ಸಾಮಾಜಿಕ ಸುರಕ್ಷೆ ಯಾರ ಹೊಣೆ?

Update: 2019-07-15 06:31 GMT

ಬಜೆಟ್ ಮಂಡನೆಯೆಂದರೆ ಬೃಹತ್ ಉದ್ಯಮಗಳಿಗೆ ಅನುದಾನ, ತೆರಿಗೆ ವಿನಾಯಿತಿ, ರಸ್ತೆ, ರೈಲುಗಳ ಘೋಷಣೆ, ಪಾನ್‌ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳಿಗಷ್ಟೇ ಸೀಮಿತವಾಗುತ್ತಿದೆ. ಇದೇ ಸಂದರ್ಭದಲ್ಲಿ ಬಡವರು, ರೈತರು, ಆರೋಗ್ಯ, ಮಹಿಳೆ ಎಂದು ಬಜೆಟ್ ಮಾತನಾಡತೊಡಗಿದರೆ ಅದನ್ನು ‘ಓಲೈಕೆಯ ಬಜೆಟ್’ ಎಂದು ವ್ಯಂಗ್ಯವಾಡುವ ಅಪಾಯಕಾರಿ ಮನಸ್ಥಿತಿಯೊಂದು ಕೆಲಸ ಮಾಡತೊಡಗಿದೆ. ಬೃಹತ್ ಉದ್ಯಮಿಗಳನ್ನು ಓಲೈಸಿದರೆ ‘ಅಭಿವೃದ್ಧಿಗೆ ಒತ್ತು’, ಬಡವರು, ತಳಸ್ತರದವರನ್ನು ಓಲೈಸಿದರೆ ‘ಓಟಿನ ರಾಜಕೀಯ’ ಎಂದು ವ್ಯಾಖ್ಯಾನಿಸುವ ಮಾಧ್ಯಮಗಳು ಈ ದೇಶದ ಅಭಿವೃದ್ಧಿಯ ಪರಿಕಲ್ಪನೆಗಳನ್ನೇ ಬದಲಾಯಿಸುತ್ತಿವೆ. ಪರಿಣಾಮವಾಗಿ ದೇಶದ ಬಹುಸಂಖ್ಯಾತ ಜನರು ಅಭಿವೃದ್ಧಿಯ ಜೊತೆಗಿನ ಸಂಬಂಧದಿಂದ ದೂರವಾಗುತ್ತಿದ್ದಾರೆ. ಬಡವರು ಮತ್ತು ದುರ್ಬಲರಿಗೆ ಸಹಾಯ ಹಸ್ತವನ್ನು ಚಾಚುವುದು ಅಭಿವೃದ್ಧಿಯ ಗುರಿಯನ್ನು ಸಾಧಿಸುವಲ್ಲಿ ಸಮರ್ಥ ಪಾತ್ರವಹಿಸುತ್ತದೆ ಎಂದು ವಿಶ್ವಸಂಸ್ಥೆಯೂ ನಂಬಿದೆ. 

ಸಾಮಾಜಿಕ ವಲಯಗಳಿಗೆ ಬಜೆಟ್ ಎಷ್ಟರಮಟ್ಟಿಗೆ ಕೊಡುಗೆಗಳನ್ನು ನೀಡಿದೆ ಎನ್ನುವುದರಿಂದ ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಈ ಬಾರಿಯ ಬಜೆಟನ್ನು ಗಮನಿಸಿದಾಗ, ಸಾಮಾಜಿಕ ಕ್ಷೇತ್ರ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿರುವುದು ಎದ್ದು ಕಾಣುತ್ತದೆ. ಈ ಬಜೆಟ್‌ನಲ್ಲಿ ಬಡತನವನ್ನು ಕೇವಲ ಒಂದು ಬಾರಿ ಉಲ್ಲೇಖಿಸಲಾಗಿದೆ. ಅದೂ ಕಪ್ಪುಹಣ ನಿಯಂತ್ರಿಸುವ ಅಭಿಯಾನದ ಬಗ್ಗೆ ಪ್ರಸ್ತಾವಿಸುವ ಹಿನ್ನೆಲೆಯಲ್ಲಿ. ಇನ್ನು ಉದ್ಯೋಗದ ಕುರಿತು ಕೇವಲ ಉದ್ಯೋಗ ಸೃಷ್ಟಿ, ಕೌಶಲ್ಯ ಗಳಿಕೆ ಮತ್ತು ಸಾಂಪ್ರದಾಯಿಕ ಉದ್ದಿಮೆಗಳ ಮರುಸ್ಥಾಪನೆಗಾಗಿ ಬೆಂಬಲಾತ್ಮಕ ತೆರಿಗೆ ನೀತಿಯ ಘೋಷಣೆಯ ಹಿನ್ನೆಲೆಯಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗ ಸೃಷ್ಟಿಯ ಕುರಿತಂತೆ ಬಜೆಟ್ ಮಾತನಾಡುತ್ತದೆಯಾದರೂ, ಸದ್ಯ ಜನರು ಎದುರಿಸುತ್ತಿರುವ ನಿರುದ್ಯೋಗ ಮತ್ತು ಅದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ಸರಕಾರ ಯಾವುದೇ ಕೊಡುಗೆಗಳನ್ನು ನೀಡಿಲ್ಲ.

