ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸುವ ದೇಶಗಳು ‘ರಾಜತಾಂತ್ರಿಕ ಬೆಲೆ’ ತೆರಬೇಕು

Update: 2019-07-11 17:34 GMT

ಲಂಡನ್, ಜು. 11: ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸುವ ದೇಶಗಳು ‘ರಾಜತಾಂತ್ರಿಕ ಬೆಲೆ’ಯನ್ನು ಕೊಡಬೇಕು ಎಂದು ಬ್ರಿಟಿಶ್ ವಿದೇಶ ಕಾರ್ಯದರ್ಶಿ ಜೆರೆಮಿ ಹಂಟ್ ಹೇಳಿದ್ದಾರೆ. ಅದೇ ವೇಳೆ, ಉದಾರವಾದಿ ಪ್ರಜಾಸತ್ತೆಗಳೂ ‘ತಾವು ಉಪದೇಶ ಮಾಡುವುದನ್ನು ಪಾಲಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಬುಧವಾರ ನಡೆದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ, ಚೀನಾ ಮತ್ತು ವಿಯೆಟ್ನಾಮ್‌ಗಳಲ್ಲಿ ಮಾನವಹಕ್ಕುಗಳ ಕಾರ್ಯಕರ್ತರನ್ನು ಜೈಲಿಗೆ ಹಾಕುತ್ತಿರುವುದು ಮತ್ತು ಮೆಕ್ಸಿಕೊದಲ್ಲಿ ನಡೆಯುತ್ತಿರುವ ಪತ್ರಕರ್ತರ ಕೊಲೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

 ‘‘ನಾವು ಜೊತೆಯಾಗಿ ಕೆಲಸ ಮಾಡಿದರೆ, ದೌರ್ಜನ್ಯಗಳ ವಿರುದ್ಧ ಹೋರಾಡಬಹುದಾಗಿದೆ ಹಾಗೂ ಪತ್ರಕರ್ತರಿಗೆ ಹಾನಿ ಮಾಡುವ ಹಾಗೂ ತಮ್ಮ ಕೆಲಸ ಮಾಡಿರುವುದಕ್ಕಾಗಿ ಅವರನ್ನು ಜೈಲಿಗೆ ಹಾಕುವವರ ವಿರುದ್ಧ ಯಶಸ್ವಿಯಾಗಬಹುದಾಗಿದೆ’’ ಎಂದರು.

ಬ್ರಿಟನ್ ಕೆನಡದ ಜೊತೆ ಜಂಟಿಯಾಗಿ ಲಂಡನ್ ಸಮ್ಮೇಳನವನ್ನು ಏರ್ಪಡಿಸಿದೆ. ಇದರಲ್ಲಿ ಸುಮಾರು 100 ದೇಶಗಳ 60 ಸಚಿವರು, ಸುಮಾರು 1,500 ಪತ್ರಕರ್ತರು, ಹೋರಾಟಗಾರರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಿದ್ದಾರೆ.

ಮಾಧ್ಯಮಗಳ ಮೇಲಿನ ದಾಳಿ: ಟ್ರಂಪ್‌ಗೆ ಅಮಲ್ ಕ್ಲೂನಿ ಖಂಡನೆ

ಇದೇ ಸಮಾವೇಶದಲ್ಲಿ ಮಾತನಾಡಿದ ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ವಕೀಲೆ ಅಮಲ್ ಕ್ಲೂನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಕರ್ತರ ಬಗ್ಗೆ ನೀಡುವ ಅತಿರಂಜಿತ ಹೇಳಿಕೆಗಳು ಜಗತ್ತಿನಾದ್ಯಂತ ಪತ್ರಕರ್ತರನ್ನು ಅಪಾಯಕ್ಕೆ ಗುರಿಮಾಡಿವೆ ಎಂದು ಅಭಿಪ್ರಾಯಪಟ್ಟರು.

ಅಮಲ್ ಕ್ಲೂನಿಯನ್ನು ಬ್ರಿಟಿಶ್ ವಿದೇಶ ಸಚಿವ ಜೆರೆಮಿ ಹಂಟ್ ‘ಮಾಧ್ಯಮ ಸ್ವಾತಂತ್ರದ ವಿಶೇಷ ರಾಯಭಾರಿ’ಯಾಗಿ ನೇಮಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಇಂದು ಜೇಮ್ಸ್ ಮ್ಯಾಡಿಸನ್ (1809ರಿಂದ 1817ರವರೆಗೆ ಅಧಿಕಾರದಲ್ಲಿದ್ದ ಅಮೆರಿಕದ ನಾಲ್ಕನೇ ಅಧ್ಯಕ್ಷ ಹಾಗೂ ರಾಜತಾಂತ್ರಿಕ ಮುತ್ಸದ್ದಿ)ರ ದೇಶದಲ್ಲಿ ಮಾಧ್ಯಮಗಳನ್ನು ಬಲಿಪಶುಮಾಡುವ ಹಾಗೂ ಜಗತ್ತಿನಾದ್ಯಂತ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಪತ್ರಕರ್ತರನ್ನು ಅಪಾಯಕ್ಕೆ ಗುರಿಪಡಿಸುವ ನಾಯಕ ಇದ್ದಾರೆ’’ ಎಂದು ಕ್ಲೂನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News