅದು ಮಾಯವಾದಂತೆ ನಮಗನಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News