ರಕ್ತದಾನದ ಕುರಿತು ಈ ತಪ್ಪುಗ್ರಹಿಕೆಗಳು ಬೇಡ

Update: 2019-07-03 15:08 GMT

ಭಾರತದಲ್ಲಿ ಪ್ರತಿ ವರ್ಷ ಐದು ಕೋಟಿ ಯೂನಿಟ್ ರಕ್ತದ ಅಗತ್ಯವಿದೆ. ಆದರೆ ಈ ಅಗತ್ಯವನ್ನು ಪೂರೈಸಿಕೊಳ್ಳಲು ದೇಶಕ್ಕೆ ಸಾಧ್ಯವಾಗುತ್ತಿಲ್ಲ. 12 ಲಕ್ಷ ಯೂನಿಟ್‌ಗೂ ಅಧಿಕ ರಕ್ತದ ಕೊರತೆಯನ್ನು ಅದು ಎದುರಿಸುತ್ತಿದೆ.

 ರಕ್ತ ಅತ್ಯಮೂಲ್ಯವಾದುದು. ಪ್ರತಿ ದಿನ ಕನಿಷ್ಠ 40,000 ಜನರಿಂದ ರಕ್ತದಾನದ ಅಗತ್ಯವಿದೆ ಮತ್ತು ಪ್ರತಿ ಎರಡು ಸೆಕೆಂಡ್‌ಗಳಿಗೆ ಯಾರಿಗಾದರೂ ರಕ್ತ ನೀಡಿಕೆ ಅಗತ್ಯವಾಗುತ್ತದೆ. ಕ್ಯಾನ್ಸರ್, ಹಿಮೊಫಿಲಿಯಾ, ಸಿಕಲ್ ಸೆಲ್ ಅನೀಮಿಯಾ, ಥಲಸೇಮಿಯಾ ಇತ್ಯಾದಿ ರೋಗಿಗಳಿಗೆ ನಿಯಮಿತವಾಗಿ ರಕ್ತ ಅಥವಾ ಅದರ ಘಟಕಗಳ ಮರುಪೂರಣದ ಅಗತ್ಯವಿರುತ್ತದೆ. ಗರ್ಭಿಣಿಯರ ಹೆರಿಗೆಯ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದಾಗ, ರೋಗಿಗಳಿಗೆ ಕ್ಲಿಷ್ಟ ಶಸ್ತ್ರಚಿಕಿತ್ಸೆ ನಡೆಸುವಾಗ ಮತ್ತು ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವಾಗ ರಕ್ತದ ಅವಶ್ಯಕತೆಯಿರುತ್ತದೆ. ರಕ್ತವನ್ನು ಕೆಂಪು ರಕ್ತಕಣಗಳು(ಆರ್‌ಬಿಸಿ),ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್‌ಗಳಾಗಿ ವರ್ಗೀಕರಿಸಲಾಗಿದೆ ಮತ್ತು ರೋಗಿಯ ಅಗತ್ಯಕ್ಕನುಗುಣವಾಗಿ ಪೂರೈಸಬೇಕಾಗುತ್ತದೆ.

ಇತ್ತೀಚಿನ ವರದಿಯೊಂದರಂತೆ ಭಾರತದಲ್ಲಿ 5.12 ಕೋಟಿಗೂ ಅಧಿಕ ರಕ್ತದಾನಿಗಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾನಿಗಳಿದ್ದರೆ ಇನ್ನು ಕೆಲವು ರಾಜ್ಯಗಳಲ್ಲಿ ರಕ್ತದಾನಿಗಳ ತೀವ್ರ ಕೊರತೆಯಿದೆ. ರಕ್ತದಾನದ ಮಹತ್ವದ ಕುರಿತು ಅರಿವಿನ ಕೊರತೆಯಿಂದಾಗಿ ಹೆಚ್ಚಿನ ಜನರು ತಮ್ಮ ರಕ್ತವನ್ನು ನೀಡಲು ಹಿಂಜರಿಯುತ್ತಾರೆ.