ಗ್ರಾಮೀಣ ಸಂಕಟದ ಸಮಯದಲ್ಲಿ ತನ್ನ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿರುವ ಎಂನರೇಗಾದ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಅತೀವವಾಗಿ ಕಾಡುತ್ತಿರುವ, ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ತಾಯಿಯಾಗಿರುವ ಅಪೌಷ್ಟಿಕತೆ ಬಗ್ಗೆಯೂ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ. ಸ್ವಚ್ಛ ಭಾರತ ಅಭಿಯಾನ ಮತ್ತು ಬಜೆಟ್ ದೃಷ್ಟಿಕೋನ ಭಾಷಣದಲ್ಲಿ ಮಾಡಿದ ಸಂಕ್ಷಿಪ್ತ ವಿವರಣೆಯ ಹೊರತು ಆರೋಗ್ಯದ ಬಗ್ಗೆಯೂ ಹೆಚ್ಚಿನ ಉಲ್ಲೇಖವಿಲ್ಲ. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸರಕಾರದ ದೂರದೃಷ್ಟಿಯಲ್ಲಿ ಸಾಮಾಜಿಕ ಸುರಕ್ಷತೆಗೆ ಯಾವ ಸ್ಥಾನವೂ ಇಲ್ಲ ಎನ್ನುವುದು ಅತ್ಯಂತ ಆತಂಕಕಾರಿಯಾಗಿದೆ. ಹಾಗಾದರೆ ಅಂತಿಮವಾಗಿ ಸಾಮಾಜಿಕ ರಕ್ಷಣೆ ಯೋಜನೆಗೆ ಮೀಸಲಿಡಲಾಗಿರುವ ಮೊತ್ತವಾದರೂ ಎಷ್ಟು? ಸಾಮಾಜಿಕ ರಕ್ಷಣೆ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿರುವ ಬಜೆಟ್ ನಿಧಿಯಲ್ಲಿ ಹಿಂದಿನ ವರ್ಷಕ್ಕಿಂತ ಅತ್ಯಲ್ಪ ಏರಿಕೆಯಾಗಿದೆ. ಹಲವು ಕಾರ್ಯಕ್ರಮಗಳಲ್ಲಿ ಈ ಏರಿಕೆ ಹಣದುಬ್ಬರ ದರವನ್ನು ಸರಿದೂಗಿಸಲು ಸಾಕಾಗುವುದಿಲ್ಲ. ಯಾವ ರೀತಿ ನೋಡಿದರೂ ಈ ಕಾರ್ಯಕ್ರಮಗಳು ಸಮಗ್ರ ಮತ್ತು ವಿಶ್ವಸನೀಯ ಸಾಮಾಜಿಕ ಸುರಕ್ಷತೆಯನ್ನು ಸಾಧಿಸಲು ಅಗತ್ಯವಿರುವ ಮಾನದಂಡಕ್ಕೆ ಸರಿಹೊಂದುವುದಿಲ್ಲ. ಅನೇಕ ಕಾರ್ಯಕ್ರಮಗಳಲ್ಲಿ ಉಂಟಾಗಿರುವ ಗಂಭೀರ ಲೋಪಗಳನ್ನು ಸರಿಪಡಿಸುವ ಅವಕಾಶವೂ ಈ ಬಜೆಟ್‌ನಲ್ಲಿ ಇಲ್ಲ.

