ಹಲವರಿಗೆ ‘ದೇಶವಿರೋಧಿ’ ಹಣೆಪಟ್ಟಿ ಕಟ್ಟಿದ ಗುಂಪಿಗೆ ಆರೆಸ್ಸೆಸ್ ಅಂಗಸಂಸ್ಥೆಯ ಮಾಧ್ಯಮ ಪ್ರಶಸ್ತಿ!

Update: 2019-07-03 16:59 GMT

ಹೊಸದಿಲ್ಲಿ, ಜು.3: ಪುಲ್ವಾಮ ದಾಳಿಯ ನಂತರ ಹಲವರಿಗೆ ದೇಶ ವಿರೋಧಿ ಪಟ್ಟ ಕಟ್ಟಿದ ‘ಕ್ಲೀನ್ ದಿ ನೇಷನ್’ ಎಂಬ ಸಂಘಟನೆಗೆ   ಆರೆಸ್ಸೆಸ್ ಪ್ರೇಷಿತ ಇಂದ್ರಪ್ರಸ್ಥ ವಿಶ್ವ ಸಂವಾದ್ ಕೇಂದ್ರದ ಸಂಸ್ಥೆಯ ‘ಸೋಶಿಯಲ್ ಮೀಡಿಯಾ ಪತ್ರಕಾರಿತಾ ನಾರದ್ ಸಮ್ಮಾನ್ ಪ್ರಶಸ್ತಿ’ಯನ್ನು ನೀಡಲಾಗಿದೆ.

ಸಹಾಯಕ ಪ್ರೊಫೆಸರ್ ಒಬ್ಬರನ್ನು ಸೇವೆಯಿಂದ ವಜಾಗೊಳಿಸಿದ ಗುವಾಹಟಿ ಕಾಲೇಜಿನ ಪತ್ರ, ನಾಲ್ಕು ಕಾಶ್ಮೀರಿ ವಿದ್ಯಾರ್ಥಿನಿಯರನ್ನು ಡಿಬಾರ್ ಮಾಡಿದ ರಾಜಸ್ಥಾನ್ ವಿವಿಯ ಪತ್ರ, ಜೈಪುರ್ ನಲ್ಲಿ ಒಂದು ಬಂಧನಕ್ಕೆ ಕಾರಣವಾದ ಟ್ವಿಟರ್ ಪೋಸ್ಟ್, ಕಾಶ್ಮೀರಿ ವಿದ್ಯಾರ್ಥಿಯೊಬ್ಬನ ಸಸ್ಪೆಂಡ್ ಮಾಡಿದ ಗ್ರೇಟರ್ ನೊಯ್ಡಾದ ಇಂಜಿನಿಯರಿಂಗ್ ಕಾಲೇಜಿನ ಪತ್ರ ಹಾಗೂ ಬಿಹಾರದ ಕತಿಹಾರ್ ನಲ್ಲಿ ಪದವಿ ವಿದ್ಯಾರ್ಥಿಯೊಬ್ಬನ ಬಂಧನಕ್ಕೆ ಕಾರಣವಾದ ಫೇಸ್ ಬುಕ್ ಪೋಸ್ಟ್ ಈ ‘ಕ್ಲೀನ್ ದಿ ನೇಷನ್’ ಸಂಸ್ಥೆಯ ಸಾಧನೆಯ ಪುರಾವೆಯಾಗಿದೆ!.

ಪುಲ್ವಾಮ ಉಗ್ರ ದಾಳಿಯ ನಂತರ ಭಾರತ-ಪಾಕ್ ನಡುವಿನ ಉದ್ವಿಗ್ನತೆ ಹಾಗೂ ಬಾಲಕೋಟ್ ವಾಯುದಾಳಿಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಮಂದಿ ಮಾಡಿದ ಪೋಸ್ಟ್ ಗಳಿಗಾಗಿ ಅವರನ್ನು ಗುರಿ ಮಾಡಲಾಗಿತ್ತು. ಆದರೆ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗದೇ ಇದ್ದುದರಿಂದ ಈ ಮಂದಿಯ ವಿರುದ್ಧದ ಕ್ರಮವನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಆದರೂ ಈ ಜನರನ್ನು ವಿನಾಕಾರಣ ಬೆಂಬತ್ತಿದ್ದ ‘ಕ್ಲೀನ್ ದಿ ನೇಷನ್’ಗೆ ಪ್ರಶಸ್ತಿಯನ್ನು ನೀಡಲಾಗಿದೆ. ರಾಜಧಾನಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಮ್ಮುಖದಲ್ಲಿ ನೀಡಲಾಗಿದೆ.

