ಭಾರತದ ಪ್ರಧಾನಿಗಳ ಬಗ್ಗೆ ಮ್ಯೂಝಿಯಂ ನಿರ್ಮಾಣಕ್ಕೆ ಮಾರ್ಚ್, 2020ರ ಗಡುವು

Update: 2019-07-14 17:34 GMT

ಹೊಸದಿಲ್ಲಿ,ಜು.14: ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ(ಎನ್‌ಎಂಎಂಎಲ್)ವನ್ನು ಹೊಂದಿರುವ ಇಲ್ಲಿಯ ತೀನ್ ಮೂರ್ತಿ ಭವನ ಸಂಕೀರ್ಣದಲ್ಲಿ ಭಾರತದ ಪ್ರಧಾನಿಗಳ ಬಗ್ಗೆ ಮ್ಯೂಝಿಯಂ ನಿರ್ಮಾಣಕ್ಕಾಗಿ ಕೇಂದ್ರ ಲೋಕೋಪಯೋಗಿ ಇಲಾಖೆ(ಸಿಪಿಡಬ್ಲುಡಿ)ಯು ಮಾರ್ಚ್ 2020ರ ಗಡುವನ್ನು ನಿಗದಿಗೊಳಿಸಿದೆ.

ಮ್ಯೂಝಿಯಮ್‌ನ್ನು ಸಜ್ಜುಗೊಳಿಸಲು 66 ಕೋ.ರೂ.ವೆಚ್ಚದಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಖಾಸಗಿ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ.

ತೀನ್ ಮೂರ್ತಿ ಭವನವು ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರ ಅಧಿಕೃತ ನಿವಾಸವಾಗಿದ್ದು, ಅವರ ಸ್ಮರಣಾರ್ಥ ಎನ್‌ಎಂಎಂಎಲ್ ಅನ್ನು ಸ್ಥಾಪಿಸಲಾಗಿತ್ತು. ಸ್ವಾಯತ್ತ ಸಂಸ್ಥೆಯಾಗಿರುವ ಇದು ಕೇಂದ್ರ ಸಂಸ್ಕೃತಿ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ.

 ಭಾರತದ ಪ್ರಧಾನಿಗಳ ಕುರಿತು ಮ್ಯೂಝಿಯಂ ನಿರ್ಮಾಣಕ್ಕೆ ಮಾರ್ಚ್ 2020ರ ಗಡುವು ನಿಗದಿಗೊಳಿಸಲಾಗಿದೆ. ಅದು ಪೂರ್ಣಗೊಂಡ ನಂತರ ಮುಂದಿನ ಅಗತ್ಯ ಕಾರ್ಯಗಳಿಗಾಗಿ ಸಂಸ್ಕೃತಿ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸರಕಾರವು ಜುಲೈ 2018ರಲ್ಲಿ ಮ್ಯೂಝಿಯಂ ನಿರ್ಮಾಣವನ್ನು ಪ್ರಕಟಿಸಿದಾಗ ಕಾಂಗ್ರೆಸ್ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಮ್ಯೂಝಿಯಂ ನಿರ್ಮಾಣವು ನೆಹರು ಪರಂಪರೆಯನ್ನು ದುರ್ಬಲಗೊಳಿಸುವ ಪ್ರಯತ್ನವಲ್ಲ ಎಂದು ಆಗಿನ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಭರವಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News