ಲಿಬಿಯ: ಆಂತರಿಕ ಯುದ್ಧಕ್ಕೆ 1,000 ಬಲಿ

Update: 2019-07-06 16:33 GMT

ಟ್ರಿಪೋಲಿ (ಲಿಬಿಯ), ಜು. 6: ಲಿಬಿಯ ರಾಜಧಾನಿ ಟ್ರಿಪೋಲಿಯಲ್ಲಿ ಮೂರು ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 1,000ವನ್ನು ದಾಟಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಯುದ್ಧವಿರಾಮಕ್ಕಾಗಿ ಕರೆ ನೀಡಿದೆ.

ಟ್ರಿಪೋಲಿಯ ಉಪನಗರ ಟಜೌರದಲ್ಲಿರುವ ಬಂಧನ ಕೇಂದ್ರವೊಂದರ ಮೇಲೆ ಮಂಗಳವಾರ ನಡೆದ ವಾಯುದಾಳಿಯಲ್ಲಿ 53 ವಲಸಿಗರು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ವಲಸಿಗರನ್ನು ಈ ಬಂಧನ ಕೇಂದ್ರದಲ್ಲಿ ಬಂಧಿಸಿಡಲಾಗಿತ್ತು.

ವಲಸಿಗರ ಬಂಧನ ಕೇಂದ್ರದ ಮೇಲೆ ನಡೆದ ದಾಳಿಯನ್ನು ಭದ್ರತಾ ಮಂಡಳಿ ಖಂಡಿಸಿದೆ. ಹಿಂಸೆಯಲ್ಲಿ ನಿರತವಾಗಿರುವ ಎಲ್ಲ ಪಕ್ಷಗಳು ತಕ್ಷಣ ಹಿಂಸೆಯನ್ನು ನಿಲ್ಲಿಸಿ ಯುದ್ಧವಿರಾಮ ಆಚರಿಸಬೇಕಾಗಿದೆ ಎಂದು ಜಂಟಿ ಹೇಳಿಕೆಯೊಂದರಲ್ಲಿ ಮಂಡಳಿ ಹೇಳಿದೆ.

ವಿಶ್ವಸಂಸ್ಥೆಯ ಮಾನ್ಯತೆ ಹೊಂದಿರುವ ರಾಷ್ಟ್ರೀಯ ಏಕಮತ ಸರಕಾರಕ್ಕೆ ನಿಷ್ಠವಾಗಿರುವ ಸೈನಿಕರಿಂದ ರಾಜಧಾನಿ ಲಿಬಿಯವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಬಂಡುಕೋರ ಹಾಗೂ ಲಿಬಿಯದ ದಂಡನಾಯಕ ಖಲೀಫ ಹಫ್ತಾರ್ ಎಪ್ರಿಲ್‌ನಲ್ಲಿ ಸಂಘರ್ಷ ಆರಂಭಿಸಿದ್ದರು. ಹಫ್ತಾರ್‌ನ ಸೈನಿಕರು ಪೂರ್ವ ಲಿಬಿಯ ಮತ್ತು ದೇಶದ ದಕ್ಷಿಣದ ಹೆಚ್ಚಿನ ಭಾಗಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ.

ವಾಯುದಾಳಿಗಳು ಮತ್ತು ಭೂಯುದ್ಧದಲ್ಲಿ ಈವರೆಗೆ ಸುಮಾರು 1,000 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 5,000 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆ ಹೇಳಿದೆ.

ಆಂತರಿಕ ಯುದ್ಧದಿಂದಾಗಿ 1,00,000ಕ್ಕೂ ಅಧಿಕ ಮಂದಿ ದೇಶ ತೊರೆದು ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News