ಬ್ರಿಟಿಶ್ ತೈಲ ಟ್ಯಾಂಕರನ್ನು ವಶಪಡಿಸಲು ಇರಾನ್ ಯತ್ನ: ಅಮೆರಿಕ ಆರೋಪ

Update: 2019-07-11 17:57 GMT

ವಾಶಿಂಗ್ಟನ್, ಜು. 11: ಇರಾನ್‌ನ ರೆವಲೂಶನರಿ ಗಾರ್ಡ್ಸ್‌ಗೆ ಸೇರಿದ್ದೆನ್ನಲಾದ ಐದು ದೋಣಿಗಳು ಬುಧವಾರ ಕೊಲ್ಲಿಯಲ್ಲಿ ಬ್ರಿಟಿಶ್ ತೈಲ ಟ್ಯಾಂಕರೊಂದರ ಸಮೀಪ ಬಂದು, ಸಮೀಪದಲ್ಲೇ ಇರುವ ಇರಾನ್ ಜಲಪ್ರದೇಶದಲ್ಲಿ ನಿಲ್ಲುವಂತೆ ಸೂಚಿಸಿದವು. ಆದರೆ, ಬ್ರಿಟಿಶ್ ಯುದ್ಧ ನೌಕೆಯೊಂದು ಎಚ್ಚರಿಕೆ ನೀಡಿದ ಬಳಿಕ ಅವುಗಳು ಹಿಂದೆ ಸರಿದವು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಸಿರಿಯಕ್ಕೆ ತೈಲ ಸಾಗಿಸುವ ಮೂಲಕ ದಿಗ್ಬಂಧನಗಳನ್ನು ಉಲ್ಲಂಘಿಸಿದ ಸಂಶಯದಲ್ಲಿ ಬ್ರಿಟಿಶ್ ರಾಯಲ್ ಮರೀನ್ ಹಡಗೊಂದು ಜಿಬ್ರಾಲ್ಟರ್ ಕರಾವಳಿಯಲ್ಲಿ ಇರಾನ್‌ನ ತೈಲ ಟ್ಯಾಂಕರೊಂದನ್ನು ವಶಪಡಿಸಿಕೊಂಡ ಒಂದು ವಾರದ ಬಳಿಕ ಈ ಘಟನೆ ನಡೆದಿದೆ.

ಇರಾನ್ ವಿರುದ್ಧದ ಆರ್ಥಿಕ ದಿಗ್ಬಂಧನಗಳನ್ನು ತೀವ್ರಗೊಳಿಸಿ, ಅದರ ತೈಲ ರಫ್ತನ್ನು ಶೂನ್ಯಕ್ಕೆ ಇಳಿಸಲು ಅಮೆರಿಕ ಕ್ರಮ ತೆಗೆದುಕೊಂಡ ಬಳಿಕ, ಅಮೆರಿಕ ಮತ್ತು ಇರಾನ್‌ಗಳ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ.

ಇರಾನ್ ದಕ್ಷಿಣ ಕರಾವಳಿಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಹಲವಾರು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿವೆ. ಇದಕ್ಕೆ ಅಮೆರಿಕವು ಇರಾನನ್ನು ದೂಷಿಸಿದೆ. ಆದರೆ, ತಾನು ಅದನ್ನು ಮಾಡಿಲ್ಲ ಎಂಬುದಾಗಿ ಇರಾನ್ ಹೇಳಿದೆ.

ಬುಧವಾರ ಬ್ರಿಟನ್ ತೈಲ ಟ್ಯಾಂಕರ್ ‘ಬ್ರಿಟಿಶ್ ಹ್ಯಾರಿಟೇಜ್’ ಹೋರ್ಮುಝ್ ಜಲಸಂಧಿಯ ಉತ್ತರದ ಪ್ರವೇಶ ದ್ವಾರದಲ್ಲಿದ್ದಾಗ ಇರಾನ್‌ನ ದೋಣಿಗಳು ಅದನ್ನು ಸುತ್ತುವರಿದವು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

‘‘ಆಗ ಅಲ್ಲಿಯೇ ಇದ್ದ ಬ್ರಿಟಿಶ್ ರಾಯಲ್ ನೌಕಾಪಡೆಯ ಎಚ್‌ಎಂಎಸ್ ಮಾಂಟ್ರೋಸ್ ಹಡಗು ಇರಾನ್‌ನ ದೋಣಿಗಳತ್ತ ಬಂದೂಕುಗಳನ್ನು ತಿರುಗಿಸಿ ರೇಡಿಯೊ ಮೂಲಕ ಎಚ್ಚರಿಕೆ ನೀಡಿತು. ಆಗ ಇರಾನ್‌ನ ದೋಣಿಗಳು ಹಿಂದೆ ಸರಿದವು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News