ಬಿಹಾರದಲ್ಲಿ ಶೇ.50ಕ್ಕೂ ಅಧಿಕ ವೈದ್ಯರ ಹುದ್ದೆಗಳು ಖಾಲಿ!

Update: 2019-07-02 18:04 GMT

ಹೊಸದಿಲ್ಲಿ,ಜು.2: ಮಿದುಳು ಜ್ವರಕ್ಕೆ ಮಕ್ಕಳು ಬಲಿಯಾಗುತ್ತಿರುವ ಬಿಹಾರದಲ್ಲಿ ವೈದ್ಯಕೀಯ ಸೌಲಭ್ಯಗಳ ಕುರಿತು ಆಘಾತಕಾರಿ ಅಂಶ ಮಂಗಳವಾರ ಬಯಲಾಗಿದೆ. ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 12,206 ವೈದ್ಯರ ಹುದ್ದೆಗಳಿವೆಯಾದರೂ ಕೇವಲ 5,205 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ,ಉಳಿದ ಹುದ್ದೆಗಳು ಖಾಲಿಯಿವೆೆ ಎಂದು ಬಿಹಾರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಇದೇ ರೀತಿ ಸರಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 19,155 ನರ್ಸ್‌ಗಳ ಹುದ್ದೆಗಳಿದ್ದರೂ ಕೇವಲ 5,634 ನರ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಝಫ್ಫರ್‌ಪುರದಲ್ಲಿ ಮಿದುಳು ಜ್ವರದಿಂದ 100ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಸೌಲಭ್ಯಗಳು,ಪೌಷ್ಟಿಕತೆ ಮತ್ತು ನೈಮರ್ಲ್ಯಗಳ ಸ್ಥಿತಿಗತಿ ವರದಿಯನ್ನು ಒಂದು ವಾರದೊಳಗೆ ತನಗೆ ಸಲ್ಲಿಸುವಂತೆ ನ್ಯಾಯಾಲಯವು ಜೂ.24ರಂದು ರಾಜ್ಯ ಸರಕಾರಕ್ಕೆ ಆದೇಶಿಸಿತ್ತು.

 ಮಿದುಳು ಜ್ವರದ 824 ಪ್ರಕರಣಗಳು ವರದಿಯಾಗಿದ್ದು,157 ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ 215 ಪ್ರಕರಣಗಳಲ್ಲಿ 24 ಸಾವುಗಳಿಗೆ ಮಿದುಳು ಜ್ವರ ಕಾರಣವೇ ಎನ್ನುವುದು ತಿಳಿದು ಬಂದಿಲ್ಲ ಎಂದು ಸರಕಾರವು ಅಫಿಡವಿಟ್‌ನಲ್ಲಿ ತಿಳಿಸಿದೆ.

ಮಿದುಳು ಜ್ವರದ ಹರಡುವಿಕೆಯನ್ನು ತಡೆಯಲು ಸರಕಾರವು ಈಗಾಗಲೇ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂದೂ ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಒಟ್ಟಾರೆಯಾಗಿ ಶೇ.57ರಷ್ಟು ವೈದ್ಯರು,ಶೇ.71ರಷ್ಟು ನರ್ಸ್‌ಗಳು,ಶೇ.72ರಷ್ಟು ಲ್ಯಾಬ್ ಟಿಕ್ನಿಷಿಯನ್‌ಗಳು ಮತ್ತು ಶೇ.58ರಷ್ಟು ಫಾರ್ಮಸಿಸ್ಟ್‌ಗಳ ಹುದ್ದೆಗಳು ಖಾಲಿಯಿವೆ ಎಂದು ಸರಕಾರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News