ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆ: ವಿಜಯದ ಸನ್ನಿವೇಶಗಳನ್ನು ಮರುಸೃಷ್ಟಿಸಲಿರುವ ಸೇನೆ

Update: 2019-07-06 18:11 GMT

ಗರ್ಖೋನ್(ಜ-ಕಾ),ಜು.6: ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ನುಸುಳುಕೋರರಿಂದ ಹಲವಾರು ಪರ್ವತ ಶಿಖರಗಳನ್ನು ಮರುವಶಪಡಿಸಿಕೊಂಡ 20 ವರ್ಷಗಳ ಬಳಿಕ ಇದೀಗ ಭಾರತೀಯ ಸೇನೆಯ ವೀರಯೋಧರು ಮತ್ತೊಮ್ಮೆ ಈ ಎತ್ತರದ ಪ್ರದೇಶಗಳಿಗೆ ಸಾಗಿ ವಿಜಯದ ಸನ್ನಿವೇಶಗಳನ್ನು ಮರುಸೃಷ್ಟಿಸಲಿದ್ದಾರೆ. ಕಾರ್ಗಿಲ್ ಯುದ್ಧದ 20 ನೇ ವಿಜಯೋತ್ಸವದ ಅಂಗವಾಗಿ ಸೇನೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

  ಪಾಕಿಸ್ತಾನಿ ಸೈನಿಕರು ನಿಯಂತ್ರಣ ರೇಖೆಯ ಬಟಾಲಿಕ್ ಸೆಕ್ಟರ್‌ನಲ್ಲಿ ಕಾರ್ಗಿಲ್ ಪ್ರದೇಶವನ್ನು ಅತಿಕ್ರಮಿಸಿದ್ದನ್ನು ಅಲ್ಲಿಯ ಕೆಲವು ನಿವಾಸಿಗಳು 1999,ಮೇ 3ರಂದು ಮೊದಲ ಬಾರಿಗೆ ಪತ್ತೆ ಹಚ್ಚಿ ಸೇನೆಗೆ ಮಾಹಿತಿ ನೀಡಿದ್ದರು. ಕಾರ್ಗಿಲ್ ಸಂಘರ್ಷದ ಕೆಲವು ಭೀಷಣ ಕಾಳಗಗಳ ಬಳಿಕ ಭಾರತೀಯ ಯೋಧರು ಆ ಪ್ರದೇಶದಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿದ್ದ ಆ ವಿಜಯದ ಕ್ಷಣವು ಮತ್ತೊಮ್ಮೆ ಮರುಕಳಿಸುವುದನ್ನು ತಾವು ಎದುರು ನೋಡುತ್ತಿದ್ದೇವೆ ಎಂದು ನಿಯಂತ್ರಣ ರೇಖೆಯಲ್ಲಿ ವಾಸವಿರುವ ಗ್ರಾಮಸ್ಥರು ಹೇಳಿದರು.

'ಆಪರೇಷನ್ ವಿಜಯ್'ನ 20ನೇ ವರ್ಷವನ್ನು ಈ ಬಾರಿ 'ಸ್ಮರಿಸು,ಆನಂದಿಸು ಮತ್ತು ನವೀಕರಿಸು' ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಆಕ್ರಮಣಕೋರರನ್ನು ಹೊರದಬ್ಬಲು ಅತ್ಯಂತ ದುರ್ಗಮ ಪ್ರದೇಶದಲ್ಲಿ ಹೋರಾಡಿದ್ದ ಮೂರು ಬಟಾಲಿಯನ್‌ಗಳಿಗೆ ಸೇರಿದ ಯೋಧರು ವಿಜಯದ ಸನ್ನಿವೇಶಗಳನ್ನು ಮರುಸೃಷ್ಟಿಸಲಿದ್ದಾರೆ.

