ಭಾರತದಲ್ಲಿ 10 ವರ್ಷಗಳಲ್ಲಿ 271 ಮಿಲಿಯ ಮಂದಿ ಬಡತನ ಮುಕ್ತ: ವಿಶ್ವಸಂಸ್ಥೆ ವರದಿ

Update: 2019-07-12 17:34 GMT

ವಿಶ್ವಸಂಸ್ಥೆ, ಜು.12: ಭಾರತವು ಬಹು ಆಯಾಮದ ಬಡತನವನ್ನು ಅತ್ಯಂತ ತ್ವರಿತ ಗತಿಯಲ್ಲಿ ಕಡಿಮೆಗೊಳಿಸಿದ ಆಯ್ದ 10 ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದು, 2006ರಿಂದ 2016ರ ಅವಧಿಯಲ್ಲಿ 271 ಮಿಲಿಯನ್ ಜನತೆ ಬಡತನದಿಂದ ಮುಕ್ತವಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ವರದಿ ತಿಳಿಸಿದೆ.

 ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟಕ್ಕೆ ಸಂಬಂಧಿಸಿದ 10 ಸೂಚ್ಯಂಕಗಳನ್ನು ಆಧರಿಸಿ ವಿಶ್ವಸಂಸ್ಥೆಯ ಬಹುಆಯಾಮದ ಬಡತನ ಸೂಚ್ಯಾಂಕ ವರದಿ ಸಿದ್ಧಗೊಳಿಸಲಾಗಿದೆ. (ಪೋಷಣೆ, ನೈರ್ಮಲ್ಯೀಕರಣ, ಮಕ್ಕಳ ಮರಣ ಪ್ರಮಾಣ, ಕುಡಿಯುವ ನೀರು, ಶಾಲೆಯಲ್ಲಿ ಅಧ್ಯಯನ ನಡೆಸುವ ವರ್ಷಗಳು, ವಿದ್ಯುದೀಕರಣ, ಶಾಲೆಯಲ್ಲಿ ಹಾಜರಾತಿ, ವಸತಿ ಸೌಕರ್ಯ, ಅಡುಗೆ ಇಂಧನ ಮತ್ತು ಆಸ್ತಿ ). ಪ್ರತಿಯೊಂದು ಅಭಿವೃದ್ಧಿಶೀಲ ರಾಷ್ಟ್ರದ ಮಧ್ಯಮ ವರ್ಗ ಹಾಗೂ ಕಡಿಮೆ ಆದಾಯದ ವರ್ಗವನ್ನು ವರದಿಯಲ್ಲಿ ಪ್ರತ್ಯೇಕವಾಗಿ ಅವಲೋಕಿಸಲಾಗಿದೆ. ಭಾರತ ಮತ್ತು ಕಾಂಬೋಡಿಯಾ ಬಹುಆಯಾಮದ ಬಡತವನ್ನು ಅತ್ಯಂತ ತ್ವರಿತ ಗತಿಯಲ್ಲಿ ಕಡಿಮೆಗೊಳಿಸಿದ ದೇಶಗಳಾಗಿವೆ ಎಂದು ವರದಿ ತಿಳಿಸಿದೆ.

101 ದೇಶಗಳ 1.3 ಬಿಲಿಯನ್ ಜನತೆ ಅಥವಾ ಈ ರಾಷ್ಟ್ರಗಳ ಜನಸಂಖ್ಯೆಯ 23.1% ಜನ ಬಹುಆಯಾಮದ ಬಡತನದಲ್ಲಿದ್ದಾರೆ. ಇವರಲ್ಲಿ ಅರ್ಧಾಂಶದಷ್ಟು ಜನ 18 ವರ್ಷಕ್ಕಿಂತ ಕೆಳಗಿನವರು, ಮೂರನೇ ಒಂದಂಶದಷ್ಟು ಜನ 10 ವರ್ಷಕ್ಕಿಂತ ಕೆಳಹರೆಯದವರು. ಇವರಲ್ಲಿ ಸುಮಾರು ಶೇ.84.5ರಷ್ಟು ಜನ ಆಫ್ರಿಕಾದ ಸಹಾರಾ ಉಪಖಂಡ ಹಾಗೂ ದಕ್ಷಿಣ ಏಶ್ಯಾದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. 101 ರಾಷ್ಟ್ರಗಳಲ್ಲಿ 31 ಕಡಿಮೆ ಆದಾಯದ, 68 ಮಧ್ಯಮ ಆದಾಯದ ಹಾಗೂ 2 ಅಧಿಕ ಆದಾಯದ ದೇಶಗಳಾಗಿದ್ದು ಇದರಲ್ಲಿ ಒಟ್ಟು 1.3 ಬಿಲಿಯನ್ ಜನರು ಬಹುಆಯಾಮದ ಬಡವರಾಗಿದ್ದಾರೆ. ಇದರರ್ಥ ಬಡತವನ್ನು ಆದಾಯದ ಆಧಾರದಲ್ಲಿ ಮಾತ್ರವಲ್ಲ, ಕೆಟ್ಟ ಆರೋಗ್ಯ, ಕೆಲಸ ಮಾಡುವ ಸ್ಥಳದ ಕಳಪೆ ಗುಣಮಟ್ಟ, ಹಿಂಸೆಯ ಬೆದರಿಕೆ- ಇತ್ಯಾದಿಗಳ ಆಧಾರದಲ್ಲೂ ನಿರ್ಧರಿಸಲಾಗುತ್ತದೆ ಎಂದು ವರದಿ ತಿಳಿಸಿದೆ.

