ವಿಶ್ವಕಪ್ ಕ್ರಿಕೆಟ್: ಭಾರತ ಎಡವಿದ್ದೆಲ್ಲಿ ?

Update: 2019-07-11 04:04 GMT

ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಭಾರತ ಎಡವಿದ್ದೆಲ್ಲಿ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿದ್ದು, ಮಾಜಿ ನಾಯಕ ಎಂ.ಎಸ್. ಧೋನಿಯನ್ನು ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಸಿದ್ದು "ತಂತ್ರಗಾರಿಕೆಯ ಪ್ರಮಾದ" ಎಂದು ಮಾಜಿ ಕ್ರಿಕೆಟ್ ತಾರೆಗಳಾದ ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಐದು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಸಂಕಷ್ಟದ ಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಬಳಿಕ 24 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್‌ಗೆ ಇಳಿಸಲಾಗಿತ್ತು. ಅಂತಿಮವಾಗಿ ಗುರಿ ತಲುಪುವುದು ಕಷ್ಟಕರವಾಗಿ 18 ರನ್‌ಗಳ ಅಂತರದಿಂದ ಸೋಲು ಕಾಣಬೇಕಾಯಿತು.

"ಧೋನಿಯನ್ನು ಪಾಂಡ್ಯಗಿಂತ ಮೊದಲು ಕಳುಹಿಸಬೇಕಿತ್ತು. ಇದು ತಂತ್ರಗಾರಿಕೆಯ ಪ್ರಮಾದ. ಧೋನಿ ದಿನೇಶ್ ಕಾರ್ತಿಕ್ ಅವರಿಗಿಂತಲೂ ಮುನ್ನ ಬರಬೇಕಿತ್ತು. ಧೋನಿ ಕ್ರೀಸ್‌ಗೆ ಆಗಮಿಸಲು ಸಿದ್ಧತೆ ನಡೆದಿತ್ತು. 2011ರ ಫೈನಲ್‌ನಲ್ಲಿ ಕೂಡಾ ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಯುವರಾಜ್‌ಗಿಂತ ಮುನ್ನ ಕ್ರೀಸ್‌ಗೆ ಆಗಮಿಸಿ, ಭಾರತ ಕಪ್ ಗೆದ್ದಿತ್ತು" ಎಂದು ಲಕ್ಷ್ಮಣ್ ನೆನಪಿಸಿದ್ದಾರೆ.

ಧೋನಿಯ ಬ್ಯಾಟಿಂಗ್ ಮಾತ್ರವಲ್ಲದೇ ಅವರ ಸಮಚಿತ್ತದ ಸ್ಥಿತಿ ಕ್ರೀಸ್‌ನ ಮತ್ತೊಂದೆಡೆ ಇರುವ ಯುವ ಆಟಗಾರರ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಗಂಗೂಲಿ ಪ್ರತಿಪಾದಿಸಿದ್ದಾರೆ. ಋಷಭ್ ಪಂತ್ ಆಟದ ಲಯ ಕಂಡುಕೊಂಡಿದ್ದರು; ಆದರೆ ಸ್ಪಿನ್ನರ್ ಮಿಚೆಲ್ ಸ್ಯಾಂಟರ್ ಅವರನ್ನು ದಂಡಿಸುವ ಭರದಲ್ಲಿ ವಿಕೆಟ್ ಒಪ್ಪಿಸಿದರು. "ಈ ಹಂತದಲ್ಲಿ ಭಾರತಕ್ಕೆ ಅನುಭವಿಗಳು ಬೇಕಿತ್ತು. ಪಂತ್ ಬ್ಯಾಟಿಂಗ್ ಮಾಡುವಾಗ ಧೋನಿ ಇದ್ದಿದ್ದರೆ, ಪಂತ್ ಅಂಥ ಹೊಡೆತಕ್ಕೆ ಕೈಹಾಕಲು ಅವಕಾಶ ನೀಡುತ್ತಿರಲಿಲ್ಲ" ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News