ಫೇಸ್‌ಬುಕ್‌ನ 4 ಕಟ್ಟಡಗಳ ತೆರವಿಗೆ ಕಾರಣವಾದ ಒಂದು ಪೊಟ್ಟಣ

Update: 2019-07-02 17:31 GMT

ಸಾನ್‌ಫ್ರಾನ್ಸಿಸ್ಕೊ, ಜು. 2: ನರಗಳ ದೌರ್ಬಲ್ಯಕ್ಕೆ ಕಾರಣವಾಗುವ ರಾಸಾಯನಿಕ ‘ಸಾರಿನ್’ನ ಪೊಟ್ಟಣವೊಂದು ಫೇಸ್‌ಬುಕ್ ಕಂಪೆನಿಯ ಸಿಲಿಕಾನ್ ವ್ಯಾಲಿ ಅಂಚೆ ಕಟ್ಟಡದಲ್ಲಿ ಪತ್ತೆಯಾದ ಬಳಿಕ, ಫೇಸ್‌ಬುಕ್ ಸೋಮವಾರ ತನ್ನ ನಾಲ್ಕು ಕಟ್ಟಡಗಳನ್ನು ತೆರವುಗೊಳಿಸಿದೆ ಹಾಗೂ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಟ್ಟಣದಲ್ಲಿದ್ದ ಪದಾರ್ಥವು ರಾಸಾಯನಿಕ ಎನ್ನುವುದು ಖಚಿತವಾದ ಬಳಿಕ ಸಾಮಾಜಿಕ ಮಾಧ್ಯಮ ದೈತ್ಯ ಈ ಕ್ರಮ ತೆಗೆದುಕೊಂಡಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ಶಂಕಿತ ಪೊಟ್ಟಣದ ಸಂಪರ್ಕಕ್ಕೆ ಬಂದ ಜನರು, ಸಾರಿನ್ ರಾಸಾಯನಿಕಕ್ಕೆ ಗುರಿಯಾದ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ ಎಂದು ಮೆನ್ಲೊ ಪಾರ್ಕ್ ನಗರದ ಫಯರ್ ಮಾರ್ಶಲ್ ಜಾನ್ ಜಾನ್ಸನ್ ಹೇಳಿದರು.

‘‘ಫೇಸ್‌ಬುಕ್ ಕಟ್ಟಡಕ್ಕೆ ಬರುವ ಎಲ್ಲ ಪೊಟ್ಟಣಗಳನ್ನು ತಪಾಸಣೆಗೊಳಪಡಿಸಲಾಗುತ್ತದೆ ಹಾಗೂ ತಪಾಸಣೆಯಲ್ಲಿ ಅದು ರಾಸಾಯನಿಕ ಎನ್ನುವುದು ಸಾಬೀತಾಗಿದೆ. ಹಾಗಾಗಿ, ಮಾದರಿ ವಿಧಾನಗಳಂತೆ ಅವರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈಗ ನಾವು, ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’’ ಎಂದರು.

‘ಬಿಳಿಯ ರಾಷ್ಟ್ರೀಯತೆ’ ನಿವಾರಿಸಲು ಹೆಚ್ಚಿನ ಕ್ರಮ: ಫೇಸ್‌ಬುಕ್

 ‘ಬಿಳಿಯ ರಾಷ್ಟ್ರೀಯತೆ’ ಮತ್ತು ‘ಬಿಳಿಯರ ಪ್ರತ್ಯೇಕತೆ’ಗಳನ್ನು ಉತ್ತೇಜಿಸುವ ಬರಹಗಳನ್ನು ನಿವಾರಿಸಲು ಹೊಸ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಫೇಸ್‌ಬುಕ್ ಸೋಮವಾರ ಹೇಳಿದೆ.

ಈ ಪಿಡುಗುಗಳನ್ನು ನಿವಾರಿಸಲು ಫೇಸ್‌ಬುಕ್ ತೆಗೆದುಕೊಂಡ ಕ್ರಮಗಳು ‘ತೀರಾ ಕಡಿಮೆ’ಯಾಗಿವೆ ಎಂಬುದಾಗಿ ಬಾಹ್ಯ ಪರಿಶೋಧನೆಯೊಂದು ಹೇಳಿದ ಬಳಿಕ ಫೇಸ್‌ಬುಕ್ ಈ ಪ್ರತಿಕ್ರಿಯೆ ನೀಡಿದೆ.

ಕೇವಲ ಈ ಪದಗಳನ್ನು ಹೊಗಳುವ, ಬೆಂಬಲಿಸುವ ಅಥವಾ ಪ್ರತಿನಿಧಿಸುವುದನ್ನು ನಿಷೇಧಿಸುವ ಫೇಸ್‌ಬುಕ್ ನೀತಿಯಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ ಎಂಬುದಾಗಿ ನಾಗರಿಕ ಹಕ್ಕುಗಳ ವಕೀಲೆ ಲಾರಾ ಮರ್ಫಿ ನೇತೃತ್ವದ ಪರಿಶೋಧನೆ ಅಭಿಪ್ರಾಯಪಟ್ಟಿದೆ.

‘‘ಇದರ ಪರಿಣಾಮವಾಗಿ, ಇದೇ ಹಾನಿಯನ್ನು ಉಂಟು ಮಾಡುವ ಬರಹಗಳು ಫೇಸ್‌ಬುಕ್‌ನಲ್ಲಿ ಉಳಿಯುವಂತಾಗಿದೆ’’ ಎಂದು ಪರಿಶೋಧನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News