ಚಂದ್ರಯಾನ-2: ಚಂದಿರನ ಕತ್ತಲ ಅಂಗಳದಲ್ಲಿ ಹೆಜ್ಜೆಗಳನ್ನು ಮೂಡಿಸಲು ‘ಇಸ್ರೋ’ ಕ್ಷಣಗಣನೆ

Update: 2019-07-14 17:04 GMT

ಶ್ರೀಹರಿಕೋಟಾ(ಆಂ.ಪ್ರ),ಜು.14: ತನ್ನ ಅಂತರಿಕ್ಷ ಕಾರ್ಯಕ್ರಮದಲ್ಲಿ ದೈತ್ಯಹೆಜ್ಜೆಯನ್ನಿಡಲು ಭಾರತದ ಹೆಮ್ಮೆಯ ಸಂಸ್ಥೆ ‘ಇಸ್ರೋ’ ಸರ್ವಸಜ್ಜಾಗಿದೆ. ಸೋಮವಾರ ನಸುಕಿನಲ್ಲಿ ಚಂದ್ರಯಾನ-2ನ್ನು ಹೊತ್ತುಕೊಂಡು ಇಸ್ರೋದ ಭಾರೀ ಸಾಮರ್ಥ್ಯದ ಜಿಎಸ್‌ಎಲ್‌ವಿ-ಎಮ್‌ಕಿಲ್ ರಾಕೆಟ್ ‘ಬಾಹುಬಲಿ’ಯು ಇಲ್ಲಿಯ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಲಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.

ಚಂದ್ರಯಾನ-2 ಈವರೆಗೂ ಅನ್ವೇಷಣೆಯಾಗಿರದ ಚಂದ್ರನ ಕತ್ತಲ ಸಾಮ್ರಾಜ್ಯವಾದ ದಕ್ಷಿಣ ಧ್ರುವದಲ್ಲಿ ತನ್ನ ‘ವಿಕ್ರಮ್’ ಲ್ಯಾಂಡರ್ ಮತ್ತು ಚಂದ್ರ ಅನ್ವೇಷಣಾ ವಾಹನ ‘ಪ್ರಜ್ಞಾನ್’ ರೋವರ್ ಅನ್ನು  ‘ವಿಕ್ರಮ’ನನ್ನು ಯಶಸ್ವಿಯಾಗಿ ಇಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಸಾಗಲಿದೆ.

3,850 ಕೆ.ಜಿ.ತೂಕ ಹೊಂದಿರುವ,ಆರ್ಬಿಟರ್ ಅಥವಾ ಕಕ್ಷೆಗಾಮಿ,ಲ್ಯಾಂಡರ್ ಮತ್ತು ರೋವರ್‌ನ್ನು ಒಳಗೊಂಡಿರುವ ಬಾಹ್ಯಾಕಾಶ ನೌಕೆಯು ಸೋಮವಾರ ನಸುಕಿನ 2.51ಕ್ಕೆ ಇಲ್ಲಿಯ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳುತ್ತಿದೆ.

ತನ್ನ ಮೊದಲ ಯಶಸ್ವಿ ಚಂದ್ರ ಅಭಿಯಾನ ‘ಚಂದ್ರಯಾನ-1’ರ 11 ವರ್ಷಗಳ ಬಳಿಕ ಇಸ್ರೋ ಸಜ್ಜಾಗಿರುವ 987 ಕೋ.ರೂ. ವೆಚ್ಚದ ಚಂದ್ರಯಾನ-2 ಹಲವಾರು ನಿರೀಕ್ಷೆಗಳನ್ನು ಗರಿಗೆದರಿಸಿದೆ. ಸೂಕ್ಷ್ಮವಾಗಿ ಯೋಜಿತ ಕಕ್ಷೀಯ ಯೋಜನೆಗಳ ಮೂಲಕ ಚಂದ್ರನ ಮೇಲೆ ತನ್ನ ಹೆಜ್ಜೆಗಳನ್ನೂರುವ ತನ್ನ ಕರ್ತವ್ಯವನ್ನು ಪೂರ್ಣಗೊಳಿಸಲು 54 ದಿನಗಳ ಕಾಲಾವಕಾಶವನ್ನು ಈ ಯಾನವು ತೆಗೆದುಕೊಳ್ಳಲಿದೆ.

ಕಳೆದ ವಾರ ಪೂರ್ಣ ಪ್ರಮಾಣದ ತಾಲೀಮಿನ ಬಳಿಕ ರವಿವಾರ ಬೆಳಿಗ್ಗೆ 6:51ಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ವಿಜ್ಞಾನಿಗಳು ರಾಕೆಟ್‌ಗೆ ಇಂಧನ ತುಂಬುವ ಕಾರ್ಯದಲ್ಲಿ ವ್ಯಸ್ತರಾಗಿದ್ದರು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದರು.

