99ನೇ ಗೆಲುವು ದಾಖಲಿಸಿದ ರೋಜರ್ ಫೆಡರರ್

Update: 2019-07-10 03:24 GMT

ಲಂಡನ್, ಜು.9: ಸ್ವಿಸ್ ಆಟಗಾರ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ 17ನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು. ಈ ಮೂಲಕ 28 ವರ್ಷಗಳ ಬಳಿಕ ಅಂತಿಮ-8ರ ಘಟ್ಟ ತಲುಪಿದ ಹಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

8 ಬಾರಿಯ ಚಾಂಪಿಯನ್ ಫೆಡರರ್ ಕೇವಲ 74 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಮಟೆಯೊ ಬೆರ್ರೆಟ್ಟಿನಿ ಅವರನ್ನು 6-1, 6-2, 6-2 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ 99ನೇ ಗೆಲುವು ದಾಖಲಿಸಿದರು. ಫೆಡರರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 55ನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

37ರ ಹರೆಯದ ಫೆಡರರ್ 1991ರ ಬಳಿಕ ಅಂತಿಮ-8ರ ಘಟ್ಟ ತಲುಪಿದ ಮೊದಲ ಹಿರಿಯ ಆಟಗಾರ ಎನಿಸಿಕೊಂಡರು. 1991ರಲ್ಲಿ ಯುಎಸ್ ಓಪನ್‌ನಲ್ಲಿ 39ರ ವಯಸ್ಸಿನಲ್ಲಿ ಜಿಮ್ಮಿ ಕೊನರ್ಸ್ ಈ ಸಾಧನೆ ಮಾಡಿದ್ದರು. ಕೇವಲ ಐದು ಬಾರಿ ಅನಗತ್ಯ ತಪ್ಪೆಸಗಿರುವ ಫೆಡರರ್ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಜಪಾನ್‌ನ ಕೀ ನಿಶಿಕೊರಿ ಅಥವಾ ಕಝಕ್‌ಸ್ತಾನದ ಮಿಖೈಲ್ ಕುಕುಶ್‌ಕಿನ್‌ರನ್ನು ಎದುರಿಸಲಿದ್ದಾರೆ.

ನಿಶಿಕೊರಿ ಕ್ವಾರ್ಟರ್ ಪೈನಲ್‌ಗೆ

ಜಪಾನ್‌ನ 8ನೇ ಶ್ರೇಯಾಂಕದ ಕೀ ನಿಶಿಕೊರಿ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ರೋಜರ್ ಫೆಡರರ್‌ರನ್ನು ಎದುರಿಸಲಿದ್ದಾರೆ. ನಿಶಿಕೊರಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕಝಕ್‌ಸ್ತಾನದ ಮಿಖೈಲ್ ಕುಕುಶ್‌ಕಿನ್‌ರನ್ನು 6-3, 3-6, 6-3, 6-4 ಸೆಟ್‌ಗಳಿಂದ ಮಣಿಸಿದರು. ಸತತ ಎರಡನೇ ಬಾರಿ ವಿಂಬಲ್ಡನ್‌ನಲ್ಲಿ ಅಂತಿಮ-8ರ ಘಟ್ಟ ತಲುಪಿದರು.

ಜಪಾನ್‌ನ 29ರ ಹರೆಯದ ಸ್ಟಾರ್ ಆಟಗಾರ ನಿಶಿಕೊರಿ ಅವರು ಫೆಡರರ್ ವಿರುದ್ಧ ವೃತ್ತಿಜೀವನದಲ್ಲಿ 3-7 ಹೆಡ್-ಟು-ಹೆಡ್ ದಾಖಲೆ ಕಾಯ್ದುಕೊಂಡಿದ್ದಾರೆ. ಕಳೆದ ಋತುವಿನಲ್ಲಿ ಲಂಡನ್‌ನಲ್ಲಿ ನಡೆದ ಎಟಿಪಿ ಫೈನಲ್ಸ್‌ನಲ್ಲಿ ಫೆಡರರ್‌ಗೆ ಸೋಲುಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News