×
Ad

ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿದ ಶಿಕ್ಷಕ ಮಹಾಶಯ!

Update: 2019-07-03 09:42 IST

ಶ್ರೀನಗರ, ಜು.3: ನಡವಳಿಕೆ ಸರಿಪಡಿಸಿಕೊಳ್ಳದಿದ್ದರೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವುದಾಗಿ ಖಾಸಗಿ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿರುವ ಕುರಿತ ವೀಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಪ್ವಾರಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ಬಗ್ಗೆ ಮಾಹಿತಿ ಇರುವವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

"ಪುರುಷನೊಬ್ಬ ಬಾಲಕನನ್ನು ಒಂದು ಕೈಯಿಂದ ಹಿಡಿದು ಮತ್ತೊಂದು ಕೈಯಲ್ಲಿ ಮಚ್ಚು ಹಿಡಿದು, ಕೊಚ್ಚಿಹಾಕುವುದಾಗಿ ಬೆದರಿಸುತ್ತಿರುವ ಬಗೆಗಿನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಾಗಹಾತ್ ಮಗಾಂನ ಫ್ಯೂಚರ್ ಎಜ್ಯುಕೇಶನ್ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೀಡಿಯೊ ಪರಿಗಣಿಸಿ, ಹಂದ್ವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಅಳುತ್ತಿರುವ ವಿದ್ಯಾರ್ಥಿಯನ್ನು ಒಂದು ಕೈಯಿಂದ ಹಿಡಿದು ನಿನ್ನ ನಡತೆ ಸುಧಾರಿಸಿಕೊಳ್ಳದಿದ್ದರೆ ಕೊಚ್ಚಿಹಾಕುತ್ತೇನೆ ಎಂದು ಅಬ್ಬರಿಸುವ ದೃಶ್ಯ ವೀಡಿಯೊದಲ್ಲಿದೆ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಲ್ಲ; ಬದಲಾಗಿ ಚಳಿಗಾಲದ ಉಡುಗೆಯಾದ ಪೈರನ್ ಮತ್ತು ಸ್ವೆಟ್ಟರ್‌ನಲ್ಲಿ ಕಂಡುಬರುತ್ತಿದ್ದಾರೆ. ಶಿಕ್ಷಕನ ಈ ಕ್ರಮಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News