ಅಲ್ ಖೈದಾಗೆ ಆರ್ಥಿಕ ನೆರವು: ಪಾಕಿಸ್ತಾನದಲ್ಲಿ ಎನ್‌ಜಿಒ ಮುಖ್ಯಸ್ಥನ ಬಂಧನ

Update: 2019-07-07 16:18 GMT

ಪೇಶಾವರ, ಜು.7: ಸೇವಾ ಕಾರ್ಯದ ಹೆಸರಿನಲ್ಲಿ ಭಾರೀ ಮೊತ್ತದ ಹಣ ಪಡೆದು ಅದನ್ನು ಅಲ್ ಖೈದಾ ಉಗ್ರರಿಗೆ ಪೂರೈಸಿದ ಆರೋಪದಲ್ಲಿ ಅಂತರಾಷ್ಟ್ರೀಯ ಎನ್‌ಜಿಒ(ಸರಕಾರೇತರ ಸಂಘಟನೆ)ದ ಪ್ರಾದೇಶಿಕ ಮುಖ್ಯಸ್ಥನನ್ನು ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ದಳ ಬಂಧಿಸಿದೆ.

‘ಹ್ಯೂಮನ್ ಕನ್ಸರ್ನ್ ಇಂಟರ್‌ ನ್ಯಾಷನಲ್’ ಎಂಬ ಎನ್‌ಜಿಒ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಅಲಿ ನವಾಝ್ ಎಂಬಾತನನ್ನು ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಬಂಧಿಸಿರುವುದಾಗಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

  ಎನ್‌ಜಿಒದ ಖಾತೆಗೆ 11 ಬ್ಯಾಂಕ್ ಖಾತೆಗಳಿಂದ ಮಿಲಿಯಾಂತರ ರೂಪಾಯಿ ಸೇವಾ ಕಾರ್ಯಗಳಿಗೆಂದು ವರ್ಗಾವಣೆಯಾಗಿದೆ. ಆದರೆ ಈ ಹಣವನ್ನು ಅಲ್ ಖೈದಾಗೆ ಪೂರೈಸಲಾಗಿದೆ ಎಂದು ಫೆಡರಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ ಮಾಹಿತಿ ನೀಡಿತ್ತು. ಎಫ್‌ಐಆರ್‌ನಲ್ಲಿ ನವಾಝ್, ಮುಹಮ್ಮದ್ ಫಾರೂಕ್ ಅವಾನ್ ಮತ್ತು ಮುಹಮ್ಮದ್ ನಯೀಮ್ ಅವರ ಹೆಸರನ್ನು ನಮೂದಿಸಲಾಗಿದೆ. ಈ ಮಾಹಿತಿಯಂತೆ ಪ್ರಮುಖ ಆರೋಪಿ ನವಾಝ್‌ನನ್ನು 1997ರ ಭಯೋತ್ಪಾದನಾ ವಿರೋಧಿ ಕಾಯ್ದೆಯ 11-ಎನ್ ಸೆಕ್ಷನ್‌ನಡಿ ಬಂಧಿಸಿದ್ದು ಆತನನ್ನು ಹೆಚ್ಚಿನ ವಿಚಾರಣೆಗಾಗಿ ಭಯೋತ್ಪಾದನಾ ನಿಗ್ರಹ ದಳದ ವಶಕ್ಕೆ ಒಪ್ಪಿಸಲಾಗಿದೆ.

    ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ಪೂರೈಸುವುದನ್ನು ಹಾಗೂ ಹಣದ ಅಕ್ರಮ ಸಾಗಣೆ ಹತ್ತಿಕ್ಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಕಳೆದ ಜೂನ್‌ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಿದೆ. ಅಲ್ಲದೆ, ಭಯೋತ್ಪಾದಕರಿಗೆ ಆರ್ಥಿಕ ನೆರವು ಪೂರೈಕೆ ಹತ್ತಿಕ್ಕಲು ಯೋಜನೆಯೊಂದನ್ನು ಅಕ್ಟೋಬರ್ ಒಳಗೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಕ್ ಸರಕಾರಕ್ಕೆ ಎಚ್ಚರಿಸಿದೆ.

ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ಪೂರೈಕೆ ಹಾಗೂ ಹಣ ಅಕ್ರಮ ಸಾಗಣೆ ನಿಬರ್ಂಧಿಸುವ ಕಾನೂನು ದುರ್ಬಲವಾಗಿರುವ ರಾಷ್ಟ್ರಗಳನ್ನು ಬೂದು ಪಟ್ಟಿಗೆ ಸೇರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News