ಸಾಹಿತ್ಯ ಮತ್ತು ಬದುಕಿನ ಶೋಧನೆ

Update: 2019-07-07 18:33 GMT

ಕಾರ್ನಾಡರು ಮೂಲಭೂತವಾಗಿ ಒಬ್ಬ ವಿನಯವಂತ ಲೇಖಕರು, ನಾಟಕಕಾರರು ಮತ್ತು ನಟರೂ ಆಗಿದ್ದರಿಂದ ಒಂದು ವಿಧದ ಮುಕ್ತ ವಾತಾವರಣ ನಿರ್ಮಾಣವಾಗಿ ಬಿಡುತ್ತಿತ್ತು. ಹಾಗೆಯೇ ಅವರನ್ನು ಗಿರೀಶ್ ಅಥವಾ ಕಾರ್ನಾಡ್ ಎಂದು ಕರೆದರೆ ಸಂತೋಷಪಡುತ್ತಿದ್ದರು. ನನ್ನ ಅರಿವಿನ ಮಟ್ಟಿಗೆ ಸರ್ ಎಂಬುದನ್ನು ಯಾವುದೇ ಕಾರಣಕ್ಕೂ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ನಾನೂ ಒಬ್ಬ ಸಾಮಾನ್ಯ ಮನುಷ್ಯ ಎಂದೇ ಕೊನೆಯವರೆಗೂ ಸಾಬೀತುಪಡಿಸುವಂತೆ ಬದುಕಿ ಹೋಗಿದ್ದಾರೆ.

‘‘ನಾವು ನಮ್ಮನ್ನು ಅಡಗಿಸಿಕೊಳ್ಳಲಾರದಿರುವುದೇ ನಾವು ಆತ್ಮ ವಿಲೋಪ ಮಾಡಲಾರದಿರುವುದಕ್ಕೆ ಕಾರಣ. ಸಾಮಾನ್ಯವಾದ ಒಂದು ಭಾವದ ಪ್ರವಾಹ ಮೂಡಿತೆಂದರೆ ನಾವೇ ಎಲ್ಲಕ್ಕಿಂತ ಮೇಲ್ಮಟ್ಟವರೆಂದು ಕೊಚ್ಚಿಕೋಳ್ಳುತ್ತೇವೆ. ಆತ್ಮಗೋಪನ ಮಾಡಿಕೋಳ್ಳಲಾರೆವಾದ್ದರಿಂದ ಸರ್ವದಾ ನಮ್ಮ ಚಿಂತೆ ನಾನು ಹೇಗೆ ಕಾಣಿಸುತ್ತಿದ್ದೇನೆ ಎಂಬುದಾಗಿರುತ್ತದೆ. ಯಾರ ಮಧ್ಯ ಮಟ್ಟದ ದೊಡ್ಡ ಮನುಷ್ಯರು ಅವರು ತಮ್ಮ ಶುಭ ಸಂಕಲ್ಪವನ್ನು ಸಾಧಿಸಬಯಸುವುದು ವಾಸ್ತವ.’’
ಈ ಸಾಲುಗಳು ರವೀಂದ್ರನಾಥ ಟಾಗೋರ್ ಅವರು ರಾಜ ರಾಮ ಮೋಹನ್‌ರಾಯ್ ಅವರನ್ನು ಕುರಿತು ಬರೆದಿರುವಂತಹದ್ದು. ಸುಮಾರು ನೂರೈವತ್ತು ವರ್ಷಗಳ ಹಿಂದೆ ಭಾರತದ ಸಾಹಿತ್ಯ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭದ ಮಹಾನ್ ಲೇಖಕ ಬರೆದಿರುವಂತಹದ್ದು. ಯಾಕೆ ಇಂಥ ಸಾಲುಗಳು ನಮ್ಮನ್ನು ಅತ್ಯಂತ ಗಾಢವಾಗಿ ಕಾಡುತ್ತವೆ ಅನ್ನಿಸುತ್ತದೆ. ಹಾಗೆ ನೋಡಿದರೆ ಟಾಗೋರ್ ಅವರ ‘ಬುದ್ಧದೇವ; ಭಾರತ ಪಥೀಕ ರಾಮಮೋಹನರಾಯ್, ವಿದ್ಯಾಸಾಗರ ಚರಿತೆ, ಮಹಾತ್ಮಾ ಗಾಂಧಿ’ ಯಂಥ ಲೇಖನಗಳನ್ನು ನನ್ನ ಮಾನಸಿಕ ತವಕ ತಲ್ಲಣಗಳ ಸಮಯದಲ್ಲೆಲ್ಲ ಓದಿಕೊಳ್ಳಲು ಪ್ರಯತ್ನಿಸಿರುವೆ. ಯಾಕೆಂದರೆ ಬಹುದೊಡ್ಡ ಸಮಾಜದಲ್ಲಿ ಎಂತೆಂಥ ಮಹನೀಯರು ಬಂದುಹೋಗಿರುತ್ತಾರೆ ಎಂದು. ಈ ದೃಷ್ಟಿಯಿಂದ ನನಗೆ ಮುಖಾಮುಖಿಯಾದ ಶಿವರಾಮಕಾರಂತ, ಕುವೆಂಪು, ಅನಂತಮೂರ್ತಿ, ಲಂಕೇಶ, ಕಾರ್ನಾಡ್ ಮುಂತಾದವರು ಮೇಲೆ ಪ್ರಸ್ತಾಪಿಸಿದ ಮನೋಲೋಕಕ್ಕೆ ಸೇರಿದವರು. ಆಯಾ ಕಾಲಘಟ್ಟದ ಬದುಕಿನ ವಿಷಮ ಸಂಗತಿಗಳು ಏನೇನೋ ಕ್ರೈಸೀಸ್‌ಗಳನ್ನು ನಮಗೆ ವ್ಯಾಖ್ಯಾನಿಸಿಕೊಳ್ಳಿ ಎಂದು ಬಿಟ್ಟು ಹೋಗಿರುತ್ತವೆ. ಹೀಗೆ ವ್ಯಾಖ್ಯಾನಿಸಿಕೊಳ್ಳುವುದೇ ಸೃಜನಶೀಲ ಪ್ರಕ್ರಿಯೆಯಾಗಿರುತ್ತದೆ.
