ಭಾರತದ ಬ್ಯಾಂಕ್‌ಗಳ ಬಂಡವಾಳ ಪರ್ಯಾಪ್ತತೆಯನ್ನು ಕಡಿಮೆ ಅಂದಾಜಿಸಲಾಗಿದೆ: ಊರ್ಜಿತ್ ಪಟೇಲ್

Update: 2019-07-03 18:07 GMT

ಹೊಸದಿಲ್ಲಿ, ಜು.3: ಭಾರತದ ಸರಕಾರಿ ಅಧೀನದ ಬ್ಯಾಂಕ್‌ಗಳ ಎನ್‌ಪಿಎ(ಅನುತ್ಪಾದಕ ಆಸ್ತಿ) ಪ್ರಮಾಣ ಹೆಚ್ಚಾಗಿರುವುದು ಬಂಡವಾಳ ಪ್ರಮಾಣವನ್ನು ಅಗತ್ಯತೆಗಿಂತ ಕಡಿಮೆ ಮಟ್ಟದಲ್ಲಿ ಅಂದಾಜಿಸಿರುವುದನ್ನು ಸೂಚಿಸುತ್ತದೆ ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ಸ್ಟಾನ್‌ಫೋರ್ಡ್ ವಿವಿಯಲ್ಲಿ ‘ಭಾರತದ ಆರ್ಥಿಕ ನೀತಿಗಳ ಕುರಿತ ವಾರ್ಷಿಕ ವಿಚಾರಸಂಕಿರಣ’ದಲ್ಲಿ ಮಾತನಾಡಿದ ಅವರು, ಭಾರತದ ಬ್ಯಾಂಕ್‌ಗಳನ್ನು ಜಾಗತಿಕ ಬ್ಯಾಂಕ್‌ಗಳೊಡನೆ ತುಲನೆ ಮಾಡಿದರೆ, ಸರಕಾರಿ ರಂಗದ ಬ್ಯಾಂಕ್‌ಗಳ ಪ್ರಚಲಿತ ಬಂಡವಾಳ ಪರ್ಯಾಪ್ತತೆಯು ಪರಿಣಾಮಕಾರಿಯಾಗಿಲ್ಲ ಮತ್ತು ಅಗತ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಅಂದಾಜಿಸಲಾಗಿದೆ ಎಂದರು.

ಅಲ್ಲದೆ ಭಾರತದ ಬ್ಯಾಂಕ್‌ಗಳ ಪ್ರೊವಿಷನ್ ಕವರೇಜ್ ರೇಶಿಯೋ(ಪಿಸಿಆರ್) ಕೂಡಾ ವಿಶ್ವದ ಬಹುತೇಕ ಬ್ಯಾಂಕ್‌ಗಳಿಗಿಂತ ಕಡಿಮೆಯಿದೆ, ಆದರೆ ಎನ್‌ಪಿಎ ಮಾತ್ರ ಅಧಿಕವಾಗಿದೆ. ಕೇವಲ ಮೂರು ಬೃಹತ್ ಬ್ಯಾಂಕ್‌ಗಳು- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ಕೆನರಾ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ- ಮಾತ್ರ 2020ರ ಆರ್ಥಿಕ ವರ್ಷದಲ್ಲಿ 250 ಬಿಲಿಯನ್‌ಗೂ ಹೆಚ್ಚು ಅಂದಾಜು ಬಂಡವಾಳವನ್ನು ಅಪೇಕ್ಷಿಸಬಹುದು. ಅಲ್ಲದೆ 2018-19ರ ಕೊನೆಯ ತ್ರೈಮಾಸಿಕ ಅವಧಿಗೆ ಸರಾಸರಿ 500 ಬಿಲಿಯನ್ ರೂಪಾಯಿ ನಿಧಿಯನ್ನು ಎನ್‌ಪಿಎಗೆ ಒದಗಿಸುವ ಸಾಧ್ಯತೆಯಿದೆ ಎಂದು ಕೆಲವು ವರದಿ ತಿಳಿಸಿದೆ.

ಇಂತಹ ಪರಿಸ್ಥಿತಿಯ ಸಂಭಾವ್ಯ ಪರಿಣಾಮವೆಂದರೆ - ನರೇಂದ್ರ ಮೋದಿ ಸರಕಾರದ ಆರ್ಥಿಕ ನಿಬಂಧನೆಯಿಂದಾಗಿ ಸಮಗ್ರವಾಗಿ ಬ್ಯಾಂಕಿಂಗ್/ಆರ್ಥಿಕ ಕ್ಷೇತ್ರಗಳಿಗೆ ಅಧಿಕ ಅಪಾಯದ ಅನುಭವವಾಗಬಹುದು ಎಂದು ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News