×
Ad

ಸಿರಿಯಕ್ಕೆ ಇರಾನ್ ತೈಲ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಜಿಬ್ರಾಲ್ಟರ್‌ನಲ್ಲಿ ತಡೆ

Update: 2019-07-05 22:55 IST

ವಾಶಿಂಗ್ಟನ್, ಜು. 5: ಇರಾನ್‌ನಿಂದ ಕಚ್ಚಾತೈಲವನ್ನು ಸಿರಿಯಕ್ಕೆ ಸಾಗಿಸುತ್ತಿತ್ತು ಎನ್ನಲಾದ ಸೂಪರ್ ಟ್ಯಾಂಕರೊಂದನ್ನು ಬ್ರಿಟನ್ ನೌಕಾಪಡೆ ಸೈನಿಕರು, ಪೊಲೀಸ್ ಮತ್ತು ಸುಂಕ ಸಿಬ್ಬಂದಿ ಜಿಬ್ರಾಲ್ಟರ್‌ನಲ್ಲಿ ಗುರುವಾರ ತಡೆ ಹಿಡಿದಿದ್ದಾರೆ. ಈ ತೈಲ ಹಡಗು ಅಂತರ್‌ರಾಷ್ಟ್ರೀಯ ದಿಗ್ಬಂಧನಗಳ ಶರತ್ತನ್ನು ಉಲ್ಲಂಘಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್, ಇರಾನ್ ತೈಲ ಸಾಗಾಟದ ಟ್ಯಾಂಕರನ್ನು ತಡೆಹಿಡಿರುವ ಬ್ರಿಟನ್ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

‘‘ಅತ್ಯುತ್ತಮ ಸುದ್ದಿ. ಐರೋಪ್ಯ ಒಕ್ಕೂಟ ದಿಗ್ಬಂಧನಗಳನ್ನು ಉಲ್ಲಂಘಿಸಿ ಸಿರಿಯಕ್ಕೆ ಇರಾನ್ ತೈಲ ಸಾಗಿಸುತ್ತಿದ್ದ ಸೂಪರ್ ಟ್ಯಾಂಕರನ್ನು ಬ್ರಿಟನ್ ತಡೆಹಿಡಿದಿದೆ’’ ಎಂಬುದಾಗಿ ಬೋಲ್ಟನ್ ಟ್ವೀಟ್ ಮಾಡಿದ್ದಾರೆ.

‘‘ಈ ಅಕ್ರಮ ದಂಧೆಯಿಂದ ಇರಾನ್ ಮತ್ತು ಸಿರಿಯದ ಸರಕಾರಗಳು ಲಾಭ ಮಾಡಿಕೊಳ್ಳುವುದನ್ನು ಅಮೆರಿಕ ಮತ್ತು ನಮ್ಮ ಮಿತ್ರ ದೇಶಗಳು ನಿರಂತರವಾಗಿ ತಡೆಯುತ್ತವೆ’’ ಎಂದು ಅವರು ಹೇಳಿದ್ದಾರೆ.

ಅಕ್ರಮ ತಡೆ: ಇರಾನ್

ತೈಲ ಟ್ಯಾಂಕರನ್ನು ಜಿಬ್ರಾಲ್ಟರ್‌ನಲ್ಲಿ ಬ್ರಿಟನ್ ಪಡೆಗಳು ತಡೆಹಿಡಿದಿರುವುದನ್ನು ಇರಾನ್ ಖಂಡಿಸಿದೆ ಹಾಗೂ ಅಕ್ರಮವಾಗಿ ಹಡಗನ್ನು ತಡೆಹಿಡಿಯಲಾಗಿದೆ ಎಂದು ಅದು ಬಣ್ಣಿಸಿದೆ.

 ಆದರೆ, ಹಡಗಿನಲ್ಲಿನ ಸರಕು ಸಿರಿಯದ ಬನ್ಯಾಸ್ ತೈಲ ಶುದ್ಧೀಕರಣ ಘಟಕದತ್ತ ಹೋಗುತ್ತಿತ್ತು ಎಂಬುದಾಗಿ ನಂಬಲಾಗಿದೆ ಹಾಗೂ ಅದು ಐರೋಪ್ಯ ದಿಗ್ಬಂಧನಗಳನ್ನು ಉಲ್ಲಂಘಿಸುತ್ತದೆ ಎಂದು ಜಿಬ್ರಾಲ್ಟರ್ ಮುಖ್ಯಮಂತ್ರಿ ಫೇಬಿಯನ್ ಪಿಕಾರ್ಡೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಇರಾನ್ ಬ್ರಿಟಿಶ್ ರಾಯಭಾರಿಯನ್ನು ಕರೆಸಿಕೊಂಡು ಈ ಘಟನೆಯ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News