ಧೋನಿಯ ಸ್ಥಿತಿ ಗಪ್ಟಿಲ್ ಗೂ ಬಂತು...!

Update: 2019-07-15 14:55 GMT

ಲಂಡನ್, ಜು.15:   ನ್ಯೂಝಿಲ್ಯಾಂಡ್ ನ ವಿರುದ್ಧ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ಯಲು ಹೋರಾಟ ನಡೆಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಮಾರ್ಟಿನ್ ಗಪ್ಟಿಲ್ ನೇರ  ಎಸೆತದಲ್ಲಿ ರನೌಟಾದ ಹಿನ್ನೆಲೆಯಲ್ಲಿ ಭಾರತದ ಟ್ರೋಫಿ ಗೆಲ್ಲುವ  ಕನಸು ಭಗ್ನಗೊಂಡಿತ್ತು. ಅದೇ ಸ್ಥಿತಿ ನಿನ್ನೆ ರಾತ್ರಿ ಗಪ್ಟಿಲ್ ಗೂ ಬಂತು. ಅವರು ಸೂಪರ್ ಓವರ್ ನಲ್ಲಿ  ರನೌಟಾದ ಹಿನ್ನೆಲೆಯಲ್ಲಿ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಮಣ್ಣುಗೂಡಿತು.

ಭಾರತದ ಘಟಾನುಘಟಿ ಬ್ಯಾಟ್ಸ್ ಮನ್ ಗಳು ಕೈ ಚೆಲ್ಲಿ  ಪೆವಿಲಿಯನ್ ಸೇರಿದಾಗ ಧೋನಿ ಮತ್ತು ರವೀಂದ್ರ ಜಡೇಜ ಹೋರಾಟ ನಡೆಸಿ ಒಂದು ಹಂತಕ್ಕೆ ತಲುಪಿದ್ದರು. ಜಡೇಜರಿಗೆ ಉತ್ತಮ ಬೆಂಬಲ ನೀಡಿದ್ದ ಧೋನಿ ಅಪಾಯಕಾರಿ ಹೊಡೆತಗಳಿಗೆ ಕೈ ಹಾಕಿರಲಿಲ್ಲ. ಜಡೇಜ ನಿರ್ಗಮನದ ಬಳಿಕ ಅವರು ಒತ್ತಡಕ್ಕೊಳಗಾಗಿ  ರನ್ ಕದಿಯಲು ಹೋಗಿ ಗಪ್ಟಿಲ್ ರಿಂದ ರನೌಟಾಗಿದ್ದರು. 2011ರಲ್ಲಿ ಫೈನಲ್ ನಲ್ಲಿ ಏಕಾಂಗಿ  ಹೋರಾಟ ನಡೆಸಿ ಭಾರತಕ್ಕೆ ಚಾಂಪಿಯನ್ ಪಟ್ಟ ತಂದು ಕೊಟ್ಟಿದ್ದರು. ಅದೇ ಹೋರಾಟ ನಡೆಸಲು ಹೋಗಿ ಧೋನಿ ಕೈಸುಟ್ಟುಕೊಂಡಿದ್ದರು. ಭಾರತದ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಗಪ್ಟಿಲ್ ಒಂದು ರೀತಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ನ್ಯೂಝಿಲ್ಯಾಂಡ್ ಪಾಲಿಗೆ ಆ ದಿನ  ಗಪ್ಟಿಲ್  ಹೀರೊ ಆಗಿದ್ದರು. 

ಧೋನಿ ಅಭಿಮಾನಿಗಳು ಹಾಕಿದ ಶಾಪದ ಫಲದಿಂದಲೇ ಗಪ್ಟಿಲ್ ರನೌಟಾದರು ಎಂದು ಧೋನಿ ಅಭಿಮಾನಿಗಳು ಇದೀಗ  ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಭಾರತದ ಅಭಿಮಾನಿಗಳು ಬಗಪ್ಟಿಲ್ -ಧೋನಿ  ರನೌಟಾಗಿರುವ ಫೋಟೊ ಹಾಕಿ  ಟ್ರೋಲ್ ಮಾಡುತ್ತಿದ್ದಾರೆ.