 ಬೇಂದ್ರೆ ಮತ್ತು ಕುರ್ತಕೋಟಿ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಗರಡಿಯಲ್ಲಿ ಬೆಳೆದ ಗಿರೀಶ್ ಕಾರ್ನಾಡ್ ಈ ಪ್ರಕ್ರಿಯೆಯ ವಕ್ತಾರರಾಗಿಯೇ ಶೋಧಕರಾಗಿಯೇ ತಮ್ಮನ್ನು ತೊಡಗಿಸಿಕೊಂಡು ಯೋಚಿಸಿದವರು ಮತ್ತು ಬರೆದವರು.
ಇದಕ್ಕೆ ಪೂರಕವೆಂಬಂತೆ ಕಾರ್ನಾಡರ ಬದುಕಿನ ವ್ಯಾಪಕತೆ ಬಹು ವಿಶಾಲವಾಗಿ ತೆರೆದುಕೊಂಡಿರುವಂತಹದ್ದು. ಈ ನೆಲೆಯಲ್ಲಿ ಅವರ ಒಟ್ಟು ಅಧ್ಯಯನಶೀಲತೆ ಮತ್ತು ಚಿಂತನಾಕ್ರಮವು ಬಹು ದೊಡ್ಡ ಚೌಕಟ್ಟನ್ನ ಎದುರಾಗಿಸಿತು. ಎಷ್ಟು ಬೇಕಾದರೂ ಗ್ರಹಿಕೆಯನ್ನು ವಿಸ್ತರಿಸಿಕೊಳ್ಳಬಹುದು ಎಂದು. ಇಂಥ ವಿಶ್ವವ್ಯಾಪಕತೆಯ ಕ್ಯಾನವಾಸ್ ಬಹುದೊಡ್ಡ ಪ್ರಮಾಣದಲ್ಲಿ ಕಾರ್ನಾಡರ ನಂತರ ಯು. ಆರ್. ಅನಂತಮೂರ್ತಿಯವರಿಗೆ. ಇಲ್ಲಿ ಅವರಿಗೆ ಎದುರಾದ ಲೇಖಕರು, ಕಲಾವಿದರು, ಚಿಂತಕರು, ರಾಜಕಾರಣಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸಾಮಾನ್ಯ ವ್ಯಕ್ತಿಗಳೇನೂ ಆಗಿರಲಿಲ್ಲ. ಎಲ್ಲರೂ ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿದ್ದವರೇ ಆಗಿದ್ದರು. ಕಾರ್ನಾಡರು ತಮ್ಮ ‘ಯಯಾತಿ ಮತ್ತು ತುಘಲಕ್’ ನಾಟಕಗಳ ಮೂಲಕ ದೊರಕಿದ ವೇದಿಕೆಯನ್ನು ಬಹುದೊಡ್ಡ ಸಾಂಸ್ಕೃತಿಕ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡರು.
