ಸಿಪಿಎಂ ಕಾರ್ಯಕರ್ತನ ಹತ್ಯೆ: 9 ಮಂದಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರಿಗೆ ಜೀವಾವಧಿ

Update: 2019-07-05 17:49 GMT

ಕಣ್ಣೂರು, ಜು. 5: ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ 2004ರಲ್ಲಿ ಸಿಪಿಎಂ ಕಾರ್ಯಕರ್ತನನ್ನು ಹತ್ಯೆಗೈದ ಬಿಜೆಪಿ ಹಾಗೂ ಆರೆಸ್ಸೆಸ್‌ನ 9 ಮಂದಿ ಕಾರ್ಯಕರ್ತರಿಗೆ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 ಆರೋಪಿಗಳಿಗೆ ತಲಾ 1 ಲಕ್ಷ ರೂಪಾಯಿ ದಂಡವನ್ನು ಕೂಡ ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿಧಿಸಿದೆ. ನ್ಯಾಯಾಲಯ ಇಂದು ಬೆಳಗ್ಗೆ ಎಲ್ಲ 9 ಮಂದಿ ಆರೋಪಿಗಳನ್ನು ದೋಷಿಗಳು ಎಂದು ಪರಿಗಣಿಸಿತ್ತು. ಅಪರಾಹ್ನ ಶಿಕ್ಷೆಯ ಪ್ರಮಾಣ ಘೋಷಿಸಿತ್ತು.

15 ವರ್ಷಗಳ ಬಳಿಕ ಈ ಪ್ರಕರಣದ ತೀರ್ಪು ನೀಡಲಾಗಿದೆ.

40ರ ಹರೆಯದ ರವೀಂದ್ರನ್ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈತ ಕೋಝಿಕೋಡ್‌ನ ನಾಡಪುರಂನಲ್ಲಿ ನಡೆದ ಹತ್ಯೆ ಪ್ರಕರಣದ ದೋಷಿ. 2004ರಲ್ಲಿ ಕಾರಾಗೃಹದಲ್ಲಿ ರವೀಂದ್ರನ್‌ಗೆ ಸಹ ಕೈದಿಗಳು ಕಬ್ಬಿಣದ ಸಲಾಕೆಯಿಂದ ಥಳಿಸಿದ್ದರು. ಗಂಭೀರ ಗಾಯಗೊಂಡಿದ್ದ ಆತ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಪವಿತ್ರನ್, ಫಲ್ಗುಣನ್, ಕೆ.ಪಿ. ರಘು, ಸನಲ್ ಪ್ರಸಾದ್, ಪಿ.ಕೆ. ದಿನೇಶನ್, ಕೊಟ್ಟಕ್ಕ ಶಶಿ, ಅನಿಲ್ ಕುಮಾರ್, ಥರಾಸ್ಸಿಯಿಲ್ ಸುನಿ ಹಾಗೂ ಪಿ.ವಿ. ಅಶೋಕನ್ ಆರೋಪಿಗಳಾಗಿದ್ದರು.

 ಒಟ್ಟು 31 ಆರೋಪಿಗಳಿದ್ದು, ಇವರೆಲ್ಲ ಆರೆಸ್ಸೆಸ್‌ ಅಥವಾ ಬಿಜೆಪಿ ಕಾರ್ಯಕರ್ತರು. ಇವರೆಲ್ಲರೂ ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವವರು ಹಾಗೂ ಜೀವಾವಧಿ ಶಿಕ್ಷೆಗೆ ಗುರಿಯಾದವರು.

 ಕಾರಾಗೃಹ ಅಧಿಕಾರಿಗಳು ಹಾಗೂ ಇತರ ಕೈದಿಗಳು-ಕಾರಾಗೃಹ ಅಧಿಕಾರಿ ಪ್ರವೀಣ್ ಸಹಿತ 71 ಸಾಕ್ಷಿಗಳು ಸಾಕ್ಷಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News