ದಾವೂದ್ ಬಂಟನ ಅಮೆರಿಕ ಗಡಿಪಾರು ತಡೆಯಲು ಪಾಕ್ ಪ್ರಯತ್ನ

Update: 2019-07-02 18:32 GMT

ಲಂಡನ್, ಜು. 2: ಭೂಗತ ಪಾತಕಿ ದಾವೂದ್ ಇಬ್ರಾಹೀಂ‌ನ ಬಲಗೈ ಬಂಟ ಜಬೀರ್ ಮೋತಿವಾಲಾ ಅಮೆರಿಕಕ್ಕೆ ಗಡಿಪಾರು ಆಗುವುದನ್ನು ತಡೆಯಲು ಲಂಡನ್ ನಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಮೋತಿವಾಲಾನನ್ನು ಗಡಿಪಾರುಗೊಳಿಸಬೇಕೆಂದು ಕೋರಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಲ್ಲಿಸಿದ ಮನವಿಯ ವಿಚಾರಣೆಯನ್ನು ಲಂಡನ್‌ನ ವೆಸ್ಟ್‌ ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಡೆಸುತ್ತಿದೆ.

ಮೋತಿವಾಲಾ ಭಾರೀ ಖಿನ್ನತೆಯಿಂದ ಬಳಲುತ್ತಿದ್ದಾನೆ ಹಾಗೂ ಕಪ್ಪು ಹಣ ಬಿಳುಪು, ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ಭೂಗತ ಅಪರಾಧ ಆರೋಪಗಳನ್ನು ಎದುರಿಸಲು ಅಮೆರಿಕಕ್ಕೆ ಪ್ರಯಾಣಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದಾಗಿ ಡಿ-ಕಂಪೆನಿ (ದಾವೂದ್ ಇಬ್ರಾಹೀಮ್ ತಂಡ)ಯ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು ಹಾಗೂ ಇದಕ್ಕೆ ಪಾಕಿಸ್ತಾನದ ರಾಜತಾಂತ್ರಿಕರು ದನಿಗೂಡಿಸಿದರು.

ದಾವೂದ್ ಇಬ್ರಾಹೀಮ್‌ನ ಬಲಗೈ ಬಂಟರ ಪೈಕಿ ಒಬ್ಬನಾಗಿರುವ ಮೋತಿವಾಲಾನನ್ನು, ಎಫ್‌ಬಿಐ ನೀಡಿದ ಸುಳಿವಿನಂತೆ ಕಪ್ಪು ಹಣ ಬಿಳುಪು ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಆರೋಪಗಳಲ್ಲಿ 2018 ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ಬಂಧಿಸಲಾಗಿತ್ತು.

ಲಂಡನ್ ‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಮೋತಿವಾಲಾನ ಗಡಿಪಾರನ್ನು ತಡೆಯಲು ಈ ಮೊದಲು ಪ್ರಯತ್ನಿಸಿತ್ತು ಎಂಬುದಾಗಿ ಮೂಲಗಳು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಹೇಳಿವೆ. ‘ಮೋತಿವಾಲಾ ಪಾಕಿಸ್ತಾನದಲ್ಲಿ ಸುಪ್ರಸಿದ್ಧ ಹಾಗೂ ಗೌರವಾನ್ವಿತ ಉದ್ಯಮಿ’ ಎಂಬ ಒಕ್ಕಣೆಯುಳ್ಳ ಪತ್ರವೊಂದನ್ನು ಪಾಕಿಸ್ತಾನದ ರಾಯಭಾರ ಕಚೇರಿಯು ಆರೋಪಿ ಪರ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಒಂದು ವೇಳೆ ಮೋತಿವಾಲಾ ಅಮೆರಿಕಕ್ಕೆ ಗಡಿಪಾರಾದರೆ, ದಾವೂದ್ ಇಬ್ರಾಹೀಂ‌ನ ಭೂಗತ ಜಾಲ ಮತ್ತು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವಿಸಸ್ ಇಂಟಲಿಜನ್ಸ್ (ಐಎಸ್‌ಐ) ನಡುವಿನ ಸಂಬಂಧದ ಬಗ್ಗೆ ಬಾಯಿ ಬಿಡಬಹುದು ಎಂಬ ಭೀತಿ ಪಾಕಿಸ್ತಾನವನ್ನು ಕಾಡುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News