ಹಾಗೇ ನೋಡಿದರೆ ಕಾರ್ನಾಡರು ಅನಂತಮೂರ್ತಿಯವರಂತೆ ವ್ಯಾಪಕತೆಯನ್ನು ಹೊಂದಿದ್ದ ಭಾಷಣಕಾರರೇನು ಆಗಿರಲಿಲ್ಲ. ಆದರೆ ಅಗಾಧವಾದ ಅರಿಯುವ ಮತ್ತು ಅದನ್ನು ನಿರ್ವಹಿಸುವ ಧಾರಣಶಕ್ತಿ ಕಾರ್ನಾಡರಲ್ಲಿ ಇತ್ತು. ಇಂಥ ಮನಸ್ಥಿತಿ ಇದ್ದುದರಿಂದಲೇ ‘ತುಘಲಕ್’ ರೀತಿಯ ಅತ್ಯಂತ ಮಹತ್ವಾಕಾಂಕ್ಷೆಯ ಪಾತ್ರವನ್ನು ಅವನ ಏಳು ಬೀಳುಗಳ ನೆಲೆಯಲ್ಲಿ ಚಿತ್ರಿಸಿ ಸಾರ್ವಕಾಲಿಕ ಕಲಾಕೃತಿಯನ್ನಾಗಿ ಸಾಹಿತ್ಯ ಮತ್ತು ರಂಗ ಭೂಮಿಯ ಲೋಕಕ್ಕೆ ಕೊಟ್ಟಿರುವುದು. ಇದರಿಂದಾಗಿ ಅದು ಪ್ರದರ್ಶನಗೊಂಡ ಎಲ್ಲಾ ಭಾಷೆಗಳಲ್ಲಿ ಸಿ.ಆರ್. ಸಿಂಹ ರೀತಿಯ ನಟರು ಹುಟ್ಟಿಕೊಂಡಿರುತ್ತಾರೆ. ಇಂಥದ್ದು, ಒಂದು ಶ್ರೇಷ್ಠ ನಾಟಕ ಕೃತಿಗೆ ಸಾಧ್ಯವಿರುತ್ತದೆ. ಹೀಗೆ ಇತಿಹಾಸದುದ್ದಕ್ಕೂ ಇಂತಹ ಮಹೋನ್ನತ ನಾಟಕಗಳು ಕಲಾವಿದರ ಮರು ಸೃಷ್ಟಿ ಪ್ರಕ್ರಿಯೆಯಲ್ಲಿ ನಿರಂತರ ಸೃಜನಶೀಲ ಪಾತ್ರವನ್ನು ನಿರ್ವಹಿಸಿರುತ್ತವೆ. ಈ ದೃಷ್ಟಿಯಿಂದ ಕಾರ್ನಾಡರ ಮುಂದೆ ಮಾತಿಗೆ ಕೂತಾಗಲೆಲ್ಲ ರಾಮಾಯಣ ಮತ್ತು ಮಹಾಭಾರತವನ್ನು ಉದಾಹರಿಸುತ್ತಲೇ ಇದ್ದರು. ಇಷ್ಟು ಸಾವಿರ ವರ್ಷಗಳ ನಂತರವೂ ಖನಿಜ ರೂಪದಲ್ಲಿ ನಮಗೆ ವಸ್ತು ಬಾಹುಳ್ಯವನ್ನ ವಿಸ್ತರಿಸುತ್ತಲೇ ಇವೆ ಎಂದು. ಇಲ್ಲದಿದ್ದರೆ ಷೇಕ್ಸ್‌ಪಿಯರ್ ನಾಟಕಗಳು ಜಗತ್ತಿನ ಉದ್ದಗಲಕ್ಕೂ ಪ್ರದರ್ಶನಗೊಳ್ಳುತ್ತಾ ಕೋಟ್ಯಂತರ ಮನಸ್ಸುಗಳ ನಡುವೆ ಸಂಚಲನವನ್ನು ಮೂಡಿಸುತ್ತಿರಲಿಲ್ಲ. ಆದ್ದರಿಂದಲೇ ಪೀಟರ್ ಬ್ರೂಕ್ ರೀತಿಯ ಮಹಾನುಭಾವ ಮಹಾಭಾರತವನ್ನು ಹನ್ನೆರಡು ಗಂಟೆಗಳಿಗೆ ಸಿದ್ಧಪಡಿಸಿ ನೋಡಿ ಇಂಥದೊಂದು ಅಮೋಘ ಕಲಾಕೃತಿ ಇದೆ ಎಂದು ವಿಶ್ವದ ಎಷ್ಟೊಂದು ರಾಷ್ಟ್ರಗಳಲ್ಲಿ ಸುತ್ತಾಡಿದ ಎಂಬ ವಿಷಯ ಕುರಿತು ಮಾತಾಡುವಾಗ ಅವರೇ ಬಹುದೊಡ್ಡ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದರು.
ಯಾಕೆಂದರೆ ಅವರು ಮೂಲಭೂತವಾಗಿ ಮಹತ್ವದ ನಟರೇ ಆಗಿದ್ದರು. ಹಾಗೆಯೇ ‘ತುಘಲಕ್’ ನಾಟಕವು ಬೇರೆ ಬೇರೆ ಭಾಷೆಗಳಲ್ಲಿ ಪ್ರಯೋಗವಾದಾಗ ಕಾರ್ನಾಡರು ಎದುರಿಸಿದ ಸ್ವಾರಸ್ಯಕರ ಪ್ರಸಂಗಗಳನ್ನು ನಿಜವಾಗಿಯೂ ಅನುಭವಿಸಿದ್ದೇನೆ ಎಂಬುದು ಖುಷಿಯ ಸಂಗತಿ.ಭೌತಿಕವಾಗಿ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದರಿಂದ ಎಂಥವರನ್ನೂ ಮುಂದೆ ಕೂತು ಕೇಳುವಂತೆ ಮಾಡಿಬಿಡುವ ಚೈತನ್ಯಶೀಲತೆ ಅವರಲ್ಲಿತ್ತು.

