ಬಿಜೆಪಿ ನಾಯಕನ ಪತ್ನಿಯ ಹತ್ಯೆ ಪ್ರಕರಣ: ಪತಿಯೇ ಹಂತಕ

Update: 2019-07-07 15:22 GMT

ಬಾರಾಬಂಕಿ, ಜು. 7: ಉತ್ತರಪ್ರದೇಶದ ಬಾರಾಬಂಕಿ ನಗರದಲ್ಲಿ ಸ್ನೇಹಲತಾ ಎಂಬವರನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆಗೆ ಸಂಬಂಧಿಸಿ ಪತಿ, ಬಿಜೆಪಿಯ ಯುವ ಮೋರ್ಚಾದ ನಾಯಕ ರಾಹುಲ್ ಸಿಂಗ್ ಹಾಗೂ ಇತರ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಹುಲ್ ಮತ್ತು ಸ್ನೇಹಲತಾ ಗ್ರಾಮಕ್ಕೆ ತೆರಳುತ್ತಿದ್ದಾಗ ಅವರ ವಾಹನವನ್ನು ತಡೆದು ನಿಲ್ಲಿಸಿದ ದುಷ್ಕಮಿಗಳು ಗುಂಡು ಹಾರಿಸಿ ಸ್ನೇಹಲತಾ ಅವರನ್ನು ಹತ್ಯೆಗೈದಿದ್ದರು. “ದುಷ್ಕರ್ಮಿಗಳು ನಮ್ಮನ್ನು ದರೋಡೆಗೈಯಲು ಪ್ರಯತ್ನಿಸಿದರು. ಈ ಸಂದರ್ಭ ಪ್ರತಿಭಟಿಸಿದ ತನ್ನ ಪತ್ನಿಯನ್ನು ಅವರು ಗುಂಡು ಹಾರಿಸಿ ಹತ್ಯೆಗೈದರು” ಎಂದು ರಾಹುಲ್ ಪೊಲೀಸರಿಗೆ ತಿಳಿಸಿದ್ದರು.

ಘಟನೆಯ ಮಾಹಿತಿ ತಿಳಿದ ಬಳಿಕ ಸ್ನೇಹಲತಾ ಅವರ ಕುಟುಂಬ ಫತೇಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆ ಹಾಗೂ ಘಟನೆ ಬಗ್ಗೆ ವಿವರ ಪಡೆದುಕೊಂಡಿದೆ. ಸ್ನೇಹಲತಾ ಅವರ ತಂದೆ ರಾಜ್ ಕುಮಾರ್, ವರದಕ್ಷಿಣೆಗಾಗಿ ರಾಹುಲ್ ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ಆರೋಪಿಸಿದ್ದಾರೆ.

ತನ್ನ ಪುತ್ರಿ ಮೇಯೋ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಳು. ಅವಳು ತಿಂಗಳಿಗೆ 28 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಳು. ರಾಹುಲ್‌ನನ್ನು ಅವಳು 2019 ಜನವರಿಯಲ್ಲಿ ವಿವಾಹವಾಗಿದ್ದ. ವಿವಾಹದ ನಂತರ ರಾಹುಲ್ ಕಾರಿಗೆ ಬೇಡಿಕೆ ಒಡ್ಡಿದ್ದ ಎಂದು ರಾಜ್‌ಕುಮಾರ್ ಆರೋಪಿಸಿದ್ದಾರೆ.

ರಾಜ್ ಕುಮಾರ್ ಅವರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ನೇಹಲತಾ ಅವರ ಪತಿ ರಾಹುಲ್ ಹಾಗೂ ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News