27 ರನ್ ಗಳಿಸಿದರೆ ರೋಹಿತ್ ಶರ್ಮಾರಿಂದ ವಿಶ್ವಕಪ್ ನಲ್ಲಿ ಅತೀ ದೊಡ್ಡ ದಾಖಲೆ!

Update: 2019-07-08 17:11 GMT

ಲಂಡನ್, ಜು.8: ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಗಳಿಸಿದ್ದ ಗರಿಷ್ಠ ರನ್(673) ದಾಖಲೆಯನ್ನು ಮುರಿಯಲು ಇನ್ನು 27 ರನ್‌ಗಳ ಆವಶ್ಯಕತೆ ಇದೆ.

  ಮಂಗಳವಾರ ನ್ಯೂಝಿಲ್ಯಾಂಡ್ ವಿರುದ್ಧದ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ತನ್ನ ಹೆಸರಿನಲ್ಲಿ ಹೊಸ ದಾಖಲೆ ಬರೆಯುವುದನ್ನು ನಿರೀಕ್ಷಿಸಲಾಗಿದೆ. ರೋಹಿತ್ ಶರ್ಮಾ ಈ ಬಾರಿ ವಿಶ್ವಕಪ್‌ನ 8 ಪಂದ್ಯಗಳಲ್ಲಿ 5 ಶತಕ, 1 ಅರ್ಧಶತಕಗಳನ್ನು ಒಳಗೊಂಡ 647 ರನ್ ದಾಖಲಿಸಿದ್ದಾರೆ. ಒಂದೇ ವಿಶ್ವಕಪ್‌ನಲ್ಲಿ 5 ಶತಕಗಳನ್ನು ದಾಖಲಿಸಿರುವುದು ವಿಶ್ವಕಪ್‌ನಲ್ಲಿ ಹೊಸ ದಾಖಲೆಯಾಗಿದೆ.

ಸಚಿನ್ ತೆಂಡುಲ್ಕರ್ 2003ರಲ್ಲಿ 11 ಪಂದ್ಯಗಳಲ್ಲಿ 673 ರನ್ ದಾಖಲಿಸಿದ್ದರು. ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್ ಅವರು ಸಚಿನ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಹೇಡನ್ 2007ರ ಆವೃತ್ತಿಯಲ್ಲಿ 10 ಇನಿಂಗ್ಸ್‌ಗಳಲ್ಲಿ 659 ರನ್ ಜಮೆ ಮಾಡಿದ್ದಾರೆ. ಇನ್ನು ರೋಹಿತ್ 13 ರನ್ ಗಳಿಸಿದರೆ ಹೇಡನ್ ದಾಖಲೆ ಪತನಗೊಳ್ಳಲಿದೆ. ವಿಶ್ವಕಪ್‌ನಲ್ಲಿ 7 ಶತಕಗಳನ್ನು ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆಯುವ ಅವಕಾಶ ರೋಹಿತ್ ಶರ್ಮಾ ಅವರಿಗಿದೆ. ಇದೀಗ 6 ಶತಕಗಳನ್ನು ದಾಖಲಿಸಿ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅವರು ಎರಡನೇ ವಿಶ್ವಕಪ್ ಆಡುತ್ತಿದ್ದಾರೆ. ಮೊದಲ ವಿಶ್ವಕಪ್‌ನಲ್ಲಿ ಒಂದು ಶತಕ ಸಿಡಿಸಿದ್ದರು. ಅವರಿಗೆ 1,000 ರನ್ ಪೂರೈಸಲು 23 ರನ್‌ಗಳ ಆವಶ್ಯಕತೆ ಇದೆ. ಅವರು ಇನ್ನೊಂದು ಶತಕ ದಾಖಲಿಸಿದರೆ ವಿಶ್ವಕಪ್‌ನಲ್ಲಿ ಸತತ 4 ಶತಕಗಳನ್ನು ದಾಖಲಿಸಿದ ಶ್ರೀಲಂಕಾದ ಕುಮಾರ ಸಂಗಕ್ಕರ ದಾಖಲೆಯನ್ನು ಸರಿಗಟ್ಟಲು ಸಾಧ್ಯ. ಸಂಗಕ್ಕರ 2015ರ ವಿಶ್ವಕಪ್‌ನಲ್ಲಿ ಸತತ 4 ಶತಕಗಳನ್ನು ದಾಖಲಿಸಿದ್ದರು.

ಏಕದಿನ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿ ಮತ್ತು ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ.

,,,,,,,,,

ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್ ಜಮೆ ಮಾಡಿದ ಬ್ಯಾಟ್ಸ್‌ಮನ್‌ಗಳು

ಆಟಗಾರರು                   ಪಂದ್ಯ       ಇನಿಂಗ್ಸ್‌      ರನ್‌      ಆವೃತ್ತಿ           

ಸಚಿನ್ ತೆಂಡುಲ್ಕರ್           11             11         673       2003

ಎಂ. ಹೇಡನ್                   11            10         659       2007

ರೋಹಿತ್ ಶರ್ಮಾ             08            08         647       2019

ಡಿ.ವಾರ್ನರ್                    09            09         638       2019

 ಶಾಕೀಬ್                       08            08         606       2019

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News