ಕಾರ್ನಾಡರು ಮೂಲಭೂತವಾಗಿ ಒಬ್ಬ ವಿನಯವಂತ ಲೇಖಕರು, ನಾಟಕಕಾರರು ಮತ್ತು ನಟರೂ ಆಗಿದ್ದರಿಂದ ಒಂದು ವಿಧದ ಮುಕ್ತ ವಾತಾವರಣ ನಿರ್ಮಾಣವಾಗಿ ಬಿಡುತ್ತಿತ್ತು. ಹಾಗೆಯೇ ಅವರನ್ನು ಗಿರೀಶ್ ಅಥವಾ ಕಾರ್ನಾಡ್ ಎಂದು ಕರೆದರೆ ಸಂತೋಷಪಡುತ್ತಿದ್ದರು. ನನ್ನ ಅರಿವಿನ ಮಟ್ಟಿಗೆ ಸರ್ ಎಂಬುದನ್ನು ಯಾವುದೇ ಕಾರಣಕ್ಕೂ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ನಾನೂ ಒಬ್ಬ ಸಾಮಾನ್ಯ ಮನುಷ್ಯ ಎಂದೇ ಕೊನೆಯವರೆಗೂ ಸಾಬೀತುಪಡಿಸುವಂತೆ ಬದುಕಿಹೋಗಿದ್ದಾರೆ. ಇದಕ್ಕೆ ಬಹುದೊಡ್ಡ ವ್ಯಕ್ತಿತ್ವಗಳ ಮಾದರಿಗಳನ್ನು ತಮ್ಮ ಅಂತರಂಗದಲ್ಲಿ ಕಾಪಿಟ್ಟುಕೊಂಡು ಬಂದವರು. ಆದ್ದರಿಂದ ಎಲ್ಲರೊಳಂದಾಗಿರುವ ಗುಣಾತ್ಮಕತೆಗೆ ಎಂದೂ ಧಕ್ಕೆ ತಂದುಕೊಂಡವರಲ್ಲ. ಈ ರೀತಿಯ ವ್ಯಕ್ತಿತ್ವ ಇದ್ದುದರಿಂದಲೇ ಬಹುಮುಖ್ಯ ಸಂಸ್ಥೆಗಳಾದ ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್, ಕೇಂದ್ರ ಸಂಗೀತ ನೃತ್ಯ ನಾಟಕ ಅಕಾಡಮಿ, ಲಂಡನ್‌ಲ್ಲಿರುವ ನೆಹರೂ ಕಲ್ಚರಲ್ ಸೆಂಟರ್‌ನ ನಿರ್ದೇಶಕರಾಗಿ ಅತ್ಯಂತ ಶಿಸ್ತು ಬದ್ಧವಾಗಿ ನಿರ್ವಹಿಸಿದವರು. ಹಾಗೆ ನೋಡಿದರೆ ಅವರ ‘ನಾಗಮಂಡಲ ಮತ್ತು ಹಯವದನ’ ನಾಟಕಗಳು ಗೌರವಾನ್ವಿತ ಫೆಲೋಶಿಪ್‌ಗಳ ಮೂಲಕ ಅಮೇರಿಕದಲ್ಲಿದ್ದು ಬರೆದವುಗಳು. ಆಗ ಎ.ಕೆ. ರಾಮಾನುಜನ್ ಅವರಂಥ ಮಹಾನ್ ವಿದ್ವಾಂಸರ ಮತ್ತು ಸೃಜನಶೀಲ ಲೇಖಕರ ಒಡನಾಟವನ್ನು ಸಾರ್ಥಕ ರೀತಿಯಲ್ಲಿ ಅನುಭವಿಸಿದವರು.
