ಸರಕಾರಿ ಬ್ಯಾಂಕ್ ಗಳನ್ನು ನಿರ್ಬಂಧಗಳಿಂದ ಮುಕ್ತಗೊಳಿಸಬೇಕು: ರಘುರಾಮ ರಾಜನ್

Update: 2019-07-04 15:43 GMT

ಹೊಸದಿಲ್ಲಿ,ಜು.4: ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಮೇಲೆ ಹೇರಲಾಗಿರುವ ಕೆಲವು ನಿರ್ಬಂಧಗಳನ್ನು ಹಿಂದೆಗೆದುಕೊಂಡರೆ ಅವು ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು,ಆದರೆ ಇಂತಹ ಸ್ವಾತಂತ್ರ್ಯವು ಸರಕಾರದಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು ಹೇಳಿದ್ದಾರೆ.

ಸರಕಾರಿ ಬ್ಯಾಂಕುಗಳ ಖಾಸಗೀಕರಣ ದಿವ್ಯೌಷಧ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ ಎಂದಿರುವ ಅವರು,ಖಾಸಗೀಕರಣ ಕುರಿತು ಹೆಚ್ಚಿನ ಚರ್ಚೆಯು ಸೈದ್ಧಾಂತಿಕ ನಿಲುವುಗಳನ್ನು ಆಧರಿಸಿರುವ ಅನಿಸಿಕೆಗಳಾಗಿ ರುವಂತಿದೆ ಎಂದಿದ್ದಾರೆ.

ತನ್ನೊಂದಿಗೆ ಸಹ ಆರ್ಥಿಕ ತಜ್ಞರಾದ ಅಭಿಜಿತ ಬ್ಯಾನರ್ಜಿ,ಗೀತಾ ಗೋಪಿನಾಥ ಮತ್ತು ಮಿಹಿರ ಎಸ್.ಶರ್ಮಾ ಅವರ ಸಂಪಾದಕತ್ವದ ‘‘ಆರ್ಥಿಕತೆಯ ಈಗಿನ ಅಗತ್ಯ’’ ಶೀರ್ಷಿಕೆಯ ಪುಸ್ತಕದಲ್ಲಿ ರಾಜನ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ಖಾಸಗಿ ಬ್ಯಾಂಕುಗಳ ಆಡಳಿತ ಕಳಪೆಯಾಗಿದೆ ಎಂದೂ ಹೇಳಿರುವ ಅವರು,ಪ್ರಾಯೋಗಿಕ ನೆಲೆಯಲ್ಲಿ ಒಂದೆರಡು ಮಧ್ಯಮ ಗಾತ್ರದ ಸರಕಾರಿ ಬ್ಯಾಂಕುಗಳ ಖಾಸಗೀಕರಣ ಮತ್ತು ಇತರ ಒಂದೆರಡು ಬ್ಯಾಂಕುಗಳಲ್ಲಿ ಸರಕಾರದ ಪಾಲು ಬಂಡವಾಳವನ್ನು ಶೇ.50ಕ್ಕೆ ತಗ್ಗಿಸಲು ಮತ್ತು ಇತರ ಬ್ಯಾಂಕುಗಳ ಆಡಳಿತ ಸುಧಾರಣೆಗೆ ಶ್ರಮಿಸಲು ಅವಕಾಶವಿದೆ ಎಂದಿದ್ದಾರೆ. ಇದರಿಂದಾಗಿ ಎಂದಿಗೂ ಮುಗಿಯದ ಚರ್ಚೆಯನ್ನು ಮುಂದುವರಿಸುವ ಬದಲು ವಾಸ್ತವದಲ್ಲಿ ನಾವು ಮುನ್ನಡೆಯಲು ಕೆಲವು ರುಜುವಾತುಗಳನ್ನು ಪಡೆಯಬಹುದು. ಖಾಸಗೀಕರಣ ಪ್ರಕ್ರಿಯೆ ನಡೆಯಲು ಕೆಲವು ರಾಜಕೀಯ ರಾಜಿಗಳು ಅಗತ್ಯವಾಗುತ್ತವೆ,ಆದರೆ ಎಲ್ಲಿಯವರೆಗೆ ನೂತನ ಖಾಸಗೀಕರಣಗೊಂಡ ಬ್ಯಾಂಕುಗಳು ರಾಜಕೀಯ ರಾಜಿಗಳ ಪರಿಣಾಮವಾಗಿ ತಮ್ಮ ಕಾರ್ಯಾಚರಣೆ ಸ್ವಾತಂತ್ರವನ್ನು ಕಳೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇದು ವೌಲಿಕ ಪ್ರಯೋಗವಾಗುತ್ತದೆ ಎಂದು ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೃಷಿಗೆ ಗಂಭೀರ ಗಮನದ ಅಗತ್ಯವಿದೆ ಎಂದು ಹೇಳಿರುವ ಆವರು,ಆದರೆ ಇದಕ್ಕೆ ಸಾಲಮನ್ನಾಗಳು ಮಾರ್ಗವಾಗಬಾರದು,ಅಂತಹ ಕ್ರಮಗಳು ಸಾಲ ಸಂಸ್ಕೃತಿಯನ್ನು ಹಾಳುಗೆಡವುತ್ತವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News