ನ್ಯೂಝಿಲ್ಯಾಂಡ್ ನ್ನು ಫೈನಲ್ ಗೆ ತಲುಪಿಸಿದ ಗಪ್ಟಿಲ್ ಸೂಪರ್ ಓವರ್ ನಲ್ಲಿ ರನೌಟಾದ ಕಾರಣದಿಂದಾಗಿ ಸೂಪರ್ ಓವರ್ ಪಂದ್ಯ ಟೈ ಆಗಿ ನ್ಯೂಝಿಲ್ಯಾಂಡ್ ನ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸು ಈಡೇರಲಿಲ್ಲ. ಲೀಗ್ ಹಂತದಲ್ಲಿ ಪಾಕಿಸ್ತಾನದಷ್ಟೇ ಅಂಕಗಳನ್ನು ಹೊಂದಿದ್ದರೂ, ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ನಲ್ಲಿ ಅವಕಾಶ ಪಡೆದಿದ್ದ ನ್ಯೂಝಿಲ್ಯಾಂಡ್ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡು ಕಡಿಮೆ ಮೊತ್ತವನ್ನು ದಾಖಲಿಸಿದ್ದರೂ, ತನ್ನ ಅತ್ಯುತ್ತಮ ಫೀಲ್ಡಿಂಗ್ ನೆರವಿನಲ್ಲಿ ಭಾರತಕ್ಕೆ ಸೋಲುಣಿಸಿತ್ತು.

ಫೈನಲ್ ನಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲ್ಯಾಂಡ್ 8 ವಿಕೆಟ್ ನಷ್ಟದಲ್ಲಿ 241 ರನ್ ಗಳಿಸಿ, ಇಂಗ್ಲೆಂಡ್  ನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಯತ್ನ ನಡೆಸಿತ್ತು. ಆದರೆ ಕೊನೆಯ ಓವರ್ ನಲ್ಲಿ ಕಳಪೆ ಫೀಲ್ಡಿಂಗ್ ನಿಂದ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತು. ನಾಲ್ಕನೇ ಎಸೆತದಲ್ಲಿ 2 ರನ್ ಬದಲಿಗೆ ಫೀಲ್ಡರ್ ಮಾಡಿಕೊಂಡ ಎಡವಟ್ಟಿನಿಂದಾಗಿ 4 ರನ್ ಹೆಚ್ಚುವರಿ ರನ್ ಸೇರಿದಂತೆ ಒಟ್ಟು 6 ರನ್ (2+4) ನೀಡಿರುವುದು ನ್ಯೂಝಿಲ್ಯಾಂಡ್ ನ ಸೋಲಿಗೆ ಬಹುತೇಕ ಕಾರಣವಾಯಿತು. ಆದರೆ ಇಂಗ್ಲೆಂಡ್  ನ್ನು ಆಲೌಟ್ ಮಾಡಿದ ಹಿನ್ನೆಲೆಯಲ್ಲಿ ಪಂದ್ಯ ರೋಚಕ ಟೈ ನಲ್ಲಿ ಕೊನೆಗೊಂಡಿತು. ಫಲಿತಾಂಶ ನಿರ್ಣಯಿಸಲು ಬಳಿಕ ಸೂಪರ್ ಓವರ್ ಮೊರೆ ಹೋದರೂ, ಸೂಪರ್ ಓವರ್ ನಲ್ಲೂ ಟೈ ಆಗಿ ಕೊನೆಗೆ ಇಂಗ್ಲೆಂಡ್  ಹೆಚ್ಚು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ನೆರವಿನಲ್ಲಿ  ವಿಶ್ವ  ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಝಿಲ್ಯಾಂಡ್ ಸತತ ಎರಡನೇ ಬಾರಿ ಪ್ರಶಸ್ತಿ ಎತ್ತುವ ಅವಕಾಶ ಕೈ ಚೆಲ್ಲಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News