ಬೆಂಗಳೂರಿಗೆ ಎ.ಕೆ. ರಾಮಾನುಜನ್ ಅವರು ಬಂದಾಗ ಅದ್ಭುತ ಎನ್ನಬಹುದಾದ ಮಾತುಕತೆಯ ಸಂಜೆಗಳನ್ನು ಕಾರ್ನಾಡ್ ಅವರು ಯು.ಆರ್. ಅನಂತಮೂರ್ತಿ, ರಾಮಚಂದ್ರ ಶರ್ಮ, ಡಿ.ಆರ್. ನಾಗರಾಜ್, ಕಿ.ರಂ, ಕೆ. ಮರಳುಸಿದ್ದಪ್ಪ ವೈ.ಎನ್. ಕೆ ಅಂಥವರು ಸೇರಿದಾಗ; ಸಾಹಿತ್ಯ, ಕಾವ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಎಂತೆಂಥ ಸಂವಾದಗಳು ಅರ್ಥವ್ಯಾಪಕತೆಯನ್ನು ಪಡೆಯುತ್ತಿದ್ದವು. ಕಾರ್ನಾಡರು ಬಹುದೊಡ್ಡ ಪ್ರಮಾಣದಲ್ಲಿ ಪುಸ್ತಕ ಸಂಸ್ಕೃತಿಯಿಂದ ಬೆಳೆದಿದ್ದರಿಂದ ಅವರೊಂದಿಗೆ ಮಾತಿಗೆ ತೊಡಗುವುದೇ ಒಂದು ವಿಧದಲ್ಲಿ ಆಪ್ತತೆ ವ್ಯಾಪಕಗೊಳ್ಳುತ್ತಿತ್ತು. ಈ ಕಾರಣಕ್ಕಾಗಿಯೇ ಅವರಿಗೆ ಪುಸ್ತಕ ಸಂಸ್ಕೃತಿಯು ಎಂದೂ ಬೇರೆಯಾಗಿರಲಿಲ್ಲ. ಈ ನೆಲೆಯಲ್ಲಿ ಅವರ ಮನೆಯಲ್ಲಿ ಅಥವಾ ಬೇರೆಲ್ಲಿಯಾದರೂ ಸೇರಿದಾಗ; ಒಂದು ವಿಧದ ತೃಪ್ತತೆ ಮನಸ್ಸಿನಲ್ಲಿ ಆವರಿಸಿಕೊಳ್ಳುತ್ತಿತ್ತು.
 ಸುಮಾರು ಮೂರು ದಶಕಗಳ ಹಿಂದೆ ಒಂದು ಅಪೂರ್ವ ಕಾರ್ಯಕ್ರಮಕ್ಕಾಗಿ ಹೆಗ್ಗೋಡಿಗೆ ಹೋದೆವು. ಅಲ್ಲಿ ಪ್ರಸನ್ನ ಅವರು ‘ಕವಿ ಕಾವ್ಯ’ ಟ್ರಸ್ಟನ್ನು ಪ್ರಾರಂಭಿಸಿದರು. ಅದರ ಉದ್ಘಾಟನೆಗೆ ಗಿರೀಶ್ ಕಾರ್ನಾಡ್, ರಾಮಚಂದ್ರ ಶರ್ಮ, ರಾಜೀವ್ ತಾರಾನಾಥ್, ಚಂದ್ರಶೇಖರ್ ಕಂಬಾರ, ಡಿ.ಆರ್. ನಾಗರಾಜ್, ಕೆ. ಮರಳುಸಿದ್ದಪ್ಪ, ಕೆ.ಎಚ್. ಶ್ರೀನಿವಾಸ್, ಕೆ.ವಿ. ಸುಬ್ಬಣ್ಣ ಮುಂತಾದವರೆಲ್ಲ ಭಾಗಿಯಾಗಿದ್ದೆವು. ಅದೊಂದು ಸ್ಮರಣೀಯ ಅನುಭವ. ಕಾರ್ನಾಡರು ಕವಿ ಕಾವ್ಯ ಮತ್ತು ನಾಟಕಕ್ಕೆ ಸಂಬಂಧಿಸಿದಂತೆ ಅದ್ಭುತ ಒಳನೋಟಗಳನ್ನು ತಮ್ಮ ಮುಂದಿಟ್ಟಿದ್ದರು. ಅದೇ ರೀತಿಯಲ್ಲಿ ರಾಜೀವ್ ತಾರಾನಾಥ್ ಅವರು ಅದಾದ ಮೇಲೆ ಊಟದ ನಂತರ ವಿರಮಿಸಲು ಅಲ್ಲೊಂದು ವಿಶಾಲವಾದ ಸಭಾಂಗಣದಲ್ಲಿ ಎಲ್ಲರೂ ಚಾಪೆಯ ಮೇಲೆ ಮಲಗಿದರು. ಚಿಕ್ಕ ಹುಡುಗರ ರೀತಿಯಲ್ಲಿ ಹೊರಳಾಡುತ್ತ ಏನೇನೋ ಮಾತಾಡುತ್ತ ಕಾಲ ಕಳೆದರು. ಸಂಜೆಗೆ ಪ್ರಸನ್ನ ಅವರು ತಮ್ಮ ಕಲಾತ್ಮಕವಾದ ಮನೆಯಲ್ಲಿ ಅಪೂರ್ವ ಎನ್ನುವ ಸಂವಾದವನ್ನು ಏರ್ಪಡಿಸಿದ್ದರು. ಯಾಕೆಂದರೆ, ಪ್ರಸನ್ನ ಏನೇ ಮಾಡಿದರೂ ಅದಕ್ಕೊಂದು ಲಯಬದ್ಧತೆ ಇರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಒಂದು ಅಗ್ನಿಕುಂಡ ನಿರ್ಮಾಣ ಮಾಡಿದ್ದರು. ಎಲ್ಲರೂ ಸುತ್ತಲೂ ಕೂತು ಸಂವಾದಕ್ಕೆ ತೊಡಗಿದ್ದರು. ಕೆ.