ರಕ್ಷಣಾ ಉತ್ಪನ್ನ ರಫ್ತು ಗುರಿ ಮೀರುವ ನಿರೀಕ್ಷೆ: ಅಜಯ್ ಕುಮಾರ್

Update: 2019-07-14 18:14 GMT

ಕೋಲ್ಕತಾ, ಜು.14: ಇತ್ತೀಚಿನ ದಿನಗಳಲ್ಲಿ ಸಾಗಣೆಯ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ರಕ್ಷಣಾ ಉತ್ಪನ್ನಗಳ ರಫ್ತು 2024-25ರ ವೇಳೆಗೆ 35 ಸಾವಿರ ಕೋಟಿ ರೂ.ಗಳ ಗುರಿಯನ್ನು ಮೀರುವ ನಿರೀಕ್ಷೆಯಿದೆ ಎಂದು ರಕ್ಷಣಾ ಉತ್ಪನ್ನ ವಿಭಾಗದ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು 10,700 ಕೋಟಿ ರೂ. ಆಗಿದ್ದರೆ 2019-20ರಲ್ಲಿ 20 ಸಾವಿರ ಕೋಟಿ ರೂ. ಗುರಿ ಹೊಂದಲಾಗಿದೆ. ಈ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲೇ 5,600 ಕೋಟಿ ರೂ. ಮೊತ್ತದ ರಫ್ತು ದಾಖಲಾಗಿದೆ. 2016-17ರಲ್ಲಿ ಕೇವಲ 1,500 ಕೋಟಿ ರೂ, 2017-18ರಲ್ಲಿ 4,500 ಕೋಟಿ ರೂ.ದಾಖಲಿಸಿದ್ದ ರಫ್ತು ಕಳೆದ ವರ್ಷ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದವರು ಹೇಳಿದ್ದಾರೆ.

ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ಮತ್ತು ಕೋಲ್ಕತಾದ ಭಾರತ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ರಕ್ಷಣಾ ಉತ್ಪಾದನೆಯ ಸೌಲಭ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಖಾಸಗಿ ಕ್ಷೇತ್ರಗಳ ಸಹಭಾಗಿತ್ವಕ್ಕೆ ಉತ್ತೇಜನ ನೀಡಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈಗಿನ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆ ನೀತಿಯಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ರಕ್ಷಣಾ ಉತ್ಪನ್ನಗಳ ರಫ್ತು ಎಂಬುದು ದೊಡ್ಡ ಬಂಡೆಕಲ್ಲು ಇದ್ದಂತೆ. ಅದನ್ನು ತಳ್ಳುವುದು ಸುಲಭವಲ್ಲ, ಆದರೆ ಒಮ್ಮೆ ಅದು ಮುಂದಕ್ಕೆ ಸರಿದರೆ ಬಳಿಕ ನಿಧಾನಕ್ಕೆ ವೇಗ ಪಡೆದುಕೊಳ್ಳುತ್ತದೆ ಎಂದವರು ಹೇಳಿದ್ದಾರೆ.

ಕೆಲವು ಸೂಕ್ಷ್ಮ ವಸ್ತುಗಳನ್ನು ಹೊರತುಪಡಿಸಿ ಉಳಿದ ಸುಮಾರು ಶೇ.90ರಷ್ಟು ಉತ್ಪನ್ನಗಳನ್ನು ಸಾಮರ್ಥ್ಯ ಪರಿಶೀಲನೆಗೆ ಒಳಪಡಿಸದಿರಲು ಯುದ್ಧೋಪಕರಣಗಳ ಕಾರ್ಖಾನೆ ಮಂಡಳಿ ನಿರ್ಧರಿಸಿದೆ. ಅಲ್ಲದೆ ಸುಮಾರು 3 ಸಾವಿರ ವಸ್ತುಗಳ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಲು ನಿರ್ಧರಿಸಲಾಗಿದ್ದು ಇದರಿಂದ ಅತೀ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ದೊರಕಲಿದೆ. ಅಲ್ಲದೆ ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ಸ್ವಯಂ ಆಸಕ್ತಿ ತೋರಿದ ಏಳು ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದು ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News