ಈ 10 ರಾಷ್ಟ್ರಗಳಲ್ಲಿ ಒಟ್ಟು 270 ಮಿಲಿಯ ಜನ ಬಡತನದಿಂದ ಮುಕ್ತರಾಗಿದ್ದಾರೆ. ಕಳೆದ ವರ್ಷದ ವರದಿಯಲ್ಲಿ ಭಾರತದ ಬಡತನ ದರ 2006ರಿಂದ 2016ರ ಅವಧಿಯಲ್ಲಿ ಸುಮಾರು ಅರ್ಧಾಂಶದಷ್ಟು ಕಡಿಮೆಯಾಗಿದೆ ಎಂದು ತಿಳಿಸಿತ್ತು. ಭಾರತವು ಎಲ್ಲಾ 10 ಸೂಚಕಗಳಲ್ಲೂ ಅದರಲ್ಲೂ ಪ್ರಮುಖವಾಗಿ ಆಸ್ತಿ, ಅಡುಗೆ ಇಂಧನ, ನೈರ್ಮಲ್ಯೀಕರಣ, ಪೋಷಣೆಯಲ್ಲಿ ಅಂತರವನ್ನು ಕಡಿಮೆಗೊಳಿಸಿದೆ.

ಅಲ್ಲದೆ 10 ರಾಷ್ಟ್ರಗಳಲ್ಲಿ ಭಾರತ, ಬಾಂಗ್ಲಾದೇಶ, ಕಾಂಬೋಡಿಯಾ, ಹೈಟಿ ಮತ್ತು ಪೆರುವಿನಲ್ಲಿ ಮಕ್ಕಳ ಬಡತನ ವಯಸ್ಕರ ಬಡತನಕ್ಕಿಂತ ತ್ವರಿತವಾಗಿ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ಕಾಂಗೊ ಗಣರಾಜ್ಯ, ಇಥಿಯೋಪಿಯ, ನೈಜೀರಿಯ, ಪಾಕಿಸ್ತಾನ ಮತ್ತು ವಿಯೆಟ್ನಾಮ್ ಈ ಪಟ್ಟಿಯಲ್ಲಿರುವ ಇತರ ದೇಶಗಳಾಗಿವೆ. ಎಲ್ಲಾ 10 ದೇಶಗಳಲ್ಲೂ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತ ಬಡತನದಲ್ಲಿವೆ. ಸುಸ್ಥಿರ ಅಭಿವೃದ್ಧಿ ಗುರಿಗೆ ಅನುಗುಣವಾಗಿ ದೇಶದ ಅತೀ ಬಡಪ್ರದೇಶದಲ್ಲಿರುವ ಜನರನ್ನು ಬಡತನ ಮುಕ್ತಗೊಳಿಸಲು ಭಾರತ ಕೈಗೊಂಡಿರುವ ಉಪಕ್ರಮಗಳು, ಯಾರೂ ಹಿಂದುಳಿಯಬಾರದು ಎಂಬ ಸಂಕಲ್ಪವನ್ನು ಈಡೇರಿಸುವ ಬದ್ಧತೆಯನ್ನು ಸಾರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಾರ್ಖಂಡ್‌ಗೆ ಅಗ್ರಸ್ಥಾನ

ಈ 10 ರಾಷ್ಟ್ರಗಳ ನಗರಗಳಲ್ಲಿ ಜಾರ್ಖಂಡ್ ಮೊದಲ ಸ್ಥಾನದಲ್ಲಿದೆ. ಜಾರ್ಖಂಡ್‌ನಲ್ಲಿ ಬಹು ಆಯಾಮದ ಬಡತನ 2006ರಿಂದ 2016ರ ಅವಧಿಯಲ್ಲಿ ಶೇ.74.9ರಿಂದ ಶೇ.46.5ರ ಪ್ರಮಾಣಕ್ಕೆ ಇಳಿದಿದೆ. ಎರಡನೇ ಸ್ಥಾನದಲ್ಲಿರುವ ಕಾಂಬೋಡಿಯಾದ ಮೊಂಡೊಲ್ ಕಿರಿ ಮತ್ತು ರತ್ತನಕ್ ಕಿರಿ ನಗರದಲ್ಲಿ ಬಹುಆಯಾಮದ ಬಡತನ ಪ್ರಮಾಣ 2010ರಿಂದ 2014ರ ಅವಧಿಯಲ್ಲಿ ಶೇ.71ರಿಂದ ಶೇ.55.9ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News