ದಲಿತನಿಗೆ ಮಸೀದಿಯಲ್ಲಿ ಥಳಿಸಲಾಗಿದೆ ಎಂದು ವೈರಲ್ ಆದ ವೀಡಿಯೊ ಸುಳ್ಳು

Update: 2019-07-12 16:20 GMT
ಫೋಟೊ: ದಿ ಪ್ರಿಂಟ್

"ಉತ್ತರ ಪ್ರದೇಶದಲ್ಲಿ ದಲಿತನೊಬ್ಬನನ್ನು ಮಸೀದಿಯೊಳಗೆ ಎಳೆದುಕೊಂಡು ಹೋಗಿ ಹೊಡೆದು ಹೊಡೆದು ಅರ್ಧ ಜೀವ ಮಾಡಿ ಹಾಕಿದ್ದಾರೆ " ಎಂಬ ಒಕ್ಕಣೆಯಿರುವ ವೀಡಿಯೊ ಒಂದನ್ನು ಶೈಲೇಂದ್ರ ಪ್ರತಾಪ್ ಎಂಬ ವ್ಯಕ್ತಿ ಇತ್ತೀಚಿಗೆ ಟ್ವಿಟರ್ ನಲ್ಲಿ ಹಾಕಿದ್ದರು. ತನ್ನನ್ನು 'ರಾಮ ಭಕ್ತ' ಎಂದು ಬಣ್ಣಿಸಿಕೊಂಡಿರುವ ಈ ವ್ಯಕ್ತಿ ಟ್ವೀಟ್ ಮಾಡಿರುವ ಈ ವೀಡಿಯೊ ಭಾರೀ ವೈರಲ್ ಆಗಿತ್ತು.

ಈ ಟ್ವೀಟ್ ನಲ್ಲಿ ಬಲಪಂಥೀಯ ಚಿಂತಕಿ ಮಧು ಕೀಶ್ವರ್ , ಸುದ್ದಿ ನಿರೂಪಕ ರೋಹಿತ್ ಸರ್ದಾನ , ಎಬಿಪಿ ನ್ಯೂಸ್ ಹಾಗು ಝೀ ನ್ಯೂಸ್ ಗಳನ್ನು ಟ್ಯಾಗ್ ಮಾಡಲಾಗಿತ್ತು. ಇದು ಹದಿನೇಳು ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದು, 1900 ರಿಟ್ವೀಟ್ ಆಗಿತ್ತು.

ಇದನ್ನು ರಿಟ್ವೀಟ್ ಮಾಡಿದ್ದ ರಕ್ಷಣಾ ಪರಿಣಿತ ಅಭಿಜಿತ್ ಅಯ್ಯರ್ ಎಂಬವರು " ಇತ್ತೀಚಿಗೆ ದಲಿತರ ಮೇಲೆ ಮುಸ್ಲಿಮರಿಂದ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದು ಯಾಕೆ ಸುದ್ದಿಯಾಗುತ್ತಿಲ್ಲ" ಎಂದು ಪ್ರಶ್ನಿಸಿದ್ದರು.

ಆದರೆ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿರುವ theprint.in ಇದು ಸುಳ್ಳು ಎಂದು ಸಾಬೀತು ಮಾಡಿದೆ. ಇದು ನಿಜವಾಗಿ ಉತ್ತರ ಪ್ರದೇಶದ ಹಾಪುರದಲ್ಲಿ ಒಬ್ಬ ಮದ್ರಸ ಶಿಕ್ಷಕನ ಮೇಲೆ ನಡೆದ ಹಲ್ಲೆ ಪ್ರಕರಣದ ವೀಡಿಯೊ. ಅಲ್ಲಿನ ಮಸೀದಿಯೊಂದಕ್ಕೆ ಬಂದಿದ್ದ ಸಮೀರ್ ಎಂಬ ಈತನನ್ನು ಮೊಬೈಲ್ ಕಳ್ಳತನ ಮಾಡಿದ್ದಾನೆ ಎಂಬ ಆರೋಪದಲ್ಲಿ ಹಿಡಿದು ಥಳಿಸಿದ್ದಾರೆ.

ಈ ಬಗ್ಗೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News