ವಿ. ಸುಬ್ಬಣ್ಣನವರು ಡಿ.ಆರ್‌ಗೆ ಮಾತಾಡಲು ಸೂಚಿಸಿದರು. ಅಂದು ಡಿ.ಆರ್. ಪುರೋಹಿತಶಾಹಿ ಮತ್ತು ಕೆಳವರ್ಗದವರ ಸಂಸ್ಕೃತಿ ಕುರಿತು ಎಷ್ಟು ಅಮೋಘವಾಗಿ ಮಾತಾಡಿದ. ಅದಕ್ಕೆ ಕಾರ್ನಾಡರು ಪುಳಕಿತರಾಗಿ ಡಿ.ಆರ್. ಬಳಿಗೆ ಹೋಗಿ ಅಗ್ನಿ ಸಾಕ್ಷಿಯಾಗಿ ಅವನನ್ನು ಒಪ್ಪಿಕೊಂಡು ಗೌರವ ಸೂಚಿಸಿದ್ದರು. ಅದನ್ನು ಸಮಯ ಸಿಕ್ಕಿದಾಗಲೆಲ್ಲ ಕಾರ್ನಾಡರು ಯಾರ್ಯಾರ ಬಳಿಯೋ ಮೆಚ್ಚುಗೆಯ ಮಾತನಾಡಿದ್ದರು. ಈ ರೀತಿಯದ್ದು ಅವರ ವ್ಯಕ್ತಿತ್ವದಲ್ಲಿಯೇ ಬೆಳೆದಿತ್ತು.
ಇದಾದ ಕೆಲವು ವರ್ಷಗಳ ನಂತರ ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠಕ್ಕೆ ದೊಡ್ಡ ಪ್ರಮಾಣದಲ್ಲಿ ಲೇಖಕರ, ಕಲಾವಿದರ, ಕಲಾವಿದರ ಬಳಗ ಹೊರಟಿದ್ದೆವು. ಅದೊಂದು ಅಪೂರ್ವ ಅನುಭವ. ಆ ಸಂದರ್ಭದಲ್ಲಿ ಕಾರ್ನಾಡರು ಎಷ್ಟು ಗೌರವಾನ್ವಿತರಾಗಿ ವ್ಯವಹರಿಸಿದರು. ಪೊಲೀಸರ ಬಳಿಯೂ ಅಷ್ಟೇ, ಪೊಲೀಸರ ಪ್ರತಿಬಂಧನ ನಡುವೆ ಕಾರ್ನಾಡರು, ಜಿ.ಕೆ. ಗೋವಿಂದ ರಾವ್,ಕೆ. ಮರುಳಸಿದ್ದಪ್ಪ, ಗೌರಿ ಲಂಕೇಶ್, ಪ್ರೊ. ಶ್ರೀಧರ್ ಮತ್ತು ನಾನು, ಮಿಕ್ಕ ನೂರಾರು ಮಂದಿಯ ನಡುವೆ ಪಡೆದ ಅನುಭವವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಕಾರ್ನಾಡರು ಚಿಕ್ಕಹುಡುಗನಂತೆ ಯಾವುದೇ ವಿಧವಾದ ಹಮ್ಮು ಬಿಮ್ಮು ಇಲ್ಲದೆ, ಲವಲವಿಕೆಯನ್ನು ತುಂಬುತ್ತಿದ್ದರು. ಇದು ಅವರ ವ್ಯಕ್ತಿತ್ವದಲ್ಲಿ ದಟ್ಟವಾಗಿದ್ದ ಬಹುಮುಖೀ ನೆಲಗಳ ಸಾಕ್ಷೀಭೂತವಾಗಿತ್ತು. ಈ ರೀತಿಯಲ್ಲಿ ಎಲ್ಲರೊಳಂದಾಗುವ ಪರಿಯೇ ಮಹತ್ವಪೂರ್ಣವಾದದ್ದು. ಮುಂದೆ ಶೂದ್ರದ ಧರ್ಮ ಸಂವಾದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ್, ಸಿದ್ಧಯ್ಯ ಪುರಾಣಿಕರು, ಸಿರಿಗೆರೆಯ ಪೂಜ್ಯ ಇಬ್ಬರೂ ಸ್ವಾಮಿಗಳೂ, ಪ್ರಸಿದ್ಧ ವಿದ್ವಾಂಸರಾದ ಆಸ್ಫರ್ ಅಲಿ ಇಂಜಿನಿಯರ್, ಲಂಕೇಶ್, ಕಾರ್ನಾಡರು ಮುಂತಾದವರೆಲ್ಲ ಭಾಗವಹಿಸಿದ್ದರು. ಡಿ.ಆರ್. ನಾಗರಾಜ್ ಸಂಚಾಲಕನಾಗಿದ್ದ. ಮೊದಲನೆಯ ಬಾರಿಗೆ ಅಮೋಘ ಎನ್ನಬಹುದಾದ ಬಯಲು ರಂಗಭೂಮಿ ನಾಟಕೋತ್ಸವ ಚಾರಿತ್ರಿಕ ಎನ್ನುವ ರೂಪ ಪಡೆದಿದ್ದು: ಲಂಕೇಶ್, ಬಿ.ವಿ. ಕಾರಂತ್, ಕಾರ್ನಾಡ್ ಮತ್ತು ಕೆ. ಮರುಳಸಿದ್ದಪ್ಪ ಅವರಿಂದ. ಆ ಸಂದರ್ಭದಲ್ಲಿ ‘ಈಡಿಪಸ್’ ನಾಟಕದಲ್ಲಿ ಕಾರ್ನಾಡ್ ಅವರು ಎಂಥ ಸ್ಮರಣೀಯ ನಟನೆಯನ್ನು
