ಜಾಮೀನನ್ನು ರದ್ದುಗೊಳಿಸಬಹುದು: ಸಲ್ಮಾನ್‌ಗೆ ನ್ಯಾಯಾಲಯ ಎಚ್ಚರಿಕೆ
ಜೋಧ್‌ಪುರ, ಜು.4: ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ವಿಚಾರಣೆಗೆ ನಿರಂತರ ಗೈರುಹಾಜರಾಗುತ್ತಿರುವ ಹಿಂದಿ ಸಿನೆಮ ನಟ ಸಲ್ಮಾನ್ ಖಾನ್ ವರ್ತನೆಯ ಬಗ್ಗೆ ಅಸಮಾಧಾನ ಸೂಚಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಗೂ ಹಾಜರಾಗದಿದ್ದಲ್ಲಿ ಜಾಮೀನನ್ನು ರದ್ದುಗೊಳಿಸಬಹುದು ಎಂದು ಎಚ್ಚರಿಸಿದೆ.
1998ರಲ್ಲಿ ರಕ್ಷಿತಾರಣ್ಯದಲ್ಲಿದ್ದ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪದಲ್ಲಿ ಸಲ್ಮಾನ್ ಖಾನ್‌ಗೆ ಐದು ವರ್ಷದ ಜೈಲುಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಮಾನ್‌ಖಾನ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಜೋಧ್‌ಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಡೆಸುತ್ತಿದ್ದು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ನಿಗದಿಗೊಳಿಸಲಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ವೈಯಕ್ತಿಕ ಹಾಜರಾಗುವುದರಿಂದ ಸಲ್ಮಾನ್‌ಗೆ ಈ ಹಿಂದೆ ವಿನಾಯಿತಿ ನೀಡಲಾಗಿತ್ತು.
ಆದರೆ ಈಗ ವಿಚಾರಣೆ ಅಂತಿಮ ಹಂತದಲ್ಲಿರುವ ಕಾರಣ ಸಲ್ಮಾನ್ ಕಡ್ಡಾಯವಾಗಿ ಹಾಜರಿರಬೇಕು. ಇಲ್ಲದಿದ್ದರೆ ಅವರ ಜಾಮೀನನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಧೀಶ ಚಂದ್ರಕುಮಾರ್ ಸೊಂಗರ ಅವರ ಸಲ್ಮಾನ್ ವಕೀಲರಿಗೆ ಎಚ್ಚರಿಕೆ ನೀಡಿದ್ದಾರೆ.