“ಈ ತಂಡವು ದೇಶವನ್ನು ಅದೆಷ್ಟು  ಪ್ರೀತಿಸುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಹಲವರು ದೇಶವನ್ನು ಪ್ರೀತಿಸುತ್ತಾರೆ. ಆದರೆ ಕೆಲವರು ಮಾತ್ರ ದೇಶವನ್ನು ಸಕ್ರಿಯವಾಗಿ ಪ್ರೀತಿಸುತ್ತಾರೆ''ಎಂದು ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಕಾರ್ಯದರ್ಶಿ ವಾಗೀಶ್ ಇಸ್ಸಾರ್ ಹೇಳಿದ್ದಾರೆ.

ಪುಲ್ವಾಮಾ ಭಯೋತ್ಪಾದಕ ದಾಳಿ ಘಟನೆಯ ಎರಡು ದಿನದ ಬಳಿಕ ಈ ಫೇಸ್‌ಬುಕ್ ಗುಂಪು ಅಸ್ತಿತ್ವಕ್ಕೆ ಬಂದಿದೆ. ಈ ಗುಂಪಿನ ಪ್ರಥಮ ವೀಡಿಯೊದಲ್ಲಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿರುವ ಗುಂಪಿನ ಸದಸ್ಯ ಮಧುರ್ ಸಿಂಗ್ ಎಂಬಾತ - ನಿಮ್ಮ ಡಿಪಿ ಬದಲಿಸುವ ಅಥವಾ ಮೊಂಬತ್ತಿ ಮೆರವಣಿಗೆ ನಡೆಸುವ ಸಮಯ ಇದಲ್ಲ. ನಮ್ಮ ಯೋಧರನ್ನು ನೋಡಿ ನಗುವವರನ್ನು ಗುರುತಿಸಿ. ಅವರನ್ನು ಕೆಲಸಕ್ಕೆ ಸೇರಿಸಿಕೊಂಡವರನ್ನು ಸಂಪರ್ಕಿಸಿ, ಅವರು ಕಲಿಯುತ್ತಿರುವ ವಿವಿಗಳನ್ನು ಸಂಪರ್ಕಿಸಿ ಅವರನ್ನು ವಜಾಗೊಳಿಸುವಂತೆ ನೋಡಿಕೊಳ್ಳಿ - ಎಂದು ಕರೆ ನೀಡಿದ್ದ.

ಈ ಗ್ರೂಫ್ ಆರಂಭಗೊಂಡ ಕೆಲವೇ ದಿನಗಳಲ್ಲಿ , ಪೂರ್ವ ದಿಲ್ಲಿಯ ಬಿಜೆಪಿ ಸಂಸದ ಮಹೇಶ್ ಗಿರಿ ಟ್ವೀಟ್ ಮಾಡಿ- ದೇಶ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್ ಗ್ರೂಫ್ ಅಭಿನಂದನೆಗೆ ಅರ್ಹ ಎಂದಿದ್ದರು.

ಪುಲ್ವಾಮಾ ಆತ್ಮಾಹುತಿ ದಾಳಿ ಹಾಗೂ ಆ ಬಳಿಕದ ಬಾಲಕೋಟ್ ವಿಮಾನ ದಾಳಿಯ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟೀಕೆ, ವ್ಯಾಖ್ಯಾನ ಮಾಡುವ ಹಲವು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡಲಾಗಿತ್ತು. ಅಲ್ಲದೆ ದೇಶದಾದ್ಯಂತ ಹಲವು ಕಾಲೇಜುಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ಹಾಗೂ ದೌರ್ಜನ್ಯ ಎಸಗಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ವಿಚಾರಣೆಯನ್ನು ಮುಂದುವರಿಸಿರಲಿಲ್ಲ.