ಸಂಸ ರಂಗಭೂಮಿಗೆ ಧಾರೆಯೆರೆದರು. ಲಂಕೇಶ ಅವರು ಈ ಉತ್ಸವಕ್ಕಾಗಿಯೇ ಅನುವಾದಿಸಿದರು. ಬ.ವಿ ಕಾರಂತರ ನಿರ್ದೇಶನ. ಮತ್ತೆ ಅವರ ಸಂಸ್ಕಾರ ಚಿತ್ರದಲ್ಲಿ ಪ್ರಾಣೇಶಚಾರ್ಯರ ನಟನೆಯನ್ನು ಹೇಗೆ ಮರೆಯಲು ಸಾಧ್ಯ. ಆದರೆ ಇಷ್ಟು ಎತ್ತರದ ವ್ಯಕ್ತಿ ಪಟ್ಟಾಭಿರಾಮ ರೆಡ್ಡಿಯವರ ನಿಧನದ ನಂತರ ಹಾಗೂ ಯು.ಆರ್ ಅನಂತಮೂರ್ತಿಯವರ ನಿಧನದ ನಂತರ ಅತ್ಯಂತ ಕ್ಷುಲ್ಲಕವಾಗಿ ನಡೆದುಕೊಂಡಿದ್ದರು. ನಾನು ಅದನ್ನು ತೀವ್ರವಾಗಿ ಆಕ್ಷೇಪಿಸಿ ಮಾತಾಡಿದ್ದೆ. ಅದು ಎಲ್ಲಾ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ನಾನು ಸಂಕೋಚದಿಂದ ಒದ್ದಾಡುತ್ತಿದ್ದೆ ಆದರೆ ಕಾರ್ನಾಡರು ಒಮ್ಮೆ ಮನೆಗೆ ಕರೆದರು, ಹೋದೆ. ಕರ್ನಾಟಕ ದಲಿತ ಸಾಹಿತ್ಯ ಮತ್ತು ಅದರ ಹೋರಾಟ ಸ್ವರೂಪದ ಬಗ್ಗೆ ಅವರಿಗೆ ಮಾಹಿತಿ ಬೇಕಾಗಿತ್ತು. ಅವರು ಜೈಪುರ ಸಾಹಿತ್ಯ ಸಮಾವೇಶದಲ್ಲಿ ಈ ವಿಷಯ ಕುರಿತು ಮಾತಾಡಬೇಕಿತ್ತು. ಸುಮಾರು ಎರಡು ಘಂಟೆ ಸಂತೋಷವಾಗಿ ಕಾಲ ಕಳೆದವು.
ಜೈಪುರದಿಂದ ಬಂದ ಮೇಲೆ ಅಲ್ಲಿಯ ಸಂತೋಷದ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡರು. ಇದಾದ ಮೇಲೆ ಅವರನ್ನು ಎರಡು ಮೂರು ವರ್ಷಗಳಿಂದ ನೊಡಲಾಗಲಿಲ್ಲ. ತೀವ್ರ ಅನಾರೋಗ್ಯದಿಂದ ನರಳುತ್ತಿರುವುದು ಗೊತ್ತಾಯಿತು. ಹೋಗಿ ನೋಡಲಾಗಲಿಲ್ಲ. ಆಕ್ಸಿಜನ್ ಸಿಲಿಂಡರ್‌ನ್ನು ಮಗುವಿನಂತೆ ಎದೆಗೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅದನ್ನು ಕೇಳಿ ಅವರ ಜೀವನ ಪ್ರೀತಿಯ ಬಗ್ಗೆ ಮೆಚ್ಚುಗೆಯಾಯಿತು. ಇದರ ನಡುವೆಯೂ ಅವರ ಮತೀಯ ಸಾಮರಸ್ಯದ ಹೇಳಿಕೆಗಳೂ ಬರುತ್ತಲೇ ಇದ್ದವು. ಯಾವುದೇ ವಿಧವಾದ ಥ್ರೆಟ್‌ಗಳಿಗೆ ಹಿಂಜರಿವುದಿಲ್ಲ. ಯಾಕೆಂದರೆ, ಅವರಿಗೆ ಸಾಮಾಜಿಕ ಸಾಮರಸ್ಯವೆಂಬುದು ಒಂದು ನೈತಿಕ ವೌಲ್ಯವಾಗಿತ್ತು. ಅದನ್ನು ತಮ್ಮ ಒಟ್ಟು ದೀರ್ಘಕಾಲದ ಬದುಕಿನಲ್ಲಿ ಪ್ರಾಮಾಣಿಕವಾಗಿ ನಂಬಿದ್ದರು.
