ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಗೆದ್ದ ಇಂಗ್ಲೆಂಡ್

Update: 2019-07-15 03:17 GMT

 ಲಂಡನ್ , ಜು.14: ಜಗತ್ತಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಆತಿಥೇಯ ಇಂಗ್ಲೆಂಡ್ ತಂಡ ರವಿವಾರ ರೋಚಕವಾಗಿ ನಡೆದ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್‌ನ್ನು ಮಣಿಸಿ ಮೊದಲ ಬಾರಿ ವಿಶ್ವಕಪ್ ಗೆದ್ದುಕೊಂಡಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್‌ನ್ನು ಉತ್ತಮ ಪ್ರದರ್ಶನ( ಗರಿಷ್ಠ ಬೌಂಡರಿ) ಆಧಾರದಲ್ಲಿ ಮಣಿಸಿದ ಇಂಗ್ಲೆಂಡ್ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ವಿಶ್ವಕಪ್ ಪ್ರಶಸ್ತಿ ಜಯಿಸಿದೆ. ಈ ಮೊದಲು ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ, ವಿಶ್ವಕಪ್ ಜಯಿಸಲು ಸಾಧ್ಯವಾಗಿರಲಿಲ್ಲ. ಇದೀಗ ನಾಲ್ಕನೇ ಪ್ರಯತ್ನದಲ್ಲಿ ಇಂಗ್ಲೆಂಡ್ ತನ್ನ ನೆಲದಲ್ಲಿ ವಿಶ್ವಕಪ್ ಜಯಿಸುವ ಮೂಲಕ ತನ್ನ ಕನಸನ್ನು ನನಸಾಗಿಸಿದೆ. ಆದರೆ ನ್ಯೂಝಿಲ್ಯಾಂಡ್ ಸತತ ಎರಡನೇ ಬಾರಿ ಸೋತು ಪ್ರಶಸ್ತಿ ಎತ್ತುವ ಅವಕಾಶ ಕಳೆದು ಕೊಂಡಿತು. ಗೆಲುವಿಗೆ 242 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 241 ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು.

ಇದರೊಂದಿಗೆ ಪಂದ್ಯ ಟೈ ಆಗಿ ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ನಿರ್ಧರಿಸಲಾಯಿತು. ಇಂಗ್ಲೆಂಡ್ ಸೂಪರ್ ಓವರ್‌ನಲ್ಲಿ 15 ರನ್ ಗಳಿಸಿತ್ತು. ಆದರೆ ನ್ಯೂಝಿಲ್ಯಾಂಡ್ 1 ವಿಕೆಟ್ ನಷ್ಟದಲ್ಲಿ 15 ರನ್ ಗಳಿಸುವುದರೊಂದಿಗೆ ಮತ್ತೆ ಸೂಪರ್ ಟೈ ಆಗಿ, ಇಂಗ್ಲೆಂಡ್ ಉತ್ತಮ ಪ್ರದರ್ಶನದ ಆಧಾರದಲ್ಲಿ ಗೆಲುವು ದಾಖಲಿಸಿತು. ಬೆನ್ ಸ್ಟೋಕ್ಸ್ 84: ಬೆನ್ ಸ್ಟೋಕ್ಸ್ ಔಟಾಗದೆ 84 ರನ್ (98ಎ, 5ಬೌ, 2 ಸಿ ) ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ 59 ರನ್(60ಎ, 6ಬೌ) ಗಳಿಸಿದರು. ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲ್ಯಾಂಡ್ ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಪ್ಲಂಕೆಟ್ ದಾಳಿಗೆ ಸಿಲುಕಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 241 ರನ್ ಗಳಿಸಿದೆ.

 ಕಿವೀಸ್ ತಂಡ ಆರಂಭಿಕ ದಾಂಡಿಗ ಹೆನ್ರಿ ನಿಕೋಲ್ಸ್ ಅರ್ಧಶತಕ (55) ಮತ್ತು ವಿಕೆಟ್ ಕೀಪರ್ ಟಾಮ್ ಲಥಾಮ್ 47 ರನ್‌ಗಳ ಸಹಾಯದಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

   ಇನಿಂಗ್ಸ್ ಆರಂಭಿಸಿದ ಗಪ್ಟಿಲ್ ಮತ್ತು ಹೆನ್ರಿ ನಿಕೋಲ್ಸ್ ಮೊದಲ ವಿಕೆಟ್‌ಗೆ 29 ರನ್ ಸೇರಿಸಿದರು. 6.2ನೇ ಓವರ್‌ನಲ್ಲಿ ಆರಂಭಿಕ ದಾಂಡಿಗ ಗಪ್ಟಿಲ್(19) ಅವರನ್ನು ಕ್ರಿಸ್ ವೋಕ್ಸ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

  ಎರಡನೇ ವಿಕೆಟ್‌ಗೆ ನಿಕೋಲ್ಸ್ ಮತ್ತು ನಾಯಕ ಕೇನ್ ವಿಲಿಯಮ್ಸನ್ 74 ರನ್ ಸೇರಿಸಿದರು. ವಿಲಿಯಮ್ಸನ್ 30 ರನ್ ಗಳಿಸಿ ಪ್ಲಂಕೆಟ್‌ಗೆ ವಿಕೆಟ್ ಒಪ್ಪಿಸಿದರು. ಹೆನ್ರಿ ನಿಕೋಲ್ಸ್ ಏಕದಿನ ಕ್ರಿಕೆಟ್‌ನಲ್ಲಿ 9ನೇ ಅರ್ಧಶತಕ ದಾಖಲಿಸಿದರು. ಅವರು 55 ರನ್(77ಎ, 4ಬೌ) ಗಳಿಸಿದ್ದಾಗ ಪ್ಲಂಕೆಟ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ರಾಸ್ ಟೇಲರ್(15) ಮತ್ತು ಜಿಮ್ಮಿ ನಿಶಾಮ್(19) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕಾಲಿನ್ ಗ್ರಾಂಡ್‌ಹೋಮ್ 28 ಎಸೆತಗಳನ್ನು ಎದುರಿಸಿದರೂ 16 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಲಥಾಮ್ ಮತ್ತು ಗ್ರಾಂಡ್‌ಹೋಮ್ ಜೊತೆಯಾಟದದಲ್ಲಿ ತಂಡದ ಸ್ಕೋರ್ 200ರ ಗಡಿ ದಾಟಿತು. ಲಥಾಮ್ 48.3ನೇ ಓವರ್‌ನಲ್ಲಿ ವೋಕ್ಸ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿದರು. ಲಥಾಮ್ 3 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ 37ಕ್ಕೆ 3 ವಿಕೆಟ್, ಲಿಯಾಮ್ ಪ್ಲಂಕೆಟ್ 42ಕ್ಕೆ 3 ವಿಕೆಟ್, ಜೋಫ್ರಾ ಆರ್ಚರ್ ಮತ್ತು ಮಾರ್ಕ್‌ವುಡ್ ತಲಾ 1 ವಿಕೆಟ್ ಪಡೆದರು.

►ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್ 

►ಸರಣಿಶ್ರೇಷ್ಠ : ವಿಲಿಯಮ್ಸನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News