18 ವರ್ಷಕ್ಕೆ ಮೇಲ್ಪಟ್ಟ,ಯಾವುದೇ ಕಾಯಿಲೆಗಳಿಲ್ಲದ ಮತ್ತು ಆರೋಗ್ಯಯುತ ದೇಹತೂಕ ಹೊಂದಿರುವ ಯಾವುದೇ ವ್ಯಕ್ತಿಯು ರಕ್ತದಾನವನ್ನು ಮಾಡಬಹುದು. ಮುಖ್ಯವಾದದ್ದೆಂದರೆ,ವ್ಯಕ್ತಿಯು ರಕ್ತದಾನ ಮಾಡುವ ಕನಿಷ್ಠ 48 ಗಂಟೆಗಳ ಮೊದಲು ಯಾವುದೇ ಔಷಧಿಯ ಪ್ರಭಾವದಲ್ಲಿರಬಾರದು. ಅಲ್ಲದೆ ಮುಟ್ಟಾದವರು ಅಥವಾ ಗರ್ಭಿಣಿಯರು ರಕ್ತದಾನ ಮಾಡುವಂತಿಲ್ಲ.

ರಕ್ತದಾನದಂತಹ ಉದಾತ್ತ ಕಾರ್ಯದ ಬಗ್ಗೆ ಇಂದಿಗೂ ಸಮಾಜದಲ್ಲಿ ಕೆಲವು ಮಿಥ್ಯೆಗಳು ಅಥವಾ ತಪ್ಪುಗ್ರಹಿಕೆಗಳಿವೆ. ಸುರಕ್ಷಿತ ರಕ್ತದಾನವು ರಕ್ತದ ಅಗತ್ಯವಿರುವ ವ್ಯಕ್ತಿಯ ಜೀವವನ್ನು ಉಳಿಸುತ್ತದೆ ಮಾತ್ರವಲ್ಲ,ರಕ್ತದಾನಿಗೂ ಹಲವಾರು ರೀತಿಗಳಲ್ಲಿ ಲಾಭದಾಯಕವಾಗಿದೆ.

ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದಲ್ಲಿಯ ಹೆಚ್ಚುವರಿ ಕಬ್ಬಿಣವು ನಿವಾರಣೆಯಾಗುತ್ತದೆ ಮತ್ತು ಇದು ದಾನಿಯ ಹೃದಯ ಮತ್ತು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ವ್ಯಕ್ತಿ ಪ್ರತಿಬಾರಿ ರಕ್ತದಾನ ಮಾಡಿದಾಗಲೂ ಶರೀರದಲ್ಲಿಯ 600 ಕ್ಯಾಲರಿಗಳು ದಹಿಸಲ್ಪಡುತ್ತವೆ. ಆರೋಗ್ಯವಂತ ವ್ಯಕ್ತಿ ಸರಾಸರಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನವು ತ್ವರಿತ ಪ್ರಕ್ರಿಯೆಯಾಗಿದ್ದು,ಇದು ಸುರಕ್ಷಿತವಾಗಿದೆ ಮತ್ತು ಹಲವಾರು ಜೀವಗಳನ್ನು ಉಳಿಸಲು ನೆರವಾಗುತ್ತದೆ. ರಕ್ತದಾನದ ಕುರಿತು ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯ ಇಲ್ಲಿವೆ.......

► ರಕ್ತದಾನ ಮಾಡುವಾಗ ನೋವಾಗುತ್ತದೆ

ಈ ಹೆದರಿಕೆ ಬೇಡವೇ ಬೇಡ. ರಕ್ತದಾನದ ಸಂದರ್ಭ ಬಳಸುವ ಸೂಜಿಗಳಿಗೂ ಪರೀಕ್ಷೆಗಾಗಿ ರಕ್ತವನ್ನು ಹೊರತೆಗೆಯುವ ಸೂಜಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ನಿಗದಿತ ಪ್ರಮಾಣದಲ್ಲಿ ರಕ್ತ ಶೇಖರಣೆಯಾಗುವವರೆಗೂ ಸೂಜಿಯು ಚರ್ಮದಡಿಯೇ ಇರುತ್ತದಾದರೂ ಸಾಮಾನ್ಯ ಚುಚ್ಚುಮದ್ದಿಗಿಂತ ಹೆಚ್ಚಿನ ನೋವಾಗುವುದಿಲ್ಲ.