ಈ ಫೇಸ್‌ಬುಕ್ ತಂಡದ ಕೆಂಗಣ್ಣಿಗೆ ಗುರಿಯಾದ ರಾಜಸ್ತಾನದಲ್ಲಿ ಅಧ್ಯಯನ ನಡೆಸುತ್ತಿದ್ದ ನಾಲ್ವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಅವರು ಪುಲ್ವಾಮಾ ದಾಳಿಯ ಬಳಿಕದ ಘಟನೆಗಳನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ವಿವರಿಸುತ್ತಿದ್ದ ಕಾರಣದಿಂದ ಅಮಾನತುಗೊಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ತನಿಖೆಯ ಬಳಿಕ ಇವರ ವಿರುದ್ಧದ ಆರೋಪ ಸಾಬೀತಾಗದ ಕಾರಣ ಅಮಾನತು ಮತ್ತು ಪ್ರಕರಣ ಹಿಂಪಡೆಯಲಾಗಿದೆ. ವಿದ್ಯಾರ್ಥಿಗಳು ಮತ್ತೆ ಕಾಲೇಜಿಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಕುರಿತು ಫೇಸ್‌ಬುಕ್ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಜೈಪುರದಲ್ಲಿ ಬಂಧಿಸಲಾಗಿದ್ದು ಆತ ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

ಗ್ರೇಟರ್‌ನೋಯ್ಡದ ಐಐಎಂಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಫೇಸ್‌ಬುಕ್ ಪೋಸ್ಟ್‌ನ ಕಾರಣಕ್ಕೆ ಅಮಾನತುಗೊಳಿಸಲಾಗಿತ್ತು. ಆದರೆ ಆ ಫೇಸ್‌ಬುಕ್ ಖಾತೆ ತನ್ನದಲ್ಲ ಎಂದು ವಿದ್ಯಾರ್ಥಿ ಹೇಳಿದರೂ ಕೇಳದೆ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಪೊಲೀಸ್ ತನಿಖೆಯ ಬಳಿಕ ಆ ವಿದ್ಯಾರ್ಥಿ ನಿರ್ದೋಷಿ ಎಂದು ಕಂಡು ಬಂದು ಕಾಲೇಜಿಗೆ ಪತ್ರ ಬರೆದು ತಿಳಿಸಲಾಯಿತು. ಆದರೆ ಆತ ಮತ್ತೆ ಕಾಲೇಜಿಗೆ ಹಿಂದಿರುಗಿಲ್ಲ ಮತ್ತು ಪರೀಕ್ಷೆಯನ್ನೂ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಿಳಾ ಪ್ರೊಫೆಸರ್‌ಗೆ ಅತ್ಯಾಚಾರದ ಬೆದರಿಕೆ

‘ಕ್ಲೀನ್ ದಿ ನೇಷನ್’ ಫೇಸ್‌ಬುಕ್ ಗುಂಪಿನಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಗುವಾಹಟಿಯ ಕಾಲೇಜೊಂದರ ಅಸೋಸಿಯೇಟ್ ಪ್ರೊಫೆಸರ್ ಪಾಪ್ರಿ ಬ್ಯಾನರ್ಜಿ ಎಂಬವರು ತಲೆಮರೆಸಿಕೊಂಡು ತನ್ನ ಮನೆಯಲ್ಲಿರುವ ಅನಿವಾರ್ಯತೆ ಎದುರಾಗಿತ್ತು. ಇವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಟೀಕೆಯ ಹಿನ್ನೆಲೆಯಲ್ಲಿ ಇವರ ವಿರುದ್ಧ ಎರಡು ಪೊಲೀಸ್ ಕೇಸ್ ದಾಖಲಾಗಿತ್ತು.

ಅಲ್ಲದೆ ಇವರನ್ನು ಕಾಲೇಜಿನಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಇದುವರೆಗೂ ಕಾಲೇಜಿನ ಆಡಳಿತ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News