ಶಾಕೀಬ್ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ 3ನೇ ಆಟಗಾರ

Update: 2019-07-06 18:44 GMT

ಲಂಡನ್, ಜು.6: ಬಾಂಗ್ಲಾದೇಶ ತಂಡದ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಶಾಕೀಬ್ ಪಾಕ್ ವಿರುದ್ಧ ಕೊನೆಯ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದರೂ, ಬಂಗ್ಲಾ 94 ರನ್‌ಗಳ ಸೋಲು ಅನುಭವಿಸಿತ್ತು.

 ಶಾಕೀಬ್ ಆಡಿರುವ 8 ಪಂದ್ಯಗಳಲ್ಲಿ 2 ಶತಕ ಮತ್ತು 5 ಅರ್ಧಶತಕಗಳನ್ನು ಒಳಗೊಂಡ 606 ರನ್ ಗಳಿಸಿದ್ದಾರೆ. ರನ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 11 ವಿಕೆಟ್ ಪಡೆದಿದ್ದಾರೆ. ಒಂದೇ ಆವೃತ್ತಿಯಲ್ಲಿ 600ಕ್ಕೂ ಅಧಿಕ ರನ್ ಮತ್ತು 11 ವಿಕೆಟ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಮೊದಲು ಅವರಿಗೆ 600 ರನ್ ತಲುಪಲು 58 ರನ್‌ಗಳ ಕೊರತೆ ಇತ್ತು. ಆದರೆ ಅವರು 31ನೇ ಓವರ್‌ನಲ್ಲಿ ಪಾಕಿಸ್ತಾನದ ಶಾಹಿನ್ ಅಫ್ರಿದಿ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ 2019ರಲ್ಲಿ ಗಳಿಸಿದ ರನ್‌ನ್ನು 600ಕ್ಕೆ ಏರಿಸಿದರು. ಅವರು 77 ಎಸೆತಗಳಲ್ಲಿ 64 ರನ್ ಗಳಿಸಿ ನಿರ್ಗಮಿಸಿದರು.

 ಈ ಮೊದಲು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 2003ರಲ್ಲಿ 673 ರನ್ ಗಳಿಸಿದ್ದರು. 2007ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್ 659 ರನ್ ಗಳಿಸಿದ್ದರು. ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದ ಸಾರ್ವಕಾಲಿಕ ಆಟಗಾರರ ಪೈಕಿ ಶಾಕೀಬ್ 9ನೇ ಸ್ಥಾನದಲ್ಲಿದ್ದಾರೆ. ಅವರು 29 ಪಂದ್ಯಗಳಲ್ಲಿ 1,146 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News