► ರಕ್ತದಾನ ಮಾಡುವುದರಿಂದ ವ್ಯಕ್ತಿಯು ನಿಶ್ಶಕ್ತನಾಗುತ್ತಾನೆ

ಇಲ್ಲ. ನಾವು ದಾನವಾಗಿ ನೀಡಿದ ರಕ್ತವನ್ನು ನಮ್ಮ ಶರೀರವು ಒಂದೆರಡು ದಿನಗಳಲ್ಲಿಯೇ ಪುನರುತ್ಪಾದಿಸುತ್ತದೆ. ರಕ್ತದಾನ ಮಾಡುವುದರಿಂದ ಕ್ರೀಡೆಗಳು ಅಥವಾ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯ ದೈಹಿಕ ಸಾಮರ್ಥ್ಯಕ್ಕೆ ಯಾವುದೇ ಕುಂದುಂಟಾಗುವುದಿಲ್ಲ. ಒಂದು ದಿನದ ಮಟ್ಟಿಗೆ ಹೆಚ್ಚಿನ ತೂಕವನ್ನು ಎತ್ತದಿರುವುದು ಅಥವಾ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡದಿರುವುದು ರಕ್ತದಾನಿಯು ವಹಿಸಬೇಕಾದ ಏಕೈಕ ಮುನ್ನೆಚ್ಚರಿಕೆ ಕ್ರಮವಾಗಿದೆ.

► ದೀರ್ಘಕಾಲಿಕ ಔಷಧಿ ಸೇವನೆ ರಕ್ತದಾನಕ್ಕೆ ಅನರ್ಹವಾಗಿಸುತ್ತದೆ

ತಪ್ಪು. ಸೋಂಕನ್ನು ಗುಣಪಡಿಸಲು ಆ್ಯಂಟಿಬಯಾಟಿಕ್‌ಗಳನ್ನು ಸೇವಿಸುತ್ತಿರುವ ಪ್ರಕರಣಗಳನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಔಷಧಿಗಳು ರಕ್ತದಾನಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡುವುದಿಲ್ಲ.

► ಯುವಜನರು ಮಾತ್ರ ರಕ್ತದಾನ ಮಾಡಬಹುದು

ಇದು ಇನ್ನೊಂದು ತಪ್ಪುಗ್ರಹಿಕೆ. ದೈಹಿಕ ಕ್ಷಮತೆಯನ್ನು ಹೊಂದಿರುವ ಮತ್ತು ಆರೋಗ್ಯವಂತನಾಗಿರುವ ವ್ಯಕ್ತಿ ತನ್ನ 60ನೇ ವರ್ಷ ಪ್ರಾಯದವರೆಗೂ ರಕ್ತದಾನವನ್ನು ಮಾಡಬಹುದು.

► ರಕ್ತಕ್ಕೆ ಖಚಿತ ಜೀವಿತಾವಧಿಯಿಲ್ಲ

ಇದು ಸರಿಯಲ್ಲ,ದಾನವಾಗಿ ಸಂಗ್ರಹಿಸಿದ ರಕ್ತಕ್ಕೆ ಒಂದು ನಿಗದಿತ ಮುಗಿತಾಯ ದಿನಾಂಕವಿರುತ್ತದೆ. ರಕ್ತ ಬ್ಯಾಂಕುಗಳು ಇದರ ಮೇಲೆ ನಿಗಾಯಿರಿಸುತ್ತವೆ ಮತ್ತು ಅವಧಿ ಮೀರಿದ ರಕ್ತವನ್ನು ವಿಲೇವಾರಿ ಮಾಡುತ್ತವೆ.

ಅಂತಿಮ ಷರಾ

ರಕ್ತದಾನದಿಂದ ದಾನಿಗೆ ಯಾವುದೇ ಲಾಭವಿರಲಿ,ಇಲ್ಲದಿರಲಿ...ರಕ್ತದಾನವು ಒಂದು ಉದಾತ್ತ ಕಾರ್ಯ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ. ರಕ್ತವು ಓರ್ವ ವ್ಯಕ್ತಿಯು ಇನ್ನೋರ್ವ ವ್ಯಕ್ತಿಗೆ ನೀಡಬಹುದಾದ ಅಸಾಧಾರಣ ಉಡುಗೊರೆಯಾಗಿದೆ. ಪ್ರತಿಯೊಬ್ಬ ಅರ್ಹ ರಕ್ತದಾನಿಯೂ ನಿಯಮಿತವಾಗಿ ರಕ್ತದಾನವನ್ನು ಮಾಡುವುದರಿಂದ ಅಮೂಲ್ಯ ಜೀವಗಳನ್ನುಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News