​ಅಮೇಥಿ ನಂಟು ಬಿಡದ ರಾಹುಲ್ ಗಾಂಧಿ

Update: 2019-07-11 04:10 GMT

ಅಮೇಥಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್‌ ಗಾಂಧಿ ಅಮೇಥಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರೂ, ನೆಹರೂ- ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿದ್ದ ಅಮೇಥಿಗೆ ಭೇಟಿ ನೀಡುವುದನ್ನು ನಿಲ್ಲಿಸಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ರಾಹುಲ್ ಕಾರ್ಯಕರ್ತರ ಜತೆ ಸಂವಾದ ನಡೆಸಿದರು. ವಯನಾಡ್ ಸಂಸದನಾಗಿದ್ದೂ, ಅಮೇಥಿಯಲ್ಲಿ ದಿನದ 24 ಗಂಟೆಯೂ ಲಭ್ಯ ಇರುತ್ತೇನೆ ಎಂದು ರಾಹುಲ್ ಹೇಳಿದರು.

"ಜನ ನನ್ನನ್ನು ವಯನಾಡ್ ಸಂಸದ ಎಂದು ಕರೆಯುತ್ತಾರೆ; ಆದರೆ ಅಮೇಥಿ ಸದಾ ನನ್ನ ಹೃದಯದಲ್ಲಿದೆ. ನನ್ನ ಕುಟುಂಬ ಹಾಗೂ ನಾನು 24 ಗಂಟೆಗೂ ನಿಮಗೆ ಇಲ್ಲಿ ಸಿಗುತ್ತೇವೆ. ಅಗತ್ಯ ಬಿದ್ದರೆ ಮುಂಜಾನೆ 4ಕ್ಕೂ ನಿಮಗೆ ಸಿಗುತ್ತೇನೆ" ಎಂದು ರಾಹುಲ್ ಭಾವುಕರಾಗಿ ನುಡಿದರು.

ಅಮೇಥಿ ಸೋಲಿನ ಹೊಣೆಯನ್ನು ಎಲ್ಲರೂ ಸಂಘಟಿತರಾಗಿ ಹೊರಬೇಕು ಎಂದು ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಹೇಳಿದರು. "ಕಾರ್ಯಕರ್ತರು ರಾಹುಲ್ ಎದುರು ತಮ್ಮ ಹೃದಯದಿಂದ ಮಾತನಾಡಿದ್ದಾರೆ. ಪಕ್ಷದ ಕಳಪೆ ಪ್ರದರ್ಶನಕ್ಕೆ ತಮ್ಮನ್ನೇ ದೂಷಿಸಿಕೊಂಡಿದ್ದಾರೆ. ಆದ್ದರಿಂದ ಒಬ್ಬರು ಅಥವಾ ಇಬ್ಬರನ್ನು ಈ ಸೋಲಿಗೆ ಹೊಣೆ ಮಾಡುವುದಲ್ಲ ಎಂದು ರಾಹುಲ್ ಸ್ಪಷ್ಟವಾಗಿ ಹೇಳಿದರು.

ಫಲಿತಾಂಶದ ಹೊಣೆಯನ್ನು ಎಲ್ಲರೂ ಹೊರಬೇಕು ಎನ್ನುವುದು ಅವರ ಅಭಿಪ್ರಾಯ" ಎಂದು ಅಮೇಥಿಯಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ದೀಪಕ್ ಸಿಂಗ್ ವಿವರಿಸಿದರು.

ಭದ್ರಕೋಟೆಯಲ್ಲಿ ಸೋಲಿನ ಆತ್ಮಾವಲೋಕನಕ್ಕಾಗಿ ಆಗಮಿಸಿದ ಅವರು, ಸ್ಮೃತಿ ಇರಾನಿಗೆ ಮತ ಹಾಕಿದ್ದಕ್ಕೆ ಬೇಸರವಿಲ್ಲ; ಆದರೆ ಕ್ಷೇತ್ರದ ಕಾರ್ಯಕರ್ತರು ಜನರ ಜತೆಗಿನ ಸಂಬಂಧವನ್ನು ಬಲಪಡಿಸಿಕೊಳ್ಳಲು ಕಠಿಣ ಪರಿಶ್ರಮ ಹಾಕಬೇಕು ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News