ನಮ್ಮಲ್ಲಿ ಹೆಮ್ಮೆ ಮತ್ತು ಗೌರವವನ್ನುಂಟು ಮಾಡುವ ನಮ್ಮ ಹುತಾತ್ಮ ಯೋಧರ ಬಲಿದಾನಗಳಿಗೆ ಮತ್ತೆ ತೆರೆದುಕೊಳ್ಳುವ ಮೂಲಕ ನಾವು ಅವರನ್ನು 'ಸ್ಮರಿಸುತ್ತೇವೆ ', ಕಾರ್ಗಿಲ್ ವಿಜಯವನ್ನು ಆಚರಿಸುವ ಮೂಲಕ ನಾವು 'ಆನಂದಿಸುತ್ತೇವೆ ' ಮತ್ತು ತ್ರಿವರ್ಣ ಧ್ವಜದ ಗೌರವ ರಕ್ಷಣೆಯ ನಮ್ಮ ದೃಢ ಸಂಕಲ್ಪವನ್ನು ' ನವೀಕರಿಸುತ್ತೇವೆ 'ಎಂದು ಸೇನಾಧಿಕಾರಿ ಯೋರ್ವರು ಈ ವರ್ಷದ ಆಚರಣೆಯ ಧ್ಯೇಯವಾಕ್ಯದ ಕುರಿತು ವಿವರಿಸಿದರು.

2 ರಜಪುತಾನಾ ರೈಫಲ್ಸ್‌ನ ಯೋಧರು ಟೋಲೊಲಿಂಗ್ ಶಿಖರವನ್ನು,13 ಜಮ್ಮು-ಕಾಶ್ಮೀರ್ ರೈಫಲ್ಸ್‌ನ ಯೋಧರು ಈಗ ಬಾತ್ರಾ ಟಾಪ್ ಎಂದು ಕರೆಯಲಾಗುವ ಪಾಯಿಂಟ್ 4875ನ್ನು ಮತ್ತು 1/9 ಗುರ್ಖಾ ರೈಫಲ್ಸ್‌ನ ಯೋಧರು ಖಲುಬರ್ ಶೃಂಗವನ್ನು ಹತ್ತಲಿದ್ದಾರೆ ಎಂದರು.

ಪ್ರತಿಯೊಬ್ಬರೂ ಟೋಲೊಲಿಂಗ್ ಮತ್ತು ಟೈಗರ್ ಹಿಲ್‌ ಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಖಲುಬರ್, ಜುಬರ್ ಮತ್ತು ಕುಕರ್ಥಾಂಗ್‌ಗಳಲ್ಲಿಯ ಕಾಳಗಗಳು ಬಹಳ ಕಠಿಣವಾಗಿದ್ದವು ಎಂದು ಬಟಾಲಿಕ್‌ನಲ್ಲಿ ಹೋರಾಡಿದ್ದ ಇನ್ನೋರ್ವ ಸೇನಾಧಿಕಾರಿ ತಿಳಿಸಿದರು.

 ಬಟಾಲಿಕ್ ಸೆಕ್ಟರ್‌ನಲ್ಲಿಯ ಅತ್ಯಂತ ದುರ್ಗಮ ಗಡಿಪ್ರದೇಶವಾದ ಖಲುಬರ್ 1/11 ಗುರ್ಖಾ ರೈಫಲ್ಸ್‌ನ ನಾಯಕತ್ವದಲ್ಲಿ ಪ್ರಮುಖ ಕಾಳಗಕ್ಕೆ ಸಾಕ್ಷಿಯಾಗಿತ್ತು. ಲೆ.ಮನೋಜ ಕುಮಾರ ಅವರು ಅಂತಿಮ ಪ್ರಹಾರದ ನೇತೃತ್ವ ವಹಿಸಿದ್ದರು ಮತ್ತು ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪರಮವೀರ ಚಕ್ರಕ್ಕೆ ಭಾಜನರಾಗಿದ್ದರು.

ಈ ವರ್ಷ ಕಾರ್ಗಿಲ್ ವಿಜಯ್ ದಿವಸ್ ಅನ್ನು ಜು.25ರಿಂದ ಜು.27ರವರೆಗೆ ಮೂರು ದಿನ ಆಚರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News