ಹುಸಿಬಾಂಬ್ ಭೀತಿ ಸೃಷ್ಟಿಸಿದ ಪಾನಮತ್ತ ಭಗ್ನಪ್ರೇಮಿಯ ಬಂಧನ

Update: 2019-07-06 18:29 GMT

 ಹೈದರಾಬಾದ್,ಜು.6: ಪಾನಮತ್ತ ಹಾಗೂ ಭಗ್ನಪ್ರೇಮಿಯೆನ್ನಲಾದ 24 ವರ್ಷ ವಯಸ್ಸಿನ ಯುವಕನೊಬ್ಬ ಚೆನ್ನೈಗೆ ತೆರಳುವ ಎರಡು ವಿಮಾನಗಳಿಗೆ ಹುಸಿಬಾಂಬ್‌ ಭೀತಿಯನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಇಲ್ಲಿನ ವಿಮಾನನಿಲ್ದಾಣದಿಂದ ಬಂಧಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯುವುದಕ್ಕೆ ಕೆಲವೇ ತಾಸುಗಳ ಮುನ್ನ ಈ ಘಟನೆ ನಡೆದಿದೆ.

ಸಿಕಂದರಾಬಾದ್‌ನ ಸೇಲ್ಸ್ ಎಕ್ಸ್‌ಕ್ಯೂಟಿವ್ ಉದ್ಯೋಗಿ ಕೆ.ವಿ. ವಿಶ್ವನಾಥನ್ ಹುಸಿಬಾಂಬ್ ಬೆದರಿಕೆಯೊಡ್ಡಿದ ಆರೋಪಿ. ವಿಪರೀತ ಮದ್ಯ ಸೇವಿಸಿದ್ದ ಆತ ವಿಮಾನನಿಲ್ದಾಣದಲ್ಲಿ ಕಾವಲು ನಿರತ ಸಿಐಎಸ್‌ಎಫ್ ಸಿಬ್ಬಂದಿ ಬಳಿ ತೆರಳಿ, ಎರಡು ವಿಮಾನಗಳಲ್ಲಿ ಬಾಂಬ್‌ಗಳಿರುವುದಾಗಿ ತಿಳಿಸಿದ್ದ.

  ಕೂಡಲೇ ಸಿಐಎಸ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ವಿಮಾನಗಳ ತಪಾಸಣೆ ನಡೆಸಿದಾಗ ಅಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಲಿಲ್ಲ. ಆನಂತರ ಪೊಲೀಸರು ವಿಶ್ವನಾಥ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಆಗ ವಿಶ್ವನಾಥನ್ ತಾನೋರ್ವ ಭಗ್ನಪ್ರೇಮಿ ಹಾಗೂ ಪಾನಮತ್ತನಾಗಿದ್ದರಿಂದ ಹುಸಿಬಾಂಬ್ ಭೀತಿಯನ್ನು ಹರಡಿದ್ದೆ ಎಂದು ತಪ್ಪೊಪ್ಪಿಕೊಂಡನೆಂದು ಮೂಲಗಳು ತಿಳಿಸಿವೆ.

 ಚೆನ್ನೈ ವಿಮಾನದಲ್ಲಿ ಪ್ರಯಾಣಿಸಲಿದ್ದ ಆತನನ್ನು ಬಂಧಿಸಿ, ವಿಚಾಣೆ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News