ಇಸ್ರೋ ಸ್ಥಾಪನೆಯಾದಾಗಿನಿಂದ ಅದರ ಅತ್ಯಂತ ಸಂಕೀರ್ಣ ಮತ್ತು ಪ್ರತಿಷ್ಠಿತ ಅಭಿಯಾನವೆಂದು ಬಣ್ಣಿಸಲಾಗಿರುವ ಚಂದ್ರಯಾನ-2 ಭಾರತವನ್ನು ಚಂದ್ರನ ಮೇಲ್ಮೈನ ಮೇಲೆ ಸಾಫ್ಟ್ ಲ್ಯಾಂಡ್ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿಸಲಿದೆ. ರಷ್ಯಾ,ಅಮೆರಿಕ ಮತ್ತು ಚೀನಾ ಈ ಸಾಧನೆಯನ್ನು ಮಾಡಿರುವ ವಿಶ್ವದ ಇತರ ಮೂರು ಅಗ್ರ ರಾಷ್ಟ್ರಗಳಾಗಿವೆ.

ಚಂದ್ರಯಾನ-2ರ ಕಕ್ಷೆಗಾಮಿಯಿಂದ ಬೇರ್ಪಟ್ಟ ಬಳಿಕ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲೆ ಇಳಿಯಲು ಅಗತ್ಯವಿರುವ 15 ನಿಮಿಷಗಳ ಅವಧಿಯು ತಮ್ಮ ಪಾಲಿಗೆ ಅತ್ಯಂತ ಆತಂಕಕಾರಿಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದರು.

ಅಭಿಯಾನದ ಯಶಸ್ಸಿಗಾಗಿ ಶನಿವಾರ ತಿರುಮಲದ ಶ್ರೀವೆಂಕಟೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿರುವ ಶಿವನ್,ನಿಗದಿತ ಸಮಯ(ಜು.15ರ ನಸುಕಿನ 2:51)ಕ್ಕೆ ಚಂದ್ರಯಾನ-2ರ ಉಡಾವಣೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.

ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗೆ ನಾವು ಪ್ರಯತ್ನಿಸುತ್ತಿದ್ದು,ಚಂದ್ರಯಾನ-2 ತಂತ್ರಜ್ಞಾನದಲ್ಲಿ ಮುಂದಿನ ನೆಗೆತವಾಗಿದೆ. ಈ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾಗಿದ್ದು,ನಾವು 15 ನಿಮಿಷಗಳ ಭೀತಿಯನ್ನು ಅನುಭವಿಸಲಿದ್ದೇವೆ ಎಂದು ಶಿವನ್ ನುಡಿದರು.

ಸೆ.6ರಂದು ಲ್ಯಾಂಡರ್ ಮತ್ತು ರೋವರ್‌ಗಳನ್ನು ಚಂದ್ರನ ಮೇಲೆ ಇಳಿಸಲು ಉದ್ದೇಶಿಸಿರುವ ಇಸ್ರೋ,ಯಾವುದೇ ರಾಷ್ಟ್ರವು ಈವರೆಗೆ ಅನ್ವೇಷಿಸಿರದ ಚಂದ್ರನ ದಕ್ಷಿಣ ಧ್ರುವವು ತನ್ನ ಗುರಿಯಾಗಿದೆ. ಚಂದ್ರನ ಕುರಿತು ಇನ್ನಷ್ಟು ತಿಳಿದುಕೊಳ್ಳುವುದು ಅಭಿಯಾನದ ಉದ್ದೇಶವಾಗಿದ್ದು,ಇದು ಭಾರತಕ್ಕೆ ಮತ್ತು ಒಟ್ಟಾರೆಯಾಗಿ ಮಾನವ ಜನಾಂಗಕ್ಕೆ ಲಾಭಕಾರಿಯಾದ ಶೋಧಗಳಿಗೆ ಕಾರಣವಾಗಲಿದೆ ಎಂದಿದೆ.

ಚಂದ್ರಯಾನ-2 ಒಟ್ಟು 13 ಪೇಲೋಡ್‌ಗಳನ್ನು ಹೊಂದಿದ್ದು,ಈ ಪೈಕಿ ಎಂಟು ಕಕ್ಷೆಗಾಮಿಯಲ್ಲಿ,ಮೂರು ಲ್ಯಾಂಡರ್ ‘ವಿಕ್ರಮ್’ನಲ್ಲಿ ಮತ್ತು ಎರಡು ರೋವರ್ ‘ಪ್ರಜ್ಞಾನ್’ನಲ್ಲಿ ಇರುತ್ತವೆ. ಐದು ಪೇ ಲೋಡ್‌ಗಳು ಭಾರತದ್ದಾಗಿದ್ದರೆ,ಮೂರು ಯುರೋಪ್,ಎರಡು ಅಮೆರಿಕ ಮತ್ತು ಒಂದು ಬಲ್ಗೇರಿಯಾಕ್ಕೆ ಸೇರಿವೆ.

ಈ ಪೇಲೋಡ್‌ಗಳಲ್ಲಿ ನಾಸಾದ ‘ಲೇಸರ್ ರೆಟ್ರೋರಿಫ್ಲೆಕ್ಟರ್ ಅರೇ’ ಸೇರಿದ್ದು ಪೃಥ್ವಿಯ ಚಂದ್ರ ವ್ಯವಸ್ಥೆಯ ಚಲನಶಾಸ್ತ್ರವನ್ನು ತಿಳಿದುಕೊಳ್ಳುವ ಉದ್ದೇಶವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News