ಈ ಮಧ್ಯ ಬೆಂಗಳೂರಿನ ಜೈನ ವಿಶ್ವವಿದ್ಯಾನಿಲಯದಲ್ಲಿ ಯು.ಆರ್. ಅನಂತಮೂರ್ತಿಯವರ ಎರಡನೇ ವರ್ಷದ ನೆನಪಿನ ಕಾರ್ಯಕ್ರಮವಿತ್ತು. ಅದರಲ್ಲಿ ಇಂದಿನ ಭಾರತೀಯ ಸಂದರ್ಭದಲ್ಲಿ ಬಹುಮುಖ್ಯ ಚಿಂತಕರಲ್ಲಿ ಒಬ್ಬರಾದ, ಗಾಂಧೀಜಿಯವರ ಮತ್ತು ರಾಜಗೋಪಾಲಾಚಾರಿಯವರ ಮೊಮ್ಮಗನಾದ ಗೋಪಾಲ ಕೃಷ್ಣ ಗಾಂಧಿಯವರ ಸ್ಮರಣೀಯ ಉಪನ್ಯಾಸವಿತ್ತು. ಅದು ಮುಗಿದ ನಂತರ ರಾಮಚಂದ್ರ ಗುಹಾ ಅವರು ಗೋಪಾಲಕೃಷ್ಣ ಗಾಂಧಿಯವರಿಗೆ ನನ್ನನ್ನು ಎರಡನೇ ಬಾರಿ ಪರಿಚಯಿಸುವ ಸಮಯದಲ್ಲಿ ‘ಡಿ.ಆರ್. ನಾಗರಾಜ ಅವರ ಕ್ಲೋಸ್ ಫ್ರೆಂಡ್’ ಎಂದು ಹೇಳುವ ಸಮಯಕ್ಕೆ ನನ್ನ ಹೇಗಲಮೇಲೆ ಕೈ ಹಾಕಿ ‘ಏಯ್ ಶೂದ್ರ’ ಎಂದರು. ಹಿಂದಿರುಗಿ ನೋಡಿ ಖುಷಿಯಾಯಿತು. ಅದೇ ಸಮಯಕ್ಕೆ ಅವರ ಎದೆಯ ಮೇಲಿನ ಮಗುವಿನ ರೀತಿಯ ಸಿಲಿಂಡರ್ ಕಂಡು ವ್ಯಥೆಯಾಯಿತು. ಹಾಗೆಯೇ ಅವರ ಜೀವನದ ಅರಿಯುವ ಬಾಗಿಲುಗಳನ್ನು ಸಂಭ್ರಮದಿಂದ ತೆರೆದಿರುವುದನ್ನು ತಿಳಿದು ಪ್ರೀತಿಯಿಂದ ಕೈ ಮುಗಿದೆ. ಅದೇ ಹಸನ್ಮುಖತೆ. ರವೀಂದ್ರನಾಥ ಟಾಗೋರ್ ನೆನಪಿಗೆ ಬಂದರು. ಅವರ ಪವಿತ್ರ ನಾಡಿನಲ್ಲಿ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧಿಯವರು ನಗುನಗುತಾ ನಿಂತಿದ್ದರು. ಕೊನೆಗೂ ಪ್ರೀತಿ ಮತ್ತು ಹಸನ್ಮುಖತೆಯೆನ್ನೇ ಈ ನೆಲಕ್ಕೆ ಕೊಟ್ಟು ಹೋಗಬೇಕಾಗಿರುವುದು ಎಂದು ಕೆಲವು ಅಪೂರ್ವ ಮಾದರಿಗಳನ್ನು ಬಿಟ್ಟುಹೋಗಿದ್ದಾರೆ. ಅಂಥ ನಮ್ಮ ಕಾಲದ, ಚಾರಿತ್ರಿಕವಾಗಿ ಉಳಿಯುವ ಕಾರ್ನಾಡರಿಗೆ ನಮ್ಮ ನಮ್ರತೆಯ ನಮಸ್ಕಾರವೇ ನಮ್ಮ ಕೊಡುಗೆ.

ಕೃಪೆ : ಬಹುರೂಪಿ ಗಿರೀಶ್ ಕಾರ್ನಾಡ್
 ಸಂಪಾದಕ: ಜೋಗಿ

 

Writer - ಶೂದ್ರ ಶ್ರೀನಿವಾಸ್

contributor

Editor - ಶೂದ್ರ ಶ್ರೀನಿವಾಸ್

contributor

Similar News

ಜಗದಗಲ
ಜಗ ದಗಲ