ಉದಾಹರಣೆಗೆ, ವೃದ್ಧರಿಗೆ ಮತ್ತು ವಿಧವೆಯರಿಗೆ ಈಗಲೂ 200 ರೂ. ಕನಿಷ್ಠ ಪಿಂಚಣಿ ನೀಡಲಾಗುತ್ತಿದ್ದು, 2006ರಿಂದೀಚೆಗೆ ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.ಮಕ್ಕಳ ಅಭಿವೃದ್ಧಿಗಾಗಿ (ಐಸಿಡಿಎಸ್) ಮೀಸಲಿಟ್ಟಿರುವ ಮೊತ್ತ 2018ರಲ್ಲಿ ಏರಿಕೆ ಮಾಡಲಾಗಿರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವೇತನ ನೀಡಲಷ್ಟೇ ಸಾಕಾಗುತ್ತದೆ. ಇದರಿಂದಾಗಿ ಅಂಗನವಾಡಿಗಳ ಮೂಲಭೂತ ಸೌಕರ್ಯ ಮತ್ತು ಸೇವೆಗಳನ್ನು ಸುಧಾರಿಸಲು ಅತ್ಯಲ್ಪ ಮೊತ್ತ ಉಳಿಯುತ್ತದೆ. ಗರ್ಭಿಣಿಯರು ಮತ್ತು ಆರೈಕೆಯಲ್ಲಿರುವ ತಾಯಂದಿರಿಗೆ ನೆರವಾಗುವ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ (ಪಿಎಂಎಂವಿವೈ)ಗೆ 2,500ಕೋ.ರೂ. ಬಿಡುಗಡೆ ಮಾಡಲಾಗಿದೆ (ಕಳೆದ ವರ್ಷದ ಬಜೆಟ್ ಅಂದಾಜಿಗಿಂತ ಶೇ.4 ಹೆಚ್ಚು). ಈ ಯೋಜನೆಯಡಿ ಪ್ರತಿ ತಾಯಿಗೆ ವರ್ಗಾವಣೆಗೊಳ್ಳುವ 5,000ರೂ. (ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ನಿಗದಿಪಡಿಸಿರುವ ಕಡ್ಡಾಯ 6,000ರೂ.ಗೆ ಬದಲಾಗಿ) ಆಕೆಗೆ ತಲುಪುವುದೇ ಅನುಮಾನ ಮತ್ತು ತಲುಪಿದರೂ ಆ ಹಣ ಕೇವಲ ಮೊದಲ ಮಗುವಿಗಷ್ಟೇ ಸೀಮಿತವಾಗಿದೆ. ಎಂನರೇಗಾ ನಿಧಿ 2018-19ರ ಪರಿಷ್ಕೃತ ಅಂದಾಜು 61,084 ಕೋ.ರೂ.ಗಿಂತ ಕೆಳಗಿಳಿದಿದೆ. ಅದೂ ಎಂನರೇಗಾದಡಿ ಮೀಸಲಿಡಲಾಗಿರುವ ಮೊತ್ತಕ್ಕಿಂತ ಹೆಚ್ಚಿನ ಬೇಡಿಕೆ ಕಂಡುಬಂದ ಪರಿಸ್ಥಿತಿಯಲ್ಲಿ.

ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ ಶೇ.2.5ಕ್ಕೆ ಸರಿದೂಗಿಸುವ ಆರೋಗ್ಯ ನೀತಿಯ ಬದ್ಧತೆಯ ಮಿತಿಗಿಂತ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ನಿಧಿ ಬಹಳಷ್ಟು ಕಡಿಮೆಯಿದೆ ಎಂದು ಆರ್ಥಿಕ ತಜ್ಞರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು, ನಿಧಿಯಲ್ಲಿ ಹೆಚ್ಚಿನ ಏರಿಕೆ ಮಾಡಲ್ಪಟ್ಟಿರುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ)ಯನ್ನು ಬಡವರಿಗೆ ಆರೋಗ್ಯ ಸೇವೆ ಒದಗಿಸಿದ ಕಾರಣಕ್ಕೆ ಖಾಸಗಿ ಪೂರೈಕೆದಾರರಿಗೆ ಪರಿಹಾರ ಒದಗಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಅಂದರೆ ಇದರ ಲಾಭವನ್ನು ಜನಸಾಮಾನ್ಯರು ಪಡೆಯುವುದಕ್ಕಿಂತ ಹೆಚ್ಚಾಗಿ ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳು ತನ್ನದಾಗಿಸಿಕೊಳ್ಳುವುದೇ ಅಧಿಕ.

ಈ ಬಜೆಟ್‌ನಲ್ಲಿ ಸಮಗ್ರ ಸಾಮಾಜಿಕ ಸುರಕ್ಷತೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕುತೂಹಲಕಾರಿ ಅಂಶವೆಂದರೆ, ಸಾಮಾಜಿಕ ಕಲ್ಯಾಣ ಎಂಬ ಪದವನ್ನು ಈ ಬಜೆಟ್ ಭಾಷಣದಲ್ಲಿ, ಸ್ವಸಹಾಯ ಸಂಘಗಳು ಬಂಡವಾಳ ಮಾರುಕಟ್ಟೆಯಿಂದ ನಿಧಿಗಳನ್ನು ಸಂಗ್ರಹಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿ ಬಳಸಲಾಗಿದೆ. ಬಜೆಟ್‌ನ ಅಂಕಿಅಂಶಗಳು ಸರಕಾರ ಹಲವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂಬ ಭಾವನೆಯನ್ನು ಮೂಡಿಸುವಂತಿದೆ. ಆದರೆ ವಾಸ್ತವದಲ್ಲಿ ಅದು ಸಾಮಾಜಿಕ ಸುರಕ್ಷತೆಯಿಂದ ಇನ್ನಷ್ಟು ದೂರವಾಗಿದೆ. ಈ ಬಜೆಟ್‌ನ ಅಂತಿಮ ಪರಿಣಾಮವೆಂದರೆ ಅನಾರೋಗ್ಯ, ಅಪೌಷ್ಟಿಕತೆ, ನಿರುದ್ಯೋಗ ಇತ್ಯಾದಿಗಳು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾರತವನ್ನು ಇನ್ನಷ್ಟು ಕಾಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News